Pay CM: ಪೋಸ್ಟರ್ ಅಂಟಿಸಿದ ಕೈ ನಾಯಕರು; ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಕೆಲವರ ವಿರುದ್ಧ ಎನ್ಸಿಆರ್ ದಾಖಲು
ಅನುಮತಿ ಪಡೆಯದೆ ಏಕಾಏಕಿ ರಸ್ತೆಗೆ ಇಳಿದು ಪೇ ಸಿಎಂ ಪೋಸ್ಟರ್ಗಳನ್ನು ಅಂಟಿಸಿದ ಪ್ರಕರಣ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕೆಲವರು ವಿರುದ್ಧ ಎನ್ಸಿಆರ್ ದಾಖಲಾಗಿದೆ.
ಬೆಂಗಳೂರು: ಅನುಮತಿ ಪಡೆಯದೆ ಏಕಾಏಕಿ ರಸ್ತೆಗೆ ಇಳಿದು ಪೇ ಸಿಎಂ ಪೋಸ್ಟರ್ಗಳನ್ನು ಅಂಟಿಸಿದ ಪ್ರಕರಣ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಸೇರಿದಂತೆ ಕೆಲವರು ವಿರುದ್ಧ ಎನ್ಸಿಆರ್ ದಾಖಲಾಗಿದೆ. ರಾಜ್ಯದಲ್ಲಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ವಿರೋಧ ಪಕ್ಷ ಕಾಂಗ್ರೆಸ್ ಟೀಕಾ ಪ್ರಹಾರ ನಡೆಸುತ್ತಿದ್ದು, ಇದರ ಭಾಗವಾಗಿ ಪೇ ಸಿಎಂ ಪೋಸ್ಟರ್ ಅನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲಾಗುತ್ತಿದೆ. ಇದರ ವಿರುದ್ಧ ಸರ್ಕಾರ ಕ್ರಮ ಕೈಗೊಂಡ ಹಿನ್ನೆಲೆ ಕಾಂಗ್ರೆಸ್ ನಾಯಕರು ಸಭೆ ನಡೆಸಿ ಯಾವುದೇ ಅನುಮತಿ ಪಡೆಯದೆ ಏಕಾಏಕಿ ರಸ್ತೆಗೆ ಇಳಿದು ಪೋಸ್ಟರ್ ಅಂಟಿಸಿದ್ದರು. ಈ ಸಂಬಂಧ ಪೊಲೀಸರು ಎನ್ಸಿಆರ್ ದಾಖಲಿಸಿದ್ದಾರೆ.
ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಪೇ ಸಿಎಂ ಪೋಸ್ಟರ್ ಅಂಟಿಸುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಆಗಮಿಸಿ ನಡೆಸಿದ ಸಭೆಯಲ್ಲಿ ಪೋಸ್ಟರ್ ಅಭಿಯಾನದ ಬಗ್ಗೆ ಚರ್ಚೆ ನಡೆದಿದೆ. ಸಭೆ ಬಳಿಕ ಅನುಮತಿ ಇಲ್ಲದೇ ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಏಕಾಏಕಿ ರಸ್ತೆಗೆ ಬಂದಿದ್ದ ಕೈ ನಾಯಕರು ರೇಸ್ಕೋರ್ಸ್ ಗೋಡೆಗೆ ಪೇ ಸಿಎಂ ಪೋಸ್ಟರ್ ಅಂಟಿಸಿದ್ದರು. ಈ ವೇಳೆ ರಸ್ತೆಯಲ್ಲಿ ಗುಂಪು ಸೇರಿ ಪರಿಣಾಮ ರಸ್ತೆ ಸಂಚಾರಕ್ಕೂ ಅಡಚಣೆ ಉಂಡಾಗಿತ್ತು. ಈ ಹಿಂದೆ ಪೋಸ್ಟರ್ ಅಂಟಿಸಿದ್ದ ಐವರ ವಿರುದ್ಧ ಬಿಬಿಎಂಪಿ ಅಧಿಕಾರಿಗಳ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿತ್ತು.
ವ್ಯಕ್ತಿಗತ ಆರೋಪ ಸರಿಯಲ್ಲವೆಂದ ಕಾರಜೋಳ
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಪೇಸಿಎಂ ಅಭಿಯಾನ ವಿಚಾರವಾಗಿ ಬಾಗಲಕೋಟೆಯಲ್ಲಿ ಹೇಳಿಕೆ ನೀಡಿದ ಸಚಿವ ಗೋವಿಂದ ಕಾರಜೋಳ, ರಾಜಕೀಯ ಆರೋಪಗಳು ಗಾಳಿಯಲ್ಲಿ ಗುಂಡು ಹೊಡಿತಾರೆ ಅದು ಬೇರೆ. ಆದರೆ ಈ ರೀತಿ ವ್ಯಕ್ತಿಗತ ಆರೋಪ ಮಾಡಿದ್ದು ಸರಿಯಲ್ಲ. ಈ ಹಿಂದೆ ಕಮಿಷನ್ ಆರೋಪ ಮಾಡಿದ ಕೆಂಪಣ್ಣ ಗುತ್ತಿಗೆದಾರನೇ ಅಲ್ಲ. 20ವರ್ಷದಿಂದ ಅವರು ಯಾವುದಾದರೂ ಕೆಲಸ ತೆಗೆದುಕೊಂಡಿದ್ದರೆ ತೋರಿಸಿ. ಈ ಕೆಲಸ ಮಾಡಿದ್ದೇನೆ ಮತ್ತು ಇಂತಹ ವ್ಯಕ್ತಿಗೆ ಕಮಿಷನ್ ಕೊಟ್ಟಿದ್ದೇನೆ ಎಂದು ಕೆಂಪಣ್ಣ ದಾಖಲೆ ಸಹಿತ ತೋರಿಸಲಿ. ಈ ಬಗ್ಗೆ ತನಿಖಾ ಸಂಸ್ಥೆ ನೋಟಿಸ್ ಕೊಟ್ಟರೂ ಸಹ ಮಾಹಿತಿಯನ್ನು ಅವರು ನೀಡಿಲ್ಲ. ದೆಹಲಿಯಿಂದಲೂ ತನಿಖೆಗೆ ಕರೆದರೂ ಕೆಂಪಣ್ಣ ಬರಲಿಲ್ಲ. ಅವರು ಯಾವುದೇ ದಾಖಲೆ ಕೊಡದೆ ಸುಳ್ಳು ಆರೋಪ ಮಾಡಿ ಹೋಗುತ್ತಿದ್ದಾರೆ. ಅವರನ್ನು ಕಾಂಗ್ರೆಸ್ ಟೂಲ್ ಅಗಿ ಉಪಯೋಗಿಸುತ್ತಿದ್ದಾರೆ ಎಂದು ಹೇಳಿದರು.
ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೊಡೆದಾಡಬೇಕು, ಆರೋಪದಲ್ಲಿ ಅಲ್ಲ
ಕಾಂಗ್ರೆಸ್ನ ಪೇ ಸಿಎಂ ಕ್ಯಾಂಪೇನ್ ಬಗ್ಗೆ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಕಾಂಗ್ರೆಸ್ ನಾಯಕರು ಪೇ ಸಿಎಂ ಅಂತಾ ಮಾಡಿದ್ದರು. ಈಗ ಪೇ ಟು ಕಾಂಗ್ರೆಸ್ ಮೇಡಂ ಅಂತಾನೂ ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೊಡೆದಾಡಬೇಕೇ ಹೊರತು ಆರೋಪಗಳನ್ನ ಮಾಡುವುದರಲ್ಲಿ ಅಲ್ಲ ಎಂದ ತಿರುಗೇಟು ನೀಡಿದರು. ಜಾತಿ ಜಾತಿ ನಡುವೆ ಎತ್ತಿ ಕಟ್ಟೋದು, ವಿಷ ಬೀಜ ಬಿತ್ತುವುದು, ಒಬ್ಬರಿಗೊಬ್ಬರನ್ನ ನಿಂದಿಸುವುದನ್ನು ಮಾಡುತ್ತಿದ್ದಾರೆ. ಇದನ್ನ ಬಿಡಬೇಕು. ಇನ್ಮೇಲೆ ಅಭಿವೃದ್ಧಿ ಕಾಲ, ಏನಿದ್ದರೂ ಮೋದಿಯದ್ದಷ್ಟೇ ಕಾಲ ಎಂದು ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಹೇಳಿಕೆ ನೀಡಿದರು.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:55 am, Sat, 24 September 22