10 ರಿಂದ 10ಕ್ಕೆ ಕಾಂಗ್ರೆಸ್ ಅಧಿಕಾರ ವರ್ಗಾವಣೆ. ‘ನಂ -10’ ಕಾಂಗ್ರೆಸ್ ಗೇಮ್ ಚೇಂಜರ್ ನಿವಾಸದ ಗುಟ್ಟೇನು?
ಎಐಸಿಸಿ ಅಧ್ಯಕ್ಷರಾಗುತ್ತಿರುವ ಬಗ್ಗೆ ಖರ್ಗೆ ಅಭಿಮಾನಿಗಳು, ಬೆಂಬಲಿಗರಲ್ಲಿ ಸಂತಸ ಮನೆ ಮಾಡಿದೆ. ರಾಹುಲ್‌ಗಾಂಧಿಯವರ ನಾಯಕತ್ವದ ವಿರುದ್ಧ ಬಂಡೆದಿದ್ದ ಜಿ 23 ನಾಯಕರು ಖರ್ಗೆಯವರಿಗೆ ಸಮ್ಮತಿ ಸೂಚಿಸಿದ್ದಾರೆ.
ಎಐಸಿಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಗೆಲುವು ಖಚಿತವಾಗಿದೆ. ಖರ್ಗೆಯವರ ವಿರುದ್ದ ಶಶಿ ತರೂರ್ (Shashi tharoor) ಸ್ಫರ್ಧೆ ಮಾಡಿದ್ದರೂ ತರೂರ್ ಸಿಂಬಾಲಿಕ್ ಫೈಟ್ ನೀಡಲಿದ್ದಾರೆ. ರಾಜ್ಯಸಭೆಯ ವಿರೋಧಪಕ್ಷದ ನಾಯಕನಾಗಿದ್ದ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಖರ್ಗೆ ಸಾರಥಿಯಾಗುವುದು ಬಹುತೇಕ ಖಚಿತ .ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ (congress president election) ಇತಿಹಾಸದಲ್ಲಿ ಐದನೇ ಬಾರಿ ಮಾತ್ರ ಮತದಾನ ನಡೆಯುತ್ತಿದೆ. ಉಳಿದ ಅಧ್ಯಕ್ಷರು ಆಯಾ ಕಾಲದಲ್ಲಿ ಅವಿರೋಧವಾಗಿ ಆಯ್ಕೆಯಾದವರೇ ಆಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರನ್ನು ಎಐಸಿಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವುದು ಗಾಂಧಿ ಕುಟುಂಬಕ್ಕೆ ಸುಲಭದ ಕೆಲಸವಾಗಿತ್ತು. ಅಭ್ಯರ್ಥಿಯನ್ನಾಗಿಸುವ ಪ್ರಸ್ತಾಪಕ್ಕೆ ಮರು ಮಾತನಾಡದೇ ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆಯಿತ್ತು. ಗಾಂಧಿ ಕುಟುಂಬದ ನಂಬಿಕೆ ಹುಸಿ ಮಾಡದೆ ಖರ್ಗೆಯವರು ಸರಕಾರಿ ಸೌಲಭ್ಯ ,ಗೌರವವಿರುವ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಐಸಿಸಿ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷರಾಗುತ್ತಿರುವ ಬಗ್ಗೆ ಖರ್ಗೆ ಅಭಿಮಾನಿಗಳು, ಬೆಂಬಲಿಗರಲ್ಲಿ ಸಂತಸ ಮನೆ ಮಾಡಿದೆ. ರಾಹುಲ್‌ಗಾಂಧಿಯವರ ನಾಯಕತ್ವದ ವಿರುದ್ಧ ಬಂಡೆದಿದ್ದ ಜಿ 23 ನಾಯಕರು ಖರ್ಗೆಯವರಿಗೆ ಸಮ್ಮತಿ ಸೂಚಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯವರು ನಾಮಪತ್ರಸಲ್ಲಿಸುವುದಕ್ಕೂ ಒಂದು ದಿನ ಹಿಂದೆ ಯಾರು ಸ್ಪರ್ಧೆ ಮಾಡುತ್ತಾರೆ ಎಂಬ ಕುತೂಹಲ ದೆಹಲಿ ಪತ್ರಕರ್ತ ವಲಯದಲ್ಲಿ ಇತ್ತು. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು . ದಿಗ್ವಿಜಯ್ ಸಿಂಗ್ ನಾಮಪತ್ರ ಸಲ್ಲಿಸುವುದು ಪಕ್ಕಾ ಆಗಿರಲಿಲ್ಲ. ನಾಳೆ ಖರ್ಗೆ ನಾಮಪತ್ರ ಸಲ್ಲಿಸುತ್ತಾರೆ ಎಂದರೆ ಇಂದು ಸಂಜೆ 5 ಗಂಟೆಗೆ ಸ್ಪರ್ಧೆ ಬಗ್ಗೆ ತೀರ್ಮಾನವಾಗಿತ್ತು. ಭಾರತ್ ಜೋಡೋ ಯಾತ್ರೆಯಲ್ಲಿ ಕೇರಳದಿಂದ ಕರ್ನಾಟಕ ಗಡಿ ತಲುಪಿದ್ದ ರಾಹುಲ್ ಗಾಂಧಿಯವರು ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರ ಜೊತೆ ವಿಡಿಯೊ ಸಂವಾದ ನಡೆಸಿ ಖರ್ಗೆಯವರ ಹೆಸರು ಫೈನಲ್ ಮಾಡಿದರು. ಸೋನಿಯಾ ನಿವಾಸ 10 ಜನಪತ್ ನಿಂದ 10 ರಾಜಾಜಿ ಮಾರ್ಗ್ ಖರ್ಗೆಯವರ ನಿವಾಸಕ್ಕೆ ಸಂದೇಶ ತಲುಪಿಸಿದರು.
’10 to 10′ ಖರ್ಗೆ ಆಪ್ತರ ಒಗಟು ಅರ್ಥ ಮಾಡಿಕೊಳ್ಳದ ಪತ್ರಕರ್ತರು
ಮಲ್ಲಿಕಾರ್ಜುನ ಖರ್ಗೆಯವರಿಗೆ ಎಐಸಿಸಿ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧೆ ಮಾಡುವಂತೆ ಸೂಚನೆ ಸಿಗುತ್ತಿದ್ದಂತೆ ಸೂಚಕರ ಸಹಿ ಹಾಕಿಸಲು ಕಾಂಗ್ರೆಸ್ ನಾಯಕರು ಕಾರ್ಯಪ್ರವೃತ್ತರಾಗದ್ದರೂ ದೆಹಲಿ ಪತ್ರಕರ್ತರಿಗೆ ಖರ್ಗೆಯವರ ಸ್ಪರ್ಧೆ ಗುಟ್ಟು ಗೊತ್ತಿರಲಿಲ್ಲ. ಮಾಹಿತಿಯ ಹಿಂದೆ ಬಿದ್ದ ಪತ್ರಕರ್ತರಿಗೆ ನಾಯಕರೊಬ್ಬರು ಆಫ್ ದಿ ರೆಕಾರ್ಡ್ ನಲ್ಲಿ 10 ರಿಂದ 10ಕ್ಕೆ ಎಂದಷ್ಟೇ ಹೇಳಿ ಹೋದರು. ಈ ಒಗಟು ಪರ್ತಕರ್ತರಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಒಗಟು ಹೇಳಿ ಹೋಗಿದ್ದ ನಾಯಕರು ಮರುದಿನ ಸಿಕ್ಕಾಗ ಅರ್ಥ ಮಾಡಿಕೊಂಡಿದ್ದರೆ ನಾವೇ ಫಸ್ಟ್ ಬ್ರೇಕ್ ಮಾಡಬಹುದಿತ್ತಲ್ಲ ಎಂದು ಪತ್ರಕರ್ತರು ಕೈ ಹಿಸುಕಿಕೊಳ್ಳುತ್ತಿದ್ದರು.
ಜನಪತ್ 10ರಿಂದ ರಾಜಾಜಿ ಮಾರ್ಗ 10ಕ್ಕೆ ಎಐಸಿಸಿ ಅಧ್ಯಕ್ಷೀಯ ಸ್ಥಾನ ವರ್ಗಾವಣೆ
ಸದ್ಯ ಎಐಸಿಸಿ ಅಧ್ಯಕ್ಷೆಯಾಗಿರುವ ಸೋನಿಯಾಗಾಂಧಿಯವರ ನಿವಾಸ ದೆಹಲಿಯ 10 ಜನಪತ್ ನಿವಾಸ, ಮುಂದಿನ ಎಐಸಿಸಿ ಅಧ್ಯಕ್ಷರಾಗಲಿರುವ ಮಲ್ಲಿಕಾರ್ಜುನ ಖರ್ಗೆಯವರ ನಿವಾಸ ರಾಜಾಜಿ ಮಾರ್ಗ್ 10 ನಿವಾಸ. 10 ರಿಂದ 10ಕ್ಕೆ ಕಾಂಗ್ರೆಸ್ ನ ಅತ್ಯುನ್ನತ ಅಧಿಕಾರ ವರ್ಗಾವಣೆಯಾಗಲಿದೆ. ಕೇವಲ ಪದವಿ ಬದಲಾಗುವುದೋ ಅಥವಾ ಅಧಿಕಾರ ಚಲಾಯಿಸಲು ಸ್ವಾತಂತ್ರ್ಯ ಸಿಗುವುದೋ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ರಾಜಾಜಿ ಮಾರ್ಗ್ 10 ಇಬ್ಬರು ಮಾಜಿರಾಷ್ಟ್ರಪತಿಗಳು ಇದ್ದ ಮನೆ
ಮಲ್ಲಿಕಾರ್ಜುನ ಖರ್ಗೆಯವರು ಇರುವ ರಾಜಾಜಿ ಮಾರ್ಗ್ 10 ನಿವಾಸದಲ್ಲಿ ಇಬ್ಬರು ಮಾಜಿ ರಾಷ್ಟ್ರಪತಿಗಳು ವಾಸವಾಗಿದ್ದರು. ಅಬ್ದುಲ್ ಕಲಾಂ ಹಾಗೂ ಪ್ರಣವ್ ಮಖರ್ಜಿಯವರು ರಾಷ್ಟ್ರಪತಿ ಹುದ್ದೆಯಿಂದ ಕೆಳಗಿಳಿದ ಬಳಿಕ ಇದೇ ಮನೆಯಲ್ಲಿದ್ದರು. ಪ್ರಣಬ್ ಮುಖರ್ಜಿಯವರಿಗಿಂತ ಮೊದಲು ದೇಶದ ಜನಪ್ರಿಯ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಕೂಡ 2015ರಲ್ಲಿ ನಿಧನ ಹೊಂದುವವರೆಗೀ ಇದೇ ಬಂಗಲೆಯಲ್ಲಿ ವಾಸವಾಗಿದ್ದರು. ರಾಷ್ಟ್ರಪತಿಗಳ ಅವಧಿ ಮುಗಿದ ನಂತರ ಅದೇ ಬಂಗಲೆಯನ್ನು ಕಲಾಂ ಅವರಿಗೆ ಮಂಜೂರು ಮಾಡಲಾಗಿತ್ತು. ಈ ಬಂಗಲೆಯ ನೆಲಮಹಡಿಯಲ್ಲಿ ಗ್ರಂಥಾಲಯವಿದ್ದು, ಅದರೊಂದಿಗೆ ಓದುವ ಸ್ಥಳವನ್ನು ಹೊಂದಿದೆ. ಇಲ್ಲಿ ವಾಸಿಸುವ ಖ್ಯಾತನಾಮರ ಪುಸ್ತಕ ಪ್ರೇಮಕ್ಕಾಗಿ ಇದನ್ನು ನಿರ್ಮಿಸಲಾಗಿದೆ. ಇಲ್ಲಿನ ಗ್ರಂಥಾಲಯವನ್ನು ಶ್ರೀಮಂತಗೊಳಿಸಿದ ಕೀರ್ತಿ ಕಲಾಂ ಅವರಿಗೆ ಸಲ್ಲುತ್ತದೆ.
10 ರಾಜಾಜಿ ಮಾರ್ಗದ ಹೆಸರು ಮೊದಲಿನಿಂದಲೂ ಮಹಾನ್ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದೆ. ಈ ಬಂಗಲೆಯಲ್ಲಿ ಹೊಸದಿಲ್ಲಿಯ ಲುಟ್ಯೆನ್ಸ್ ವಲಯವನ್ನು ವಿನ್ಯಾಸಗೊಳಿಸಿದ ಎಡ್ವಿನ್ ಲುಟ್ಯೆನ್ಸ್ ಸ್ವತಃ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಅವರನ್ನು ಆಧುನಿಕ ದೆಹಲಿಯ ಮುಖ್ಯ ವಾಸ್ತುಶಿಲ್ಪಿ ಎಂದು ಪರಿಗಣಿಸಲಾಗಿದೆ. ಅವರು ರಾಷ್ಟ್ರಪತಿ ಭವನ, ಸಂಸತ್ತಿನ ಭವನದಿಂದ ನಾರ್ತ್ ಬ್ಲಾಕ್-ಸೌತ್ ಬ್ಲಾಕ್‌ನಿಂದ ಕನ್ನಾಟ್ ಪ್ಲೇಸ್‌ನಿಂದ ಸಂಪೂರ್ಣ ಲುಟ್ಯೆನ್ಸ್ ವಲಯವನ್ನು ವಿನ್ಯಾಸಗೊಳಿಸಿದವರು. ಇಂದಿಗೂ ಸಹ, ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ರಾಜಾಜಿ ಮಾರ್ಗದ 2 ನೇ ಸಂಖ್ಯೆಯ ಭವ್ಯವಾದ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ.
-ಹರೀಶ್ ಜಿ.ಆರ್, ಹಿರಿಯ ವರದಿಗಾರ, ನವದೆಹಲಿ