ಅಶ್ವತ್ಥ ನಾರಾಯಣ ಹೇಳಿಕೆ ಖಂಡಿಸಿ ನಾಳೆ ಕಾಂಗ್ರೆಸ್​ನಿಂದ ಸಿಎಂ ಬೊಮ್ಮಾಯಿ ಮನೆಗೆ ಮುತ್ತಿಗೆ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 16, 2023 | 9:30 PM

ಸಚಿವ ಅಶ್ವತ್ಥ್ ನಾರಾಯಣ ಹೇಳಿಕೆ ಖಂಡಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಾಳೆ(ಫೆ. 17) ಪ್ರತಿಭಟನಾ ರ‍್ಯಾಲಿ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ.

ಅಶ್ವತ್ಥ ನಾರಾಯಣ ಹೇಳಿಕೆ ಖಂಡಿಸಿ ನಾಳೆ ಕಾಂಗ್ರೆಸ್​ನಿಂದ ಸಿಎಂ ಬೊಮ್ಮಾಯಿ ಮನೆಗೆ ಮುತ್ತಿಗೆ
ಸಿಎಂ ಬೊಮ್ಮಾಯಿ
Image Credit source: asianetnews.com
Follow us on

ಬೆಂಗಳೂರು: ಸಚಿವ ಅಶ್ವತ್ಥ್ ನಾರಾಯಣ (CN Ashwath Narayan) ಆಡಿದ ಆ ಒಂದೇ ಒಂದು ಮಾತಿನಿಂದ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ. ಕಾಂಗ್ರೆಸ್​ ನಾಯಕರು ಅಶ್ವತ್ಥ್ ನಾರಾಯಣ ವಿರುದ್ಧ ಕಿಡಿಕಾರುತ್ತಿದ್ದಾರೆ. ತಮ್ಮ ವಿರುದ್ಧ ನೀಡಿದ ಹೇಳಿಕೆಗೆ ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಪ್ರತಿಯಾಗಿ ವಾಗ್ದಾಳಿ ಮಾಡುತ್ತಿದ್ದಾರೆ. ಈ ವಿಚಾರವಾಗಿ ಸಚಿವ ಅಶ್ವತ್ಥ್ ನಾರಾಯಣ ಹೇಳಿಕೆ ಖಂಡಿಸಿ ನಾಳೆ(ಫೆ. 17) ಪ್ರತಿಭಟನಾ ರ‍್ಯಾಲಿ ನಡೆಸಿ ಸಿಎಂ ಬಸವರಾಜ ಬೊಮ್ಮಾಯಿ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಯಲಿದ್ದು, ಬೆಳಗ್ಗೆ 11 ಗಂಟೆಗೆ ರೇಸ್​ ಕೋರ್ಸ್​ ರಸ್ತೆಯ ಕಾಂಗ್ರೆಸ್ ಭವನದಿಂದ ಆರಂಭವಾಗಲಿದೆ. ಬಳಿಕ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ ಸಿಎಂ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲಾಗುತ್ತಿದೆ. ಬೆಂಗಳೂರು ದಕ್ಷಿಣ, ಉತ್ತರ, ಕೇಂದ್ರ ಜಿಲ್ಲಾ ಘಟಕಗಳ ಅಧ್ಯಕ್ಷರುಗಳು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ.

ಅಶ್ವತ್ಥ್ ನಾರಾಯಣ ಬಂಧನಕ್ಕೆ ಜಮೀರ್ ಒತ್ತಾಯ 

ಅಶ್ವತ್ಥ್ ನಾರಾಯಣ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಬೇಕು. ಅವರನ್ನು ತಕ್ಷಣ ಬಂಧಿಸಬೇಕು ಎಂದು ಟ್ವೀಟ್ ಮೂಲಕ ಮಾಜಿ ಸಚಿವ ಜಮೀರ್ ಅಹ್ಮದ್​ಖಾನ್​ ಒತ್ತಾಯಿಸಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯ ಕಾರಣ ಅಶ್ವತ್ಥ್ ನಾರಾಯಣ ಹತ್ಯೆಗೆ ಕರೆ ನೀಡಿದ್ದಾರೆ. ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಬೇಕು. ಸಿದ್ದರಾಮಯ್ಯರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಜಮೀರ್ ಅಹ್ಮದ್​ಖಾನ್​ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಅಶ್ವತ್ಥ್ ನಾರಾಯಣ ಬಹಿರಂಗವಾಗಿ ಕ್ಷಮೆಯಾಚಿಸಬೇಕು: ಇಲ್ಲದಿದ್ರೆ ಹೋರಾಟದ ಎಚ್ಚರಿಕೆ ನೀಡಿದ ಜಮೀರ್

ಸಚಿವ ಡಾ.ಅಶ್ವತ್ಥ್ ನಾರಾಯಣ ವಿರುದ್ಧ ರಾಜ್ಯಪಾಲರಿಗೆ ದೂರು 

ಇನ್ನು ಸಚಿವ ಡಾ.ಅಶ್ವತ್ಥ್ ನಾರಾಯಣ ವಿರುದ್ಧ ರಾಜ್ಯಪಾಲರಿಗೆ ಕಲಬುರಗಿ ಜಿಲ್ಲೆ ಆಳಂದ ಮಾಜಿ ಶಾಸಕ ಬಿ.ಆರ್.ಪಾಟೀಲ್​ದೂರು ನೀಡಿದ್ದಾರೆ. ಸಿದ್ದರಾಮಯ್ಯ ಕೊಲೆಗೆ ಅಶ್ವತ್ಥ್ ನಾರಾಯಣ ಪ್ರಚೋದನೆ ನೀಡಿದ್ದಾರೆ. ಸಂವಿಧಾನ‌ ಬದ್ಧವಾಗಿ ಕಾರ್ಯ ನಿರ್ವಹಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ಮೂಲ ತಳಹದಿಯನ್ನೇ ಉಲ್ಲಂಘಿಸಿದ್ದಾರೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕದಡಲು ಯತ್ನಿಸಿದ್ದಾರೆ. ಐಪಿಸಿ ಸೆಕ್ಷನ್ 353, 504, 506ರ ಅಡಿಯಲ್ಲಿ ಅಪರಾಧವೆಸಗಿದ್ದಾರೆ. ಕೂಡಲೇ ಅಶ್ವತ್ಥ್ ನಾರಾಯಣರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ, ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ರಾಜ್ಯಪಾಲ ಗೆಹ್ಲೋಟ್​ಗೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: ಟಿಪ್ಪು – ಸಿದ್ದರಾಮಯ್ಯ ಹೋಲಿಕೆಯ ಮಾತುಗಳು ಸಾಂದರ್ಭಿಕ; ಅಶ್ವಥ್ ನಾರಾಯಣ ಸ್ಪಷ್ಟನೆ

ಅಶ್ವಥ್ ನಾರಾಯಣ ಸ್ಪಷ್ಟನೆ

ಮಂಡ್ಯದಲ್ಲಿ ಟಿಪ್ಪು ಸುಲ್ತಾನ್ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಹೋಲಿಸಿ ಆಡಿರುವ ಮಾತುಗಳು ಸಾಂದರ್ಭಿಕ ಪ್ರಸ್ತಾಪವೇ ವಿನಃ ಯಾವುದೇ ದುರುದ್ದೇಶದ ಮಾತುಗಳಲ್ಲ ಎಂದು ಸಚಿವ ಅಶ್ವಥ್ ನಾರಾಯಣ ಸ್ಪಷ್ಟನೆ ನೀಡಿದ್ದಾರೆ. ಹೇಳಿಕೆಯು ಭಾರೀ ವಿವಾದದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಸಚಿವರು ಟ್ವೀಟ್ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರನ್ನು ನರ ಹಂತಕ ಎನ್ನುವುದು, ಮುಖ್ಯಮಂತ್ರಿ ಅವರಿಗೆ ಮನೆ ಹಾಳಾಗ ಎನ್ನುವುದು ಸಿದ್ದರಾಮಯ್ಯ ಅವರ ಸಂಸ್ಕೃತಿ ಆಗಿರಬಹುದು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಬೇಕು ಎನ್ನುವ ಅರ್ಥದಲ್ಲಷ್ಟೇ ನಾನು ಆ ಮಾತು ಆಡಿದ್ದೇನೆ. ಅದರಿಂದ ಅವರಿಗೆ ನೋವುಂಟಾಗಿದ್ದಾರೆ ವಿಷಾದಿಸುತ್ತೇನೆ ಎಂದು ಸಚಿವರು ಟ್ವೀಟ್​​ನಲ್ಲಿ ಉಲ್ಲೇಖಿಸಿದ್ದಾರೆ.

ರಾಜದ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:30 pm, Thu, 16 February 23