ಬೆಂಗಳೂರು: ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಧರಣಿ ನಡೆಸುತ್ತಿದೆ. ವಿಧಾನಸೌಧ ಹಾಗೂ ವಿಧಾನ ಪರಿಷತ್ನಲ್ಲಿ ಈಶ್ವರಪ್ಪ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಮಧ್ಯೆ, ವಿಧಾನಸೌಧದ ಹೊರಗೂ ಹೋರಾಟಕ್ಕೆ ಕಾಂಗ್ರೆಸ್ ನಾಯಕರು (Congress Peotest) ಕರೆ ನೀಡಿದ್ದಾರೆ. ನಾಳೆ (ಫೆಬ್ರವರಿ 21) ರಾಜ್ಯಾದ್ಯಂತ ಈಶ್ವರಪ್ಪ (KS Eshwarappa) ವಿರುದ್ಧ ಪ್ರತಿಭಟನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಕರೆ ನೀಡಿದ್ದಾರೆ. ನಾಳೆ ತಾಲೂಕು ಕೇಂದ್ರ, ವಿಧಾನಸಭಾ ಕ್ಷೇತ್ರದಲ್ಲಿ ಧರಣಿಗೆ ಕರೆ ನೀಡಲಾಗಿದೆ.
ಈಶ್ವರಪ್ಪ ವಜಾಗೊಳಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಧರಣಿ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ. ಅಹೋರಾತ್ರಿ ಧರಣಿಗೆ ಸರ್ಕಾರ ಮಣಿಯುವ ಸೂಚನೆ ಇಲ್ಲ. ನಾಳೆ ಅಧಿವೇಶನದಲ್ಲಿ ಕಾಂಗ್ರೆಸ್ ಧರಣಿ ಮುಂದುವರಿಯಲಿದೆ. ಇದೇ ಸಮಯದಲ್ಲಿ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಕೈ ಪಾಳಯ ಮುಂದಾಗಿದೆ. ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನ ನಡೆಸಲಾಗುತ್ತಿದೆ. ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಮೂಲಕ ಕಾಂಗ್ರೆಸ್ ಧರಣಿ ಕೈಗೊಂಡಿದೆ.
ಸಚಿವ ಕೆ.ಎಸ್ ಈಶ್ವರಪ್ಪ ಕೇಸರಿ ಬಾವುಟವೇ ಮುಂದೊಂದು ದಿನ ರಾಷ್ಟ್ರಧ್ವಜ ಆಗಬಹುದು ಎಂಬ ಬಗ್ಗೆ ಹೇಳಿಕೆ ನೀಡಿದ್ದರು. ಈಗಲ್ಲ. 100, 200 ವರ್ಷಗಳ ನಂತರ ಹೀಗಾಗಬಹುದು ಎಂದು ಹೇಳಿಕೆ ನೀಡಿ ಸಮರ್ಥಿಸಿಕೊಂಡಿದ್ದರು. ಈ ಕುರಿತು ಕಾಂಗ್ರೆಸ್ ಸದನದಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ಮಾಡಿತ್ತು. ಇದೀಗ, ಅಹೋರಾತ್ರಿ ಧರಣಿ ನಡೆಸುತ್ತಿದೆ.
ಕಾಂಗ್ರೆಸ್ ಹೈಕಮಾಂಡ್ನಿಂದ ರಾಜ್ಯ ಕಾಂಗ್ರೆಸ್ ನಾಯಕರಿಗೆ ಬುಲಾವ್
ಈ ಮಧ್ಯೆ, ಕಾಂಗ್ರೆಸ್ ಹೈಕಮಾಂಡ್ನಿಂದ ಕರ್ನಾಟಕ ರಾಜ್ಯ ಕಾಂಗ್ರೆಸ್ ನಾಯಕರಿಗೆ ಬುಲಾವ್ ಬಂದಿದೆ. ಫೆಬ್ರವರಿ 25ಕ್ಕೆ ದೆಹಲಿಗೆ ಆಗಮಿಸುವಂತೆ ಹೈಕಮಾಂಡ್ ರಾಜ್ಯ ಕೈ ನಾಯಕರಿಗೆ ಬುಲಾವ್ ನೀಡಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಕಾಂಗ್ರೆಸ್ನ ನಾಯಕರಿಗೆ ಹೈಕಮಾಂಡ್ ಆಹ್ವಾನ ನೀಡಿದೆ.
ಮುಂದಿನ 2023ರ ವಿಧಾನ ಸಭೆ ಚುನಾವಣೆ ತಯಾರಿ, ವಿಧಾನ ಪರಿಷತ್ ವಿಪಕ್ಷ ಸ್ಥಾನ, ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ವಿಚಾರವಾಗಿ ರಾಜ್ಯ ನಾಯಕರ ನಡುವೆ ಅಸಮಾಧಾನ. ಪಕ್ಷದ ಆಂತರಿಕ ವಿಚಾರ, ಸಂಘಟನೆ ವಿಚಾರ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಪಕ್ಷದೊಳಗಿನ ಗುಂಪುಗಾರಿಕೆ, ಭಿನ್ನಾಭಿಪ್ರಾಯ ಶಮನಗೊಳಿಸುವ ಸಂಬಂಧ ಚರ್ಚೆ ಸಾಧ್ಯತೆ ಇದೆ. ಕಾಂಗ್ರೆಸ್ನ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ಪಡೆದು ಪಕ್ಷ ಸಂಘಟನೆ ಕೈಗೊಳ್ಳಲು ತೀರ್ಮಾನ ಮಾಡಲಾಗಿದೆ.
ಹಿಜಾಬ್ ಸೇರಿದಂತೆ ರಾಜ್ಯ ರಾಜಕೀಯದಲ್ಲಿ ಬೆಳವಣಿಗೆಗೆ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಪದಾಧಿಕಾರಿಗಳ, ಸದಸ್ಯರ ಅಂತಿಮ ಪಟ್ಟಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಚರ್ಚೆ ನಡೆಸಲಿದೆ. ಫೆಬ್ರವರಿ 25, 26, ಎರಡರಿಂದ ಮೂರು ದಿನಗಳ ಕಾಲ ದೆಹಲಿಯಲ್ಲೇ ರಾಜ್ಯ ಕಾಂಗ್ರೆಸ್ ನಾಯಕರು ಠಿಕಾಣಿ ಹೂಡಲಿದ್ದಾರೆ.
ಫೆಬ್ರವರಿ 25 ರಂದು ಹೈಕಮಾಂಡ್ ಭೇಟಿಗೆ ಆಹ್ವಾನ ನೀಡಿದ್ದಾರೆ. ನನಗೆ ಹಾಗೂ ಪಕ್ಷದ ಅಧ್ಯಕ್ಷರಿಗೆ, ಕಾರ್ಯಾಧ್ಯಕ್ಷರು, ಹಿರಿಯ ನಾಯಕರಿಗೆ ಹೈಕಮಾಂಡ್ ಆಹ್ವಾನ ನೀಡಿದೆ. 2023ರ ಚುನಾವಣೆ ಹಿನ್ನೆಲೆ ಚರ್ಚೆ ಮಾಡಲು ಕರೆದಿದ್ದಾರೆ ಎಂದು ವಿಧಾನಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಸರ್ಕಾರದ ಒಬ್ಬ ದೇಶದ್ರೋಹಿ ಸಚಿವರನ್ನ ಬಿಜೆಪಿ ಸಮರ್ಥಿಸಿಕೊಂಡಿದೆ, ಈಶ್ವರಪ್ಪ ರಾಜೀನಾಮೆ ನೀಡಲೇಬೇಕು -ಡಿಕೆಶಿ
ಇದನ್ನೂ ಓದಿ: ಭದ್ರಾವತಿ: ಶಿವಕುಮಾರ್ ಗೂಂಡಾ, ಸಿದ್ದರಾಮಯ್ಯ ಜಾತಿವಾದಿ ಅಂದರು ಸಚಿವ ಕೆ ಎಸ್ ಈಶ್ವರಪ್ಪ
Published On - 11:42 am, Sun, 20 February 22