ಮೂರು ಸರ್ವೆಗಳಲ್ಲಿ ಕಾಂಗ್ರೆಸ್ ಮುಂದೆ: ಬಿಜೆಪಿಗೆ ಎಷ್ಟು ಸ್ಥಾನ? ಮಾಹಿತಿ ಬಿಚ್ಚಿಟ್ಟ ಕೆಪಿಸಿಸಿ ಕಾರ್ಯಾಧ್ಯಕ್ಷ
ಮೂರು ಚುನಾವಣೆ ಸರ್ವೆಗಳಲ್ಲಿ ಕಾಂಗ್ರೆಸ್ ಮುಂದೆ ಇದ್ದು, ಬಿಜೆಪಿ ಕೇವಲ 65 ಸ್ಥಾನಗಳಲ್ಲಿ ಮಾತ್ರ ಗೆಲ್ಲಲಿದೆ ಎಂದು ಚುನಾವಣೆ ಸರ್ವೆ ಬಗ್ಗೆ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಹುಬ್ಬಳ್ಳಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಇನ್ನೇನು ಐದಾರು ತಿಂಗಳು ಬಾಕಿ ಉಳಿದಿದ್ದು, ಚುನಾವಣೆಯಲ್ಲಿ ಗೆಲ್ಲಲು ಮೂರು ಪಕ್ಷಗಳು ನಾನಾ ತಂತ್ರಗಾರಿಕೆಗಳ ಮೂಲಕ ಕಸರತ್ತು ನಡೆಸಿವೆ. ಇನ್ನು ರಾಜಕೀಯ ಪಕ್ಷಗಳು ಮುಂದಿನ ಚುನಾವಣೆಯಲ್ಲಿ (Election) ಯಾರಿಗೆ ಎಷ್ಟು ಸ್ಥಾನ ಬರಲಿವೆ ಎನ್ನುವುದನ್ನು ಖಾಸಗಿ ಸಂಸ್ಥೆಗಳಿಂದ ಸರ್ವೆ ಮಾಡಿಸಿವೆ. ಇದೀಗ ಕಾಂಗ್ರೆಸ್ ಸಹ ಮೂರು ಸರ್ವೆಗಳನ್ನು ಮಾಡಿಸಿದೆ ಎಂದು ಸ್ವತಃ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ (Salim Ahamed) ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಇಂದು(ನ.18) ಸುದ್ದಿಗಾರಿರೊಂದಿಗೆ ಮಾತನಾಡಿದ ಸಲೀಂ ಅಹ್ಮದ್, ನಮ್ಮ ಪಕ್ಷದ ಮೂರು ಸರ್ವೆಗಳಲ್ಲೂ ಕಾಂಗ್ರೆಸ್ ಮುಂದಿದೆ. 130 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಂದಿದೆ. ಸರ್ವೆ ಪ್ರಕಾರ ಬಿಜೆಪಿ ಕೇವಲ 65 ಸ್ಥಾನಗಳಲ್ಲಿ ಮಾತ್ರ ಗೆಲ್ಲಲಿದೆ ಎಂದು ಸ್ಪಷ್ಟಪಡಿಸಿದರು.
224 ಕ್ಷೇತ್ರಗಳಲ್ಲೂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರವಾಸ ಮಾಡುತ್ತಾರೆ. ಬಿಜೆಪಿಯ ಭ್ರಷ್ಟಾಚಾರವನ್ನು 224 ಕ್ಷೇತ್ರಗಳಲ್ಲೂ ತಿಳಿಸುತ್ತೇವೆ. ಬಿಜೆಪಿ ಜನಸಂಕಲ್ಪ ಯಾತ್ರೆ ಅಲ್ಲ, ಕ್ಷಮೆ ಯಾತ್ರೆ ಮಾಡಬೇಕು. ರಾಜ್ಯದ ಜನ ಬಿಜೆಪಿ ಸರ್ಕಾರದಿಂದ ಭ್ರಮನಿರಸನಗೊಂಡಿದ್ದಾರೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಹಲವರು ಬಲಿಯಾಗಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಪಾಪದ ಕೊಡ ತುಂಬಿದೆ. ಜನ ಬಿಜೆಪಿ ಸರ್ಕಾರದ ಬಗ್ಗೆ ನೊಂದಿದ್ದಾರೆ. ಯಾವಾಗ ಚುನಾವಣೆ ಬರತ್ತೆ ಅಂತ ಕಾಯುತ್ತಿದ್ದಾರೆ. ಬಿಜೆಪಿಯವರಿಗೆ ಸೋಲಿಸುತ್ತೇವೆ ಅನ್ನೋ ಮಾಹಿತಿ ಸಿಕ್ಕಿದೆ ಎಂದರು.
ಅಶ್ವಥ್ ನಾರಾಯಣಗೆ ಸೇರಿದ ಚಿಲುಮೆ ಕಂಪನಿಯವರಿಗೆ ಪೊಲೀಂಗ್ ಆಫೀಸರ್ ಆಗಿ ನೇಮಕ ಮಾಡಿದ್ದಾರೆ. ಅವರೆಲ್ಲ ಬಿಜೆಪಿ ಕಾರ್ಯಕರ್ತರು . ಮುಖ್ಯಮಂತ್ರಿಗಳು,ಅಶ್ವಥ್ ನಾರಾಯಣ,ತುಷಾರ್ ಗಿರಿನಾಥ್ ಮೇಲೆ ದೂರು ದಾಖಾಲಗಬೇಕು. ಬೆಂಗಳೂರು BBMP ಅಲ್ಲ ಇಡೀ ರಾಜ್ಯದಲ್ಲಿ ಈ ಕಂಪನಿಯಿಂದ ಕೆಲಸ ಶುರುವಾಗಿದೆ. ಚುನಾವಣೆಯಲ್ಲಿ ಬಿಜೆಪಿ ವೋಟ್ ಕದಿಯೋ ಕೆಲಸ ಮಾಡುತ್ತಿದೆ. ಇದರ ವಿರುದ್ದ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ನಾಳೆ ಬೆಂಗಳೂರಿನಲ್ಲಿ ನಮ್ಮ ನಾಯಕರು ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿಗೆ ರಾಜ್ಯದಲ್ಲಿ ಆಯುಷ್ಯ ಇಲ್ಲ. ಇದೇ ತಂತ್ರಗಾರಿಕೆಯನ್ನು ಕೇವಲ ಬೆಂಗಳೂರು ಅಲ್ಲ,ರಾಜ್ಯದ ಎಲ್ಲ ಕಡೆ ಮಾಡಬೇಕ ಅಂತಾ ಹೊರಟಿದ್ರು. EVM ಹ್ಯಾಕ್ ಮಾಡೋದು,ವೋಟ್ ಡಿಲೀಟ್ ಮಾಡೋದು ಇವರ ಉದ್ದೇಶ. ಎಲ್ಲ ಡಿಪಾರ್ಟ್ಮೆಂಟ್ ನಲ್ಲೂ ಹಗರಣ ಇದೆ. ಇದು ಸರ್ಕಾರ ಅನ್ನೋಕೆ ನಾಚಿಕೆ ಆಗತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ