ಅಶ್ವತ್ಥ್ ನಾರಾಯಣ ಬಹಿರಂಗವಾಗಿ ಕ್ಷಮೆಯಾಚಿಸಬೇಕು: ಇಲ್ಲದಿದ್ರೆ ಹೋರಾಟದ ಎಚ್ಚರಿಕೆ ನೀಡಿದ ಜಮೀರ್

ಅಶ್ವತ್ಥ್ ನಾರಾಯಣ ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಬೇಕು. ಸಿದ್ದರಾಮಯ್ಯರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಜಮೀರ್ ಅಹ್ಮದ್​ಖಾನ್​ ಎಚ್ಚರಿಕೆ ನೀಡಿದ್ದಾರೆ.

ಅಶ್ವತ್ಥ್ ನಾರಾಯಣ ಬಹಿರಂಗವಾಗಿ ಕ್ಷಮೆಯಾಚಿಸಬೇಕು: ಇಲ್ಲದಿದ್ರೆ ಹೋರಾಟದ ಎಚ್ಚರಿಕೆ ನೀಡಿದ ಜಮೀರ್
ಸಿದ್ಧರಾಮಯ್ಯ, ಅಶ್ವಥ್ ನಾರಾಯಣ, ಜಮೀರ್ ಅಹ್ಮದ್​ಖಾನ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Feb 16, 2023 | 4:22 PM

ಬೆಂಗಳೂರು: ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯ (Siddaramaiah)ರನ್ನು ಹೊಡೆದು ಹಾಕೋಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹತ್ಯೆಗೆ ಅಶ್ವತ್ಥ್ ನಾರಾಯಣ ಬಹಿರಂಗ ಕರೆ ನೀಡಿದ್ದರು. ಸದ್ಯ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ವಿಚಾರವಾಗಿ ಅಶ್ವತ್ಥ್  (CN Ashwath Narayan) ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಬೇಕು. ಅವರನ್ನು ತಕ್ಷಣ ಬಂಧಿಸಬೇಕು ಎಂದು ಟ್ವೀಟ್ ಮೂಲಕ ಮಾಜಿ ಸಚಿವ ಜಮೀರ್ ಅಹ್ಮದ್​ಖಾನ್​ ಒತ್ತಾಯಿಸಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯ ಕಾರಣ ಅಶ್ವತ್ಥ್ ನಾರಾಯಣ ಹತ್ಯೆಗೆ ಕರೆ ನೀಡಿದ್ದಾರೆ. ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಬೇಕು. ಸಿದ್ದರಾಮಯ್ಯರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಜಮೀರ್ ಅಹ್ಮದ್​ಖಾನ್​ ಎಚ್ಚರಿಕೆ ನೀಡಿದ್ದಾರೆ.

ಕೊಲೆ ಮಾಡುವುದು ಬಿಜೆಪಿಗೆ ಆರ್​ಎಸ್​ಎಸ್​ನಿಂದ ಬಂದಿರುವ ಗುಣ

ಇನ್ನು ಈ ಕುರಿತಾಗಿ ರಾಜ್ಯ ಕಾಂಗ್ರೆಸ್​ ಘಟಕ ಆಕ್ರೋಶ ವ್ಯಕ್ತಪಡಿಸಿದೆ. ಕೊಲೆ ಮಾಡುವುದು ಬಿಜೆಪಿಗೆ ಆರ್​ಎಸ್​ಎಸ್​ನಿಂದ ಬಂದಿರುವ ಗುಣ. ರಾಷ್ಟ್ರಪಿತ ಮಹಾತ್ಮ ಗಾಂಧಿ ಕೊಂದ ಸಿದ್ಧಾಂತದವರಿಂದಲೇ ಹತ್ಯೆಗೆ ಕರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಕೊಲ್ಲಲು ಬಹಿರಂಗವಾಗಿ ಕರೆ ನೀಡಿದ್ದಾರೆ. ಸಿದ್ದರಾಮಯ್ಯ ಕೊಲೆ ಮಾಡುವ ಯೋಚನೆ, ಯೋಜನೆ ಬಂದಿರುವುದು ಕೇಶವಕೃಪಾದಿಂದಲೋ ಅಥವಾ ನಾಗ್ಪುರದಿಂದಲೋ ಎಂದು ಟ್ವೀಟ್ ಮೂಲಕ ರಾಜ್ಯ ಬಿಜೆಪಿ ಘಟಕಕ್ಕೆ ಕಾಂಗ್ರೆಸ್​ ಘಟಕ ಪ್ರಶ್ನಿಸಿದೆ. ಇಲ್ಲಿನ ಬಿಜೆಪಿಯವರಿಗೂ ತಾಲಿಬಾನ್​ ಉಗ್ರರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಕಿಡಿಕಾರಲಾಗಿದೆ.

ಇದನ್ನೂ ಓದಿ: ಟಿಪ್ಪು – ಸಿದ್ದರಾಮಯ್ಯ ಹೋಲಿಕೆಯ ಮಾತುಗಳು ಸಾಂದರ್ಭಿಕ; ಅಶ್ವಥ್ ನಾರಾಯಣ ಸ್ಪಷ್ಟನೆ

ಸಚಿವ ಡಾ.ಅಶ್ವತ್ಥ್ ನಾರಾಯಣ ವಿರುದ್ಧ ರಾಜ್ಯಪಾಲರಿಗೆ ದೂರು 

ಇನ್ನು ಸಚಿವ ಡಾ.ಅಶ್ವತ್ಥ್ ನಾರಾಯಣ ವಿರುದ್ಧ ರಾಜ್ಯಪಾಲರಿಗೆ ಕಲಬುರಗಿ ಜಿಲ್ಲೆ ಆಳಂದ ಮಾಜಿ ಶಾಸಕ ಬಿ.ಆರ್.ಪಾಟೀಲ್​ದೂರು ನೀಡಿದ್ದಾರೆ. ಸಿದ್ದರಾಮಯ್ಯ ಕೊಲೆಗೆ ಅಶ್ವತ್ಥ್ ನಾರಾಯಣ ಪ್ರಚೋದನೆ ನೀಡಿದ್ದಾರೆ. ಸಂವಿಧಾನ‌ ಬದ್ಧವಾಗಿ ಕಾರ್ಯ ನಿರ್ವಹಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ಮೂಲ ತಳಹದಿಯನ್ನೇ ಉಲ್ಲಂಘಿಸಿದ್ದಾರೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕದಡಲು ಯತ್ನಿಸಿದ್ದಾರೆ. ಐಪಿಸಿ ಸೆಕ್ಷನ್ 353, 504, 506ರ ಅಡಿಯಲ್ಲಿ ಅಪರಾಧವೆಸಗಿದ್ದಾರೆ. ಕೂಡಲೇ ಅಶ್ವತ್ಥ್ ನಾರಾಯಣರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ, ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ರಾಜ್ಯಪಾಲ ಗೆಹ್ಲೋಟ್​ಗೆ ಮನವಿ ಮಾಡಲಾಗಿದೆ.

ಸಚಿವ ಡಾ. ಅಶ್ವಥ್ ನಾರಾಯಣ ಸ್ಪಷ್ಟನೆ  

ವಿಧಾನಸೌಧದಲ್ಲಿ TV9 ಜೊತೆ ಸಚಿವ ಡಾ. ಅಶ್ವಥ್ ನಾರಾಯಣ ಮಾತನಾಡಿ, ಮಂಡ್ಯದಲ್ಲಿ ಶಕ್ತಿಕೇಂದ್ರ ಸಭೆಯಲ್ಲಿ ಸಾಂದರ್ಭಿಕವಾಗಿ ಮಾತಾಡಿದ್ದೇನೆಯೇ ಹೊರತು ವೈಯಕ್ತಿಕವಾಗಿ ಅಲ್ಲ. ಇಲ್ಲಿ ಸಿದ್ದರಾಮಯ್ಯ ಪ್ರಶ್ನೆ ಉದ್ಭವ ಆಗಲ್ಲ. ಟಿಪ್ಪು ವೈಭವೀಕರಣ ಸಮಾಜದಲ್ಲಿ ಸರಿಯಲ್ಲ. ಮತದಾನದಲ್ಲಿ ಸೋಲಿಸಿ ಅಂತಾ ನನ್ನ ಆಡು ಭಾಷೆಯಲ್ಲಿ ಹೇಳಿದ್ದೇನೆ. ಆ ಕಾಲದಲ್ಲಿ ಯುದ್ಧ ನಡೆಯುತ್ತಿತ್ತು, ಈ ಕಾಲದಲ್ಲಿ ಮತದಾನದ ಮೂಲಕ ಜನ ಆಯ್ಕೆ ಮಾಡುತ್ತಾರೆ. ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಅನ್ನೋದು ನನ್ನ ಹೊಡೆದು ಹಾಕಿ ಎಂಬ ಹೇಳಿಕೆಯ ಅರ್ಥ ಎಂದು ಸ್ಪಷ್ಟನೆ ನೀಡದರು.

ಇದನ್ನೂ ಓದಿ: Siddaramaiah: ಮಾನಸಿಕ ಅಸ್ವಸ್ಥನಾದ ಅಶ್ವಥ್ ನಾರಾಯಣ: ಸಿದ್ದರಾಮಯ್ಯ ವಾಗ್ದಾಳಿ

ವೈಯಕ್ತಿಕವಾಗಿ ನನಗೆ ಸಿದ್ದರಾಮಯ್ಯ ಮೇಲೆ‌ ದ್ವೇಷ ಇಲ್ಲ. ರಾಜಕೀಯ ಮತ್ತು ಸೈದ್ದಾಂತಿಕವಾಗಿ ನಮಗೆ ವ್ಯತ್ಯಾಸ ಇದೆ. ಮನಸ್ಸು ನೋಯಿಸಬೇಕು, ಹೊಡೆದು ಹಾಕಬೇಕು ಎಂಬ ಪ್ರಶ್ನೆಯೇ ಇಲ್ಲ. ವೈಯಕ್ತಿಕ ತೇಜೋವಧೆ ಮಾಡುವ ಉದ್ದೇಶ ಇಲ್ಲ. ಸುಮೋಟೋ ಕೇಸ್ ದಾಖಲು ಯಾವುದೇ ಪ್ರಶ್ನೆ ಬರಲ್ಲ. ನಾನೇನು ಕಾನೂನು ಕೈ ಗೆ ತೆಗೆದುಕೊಂಡು ಹೊಡೆದು ಹಾಕಿ ಅಂತಾ ಹೇಳಿಲ್ಲ. ಅವರ ಮನಸ್ಸಿಗೆ ನೋವಾಗಿದ್ರೆ ನಾನು ವಿಷಾದ ವ್ಯಕ್ತಪಡಿಸಿದ್ದೇನೆ. ನನಗೆ ಯಾವುದೇ ಪ್ರತಿಷ್ಠೆ ಇಲ್ಲ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:21 pm, Thu, 16 February 23