ನಿತ್ಯಾನಂದ ಸ್ವಾಮೀಜಿಯಂತೆ ಸಿದ್ದರಾಮಯ್ಯಗೂ ಭಕ್ತರಿದ್ದಾರೆ: ಬಿಕೆ ಹರಿಪ್ರಸಾದ್
ಈ ಹಿಂದೆಯೂ ಹಲವು ಬಾರಿ ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ್ ಅವರು ವ್ಯಂಗ್ಯ, ಲೇವಡಿಯ ಮಾತುಗಳನ್ನಾಡಿದ್ದಾರೆ. ಇದೀಗ ನಿತ್ಯಾನಂದ ಸ್ವಾಮೀಜಿಗೆ ಹೋಲಿಸುವ ಮೂಲಕ ಮತ್ತೊಮ್ಮೆ ಕುಹಕವಾಡಿದ್ದಾರೆ.
ಬೆಂಗಳೂರು, ಜನವರಿ 03: ಕೈಲಾಸದ ಸ್ವಾಮೀಜಿ ನಿತ್ಯಾನಂದಗೆ ಹೇಗೆ ಭಕ್ತರಿದ್ದಾರೆಯೋ ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೂ ಭಕ್ತರಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ಎಂಎಲ್ಸಿ ಬಿ.ಕೆ.ಹರಿಪ್ರಸಾದ್ (BK Hariprasad) ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯನವರೇ ರಾಮ, ಇನ್ನು ಅಯೋಧ್ಯೆಯ ರಾಮನನ್ನೇಕೆ ಹೋಗಿ ಪೂಜಿಸಬೇಕು ಎಂದು ಮಾಜಿ ಸಚಿವ ಹೆಚ್ ಆಂಜನೇಯ ನೀಡಿದ್ದ ಹೇಳಿಕೆ ಕುರಿತಾಗಿ ಪ್ರತಿಕ್ರಿಯಿಸಿದ ಹರಿಪ್ರಸಾದ್, ಎಲ್ಲರಿಗೂ ಭಕ್ತರು ಇರುತ್ತಾರೆ. ಕೈಲಾಸ ಆಶ್ರಮದ ನಿತ್ಯಾನಂದ ಸ್ವಾಮೀಜಿಗೂ ಭಕ್ತರಿದ್ದಾರೆ. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಭಕ್ತರಿದ್ದಾರೆ. ಅದನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ.
ಈ ಹಿಂದೆಯೂ ಹಲವು ಬಾರಿ ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ್ ಅವರು ವ್ಯಂಗ್ಯ, ಲೇವಡಿಯ ಮಾತುಗಳನ್ನಾಡಿದ್ದಾರೆ. ಇದೀಗ ನಿತ್ಯಾನಂದ ಸ್ವಾಮೀಜಿಗೆ ಹೋಲಿಸುವ ಮೂಲಕ ಮತ್ತೊಮ್ಮೆ ಕುಹಕವಾಡಿದ್ದಾರೆ.
ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ವಿಚಾರವನ್ನು ಸಮರ್ಥಿಸಿಕೊಂಡ ಹರಿಪ್ರಸಾದ್, ಬಿಜೆಪಿಯ ಹಿರಿಯ ನಾಯಕ ಎಲ್ಕೆ ಅಡ್ವಾಣಿ ಅವರ ಮೇಲೂ ಕೇಸ್ ಇತ್ತು. ಕರಸೇವಕ ಎಂದ ಮಾತ್ರಕ್ಕೆ ಅಪರಾಧ ಪ್ರಕರಣ ಎದುರಿಸುತ್ತಿರುವವರನ್ನೆಲ್ಲ ಬಿಟ್ಟುಬಿಡಲಾಗದು ಎಂದು ಹೇಳಿದ್ದಾರೆ.
30 ವರ್ಷ ಹಿಂದಿನ ಪ್ರಕರಣವನ್ನು ಈಗ ಯಾಕೆ ಕೆದಕಿದ್ದಾರೆ ಎಂಬುದು ಪ್ರಶ್ನೆಯೇ ಅಲ್ಲ. ಅಂಥವರನ್ನು ಇಷ್ಟು ವರ್ಷ ಬಂಧಿಸದೆ ಬಿಟ್ಟಿದ್ದೇ ತಪ್ಪು. ತಪ್ಪೆಸಗಿದ್ದರೆ ಕ್ರಮ ಕೈಗೊಳ್ಳಬೇಕು. ಅಪರಾಧಿಗಳು ಎಂದಿದ್ದರೂ ಅಪರಾಧಿಗಳೇ ಎಂದು ಹರಿಪ್ರಸಾದ್ ಹೇಳಿದ್ದಾರೆ.
ಈ ಮಧ್ಯೆ, ಜನವರಿ 22ರಂದು ಅಯೋಧ್ಯೆಗೆ ತೆರಳುವವರಿಗೆ ಸರ್ಕಾರ ರಕ್ಷಣೆ ನೀಡಬೇಕು. ಗೋಧ್ರಾ ರೀತಿಯ ದುರಂತ ಮತ್ತೆ ಸಂಭವಿಸುವ ಮಾಹಿತಿ ಇದೆ ಎಂದು ಹರಿಪ್ರಸಾದ್ ಹೇಳಿರುವುದು ರಾಜ್ಯ ರಾಜಕೀಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: 22 ರಂದು ಗೋಧ್ರಾ ರೀತಿಯ ಅಪಾಯ ಸಂಭವಿಸುವ ಮಾಹಿತಿ ಇದೆ, ಅಯೋಧ್ಯ ಯಾತ್ರಿಗಳಿಗೆ ಸರ್ಕಾರ ರಕ್ಷಣೆ ನೀಡಲಿ: ಬಿಕೆ ಹರಿಪ್ರಸಾದ್
ಅಹಿತಕರ ಘಟನೆ ನಡೆದರೆ ಹರಿಪ್ರಸಾದ್ ಕಾರಣ: ಸದಾನಂದ ಗೌಡ
ಹರಿಪ್ರಸಾದ್ ಹೇಳಿಕೆ ವಿರುದ್ಧ ಕಿಡಿಕಾರಿರುವ ಬಿಜೆಪಿ ನಾಯಕ ಡಿವಿ ಸದಾನಂದ ಗೌಡ, ಜ. 22ರಂದು ಅಹಿತಕರ ಘಟನೆಗಳು ನಡೆದ್ರೆ ಹರಿಪ್ರಸಾದ್ ಅವರೇ ಕಾರಣ ಎಂದಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಕ್ರಿಯಿಸಿದ ಅವರು, ಕೂಡಲೇ ಕಾಂಗ್ರೆಸ್ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಬಂಧನ ಆಗಬೇಕು. ಹರಿಪ್ರಸಾದ್ ವಿರುದ್ಧ ಕ್ರಮಕ್ಕೆ ಪೊಲೀಸ್ ಆಯುಕ್ತರಿಗೆ ಆಗ್ರಹಿಸುತ್ತೇನೆ. ಜವಾಬ್ದಾರಿ ಸ್ಥಾನದಲ್ಲಿರುವ ಬಿ.ಕೆ.ಹರಿಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ