CT Ravi: ಜಾತ್ಯಾತೀತ ಜನತಾದಳ ಅಲ್ಲ, ಜಾತಿಯ ದಳ ಎಂದು ಬದಲಿಸಿ: ಕುಮಾರಸ್ವಾಮಿಗೆ ಸಿ.ಟಿ. ರವಿ ಟಾಂಟ್
BJP National General Secretary at Kolar: ಜೆಡಿಎಸ್ನ ಹೆಸರನ್ನು ಜಾತ್ಯತೀತ ಜನತಾ ದಳ ಎನ್ನುವ ಬದಲು ಜಾತಿಯ ದಳ ಎಂದು ಹೆಸರು ಬದಲಿಸಿದರೆ ಒಳ್ಳೆಯದು ಎಂದು ಹೆಚ್ಡಿಕೆಗೆ ಸಿ.ಟಿ. ರವಿ ಸಲಹೆ ನೀಡಿದ್ದಾರೆ. ಹಾಗೆಯೇ, ಬಿಜೆಪಿ ಒಡೆಯರ್, ಸಾವರ್ಕರ್ ಸಿದ್ಧಾಂತ ಪ್ರತಿಪಾದಕವಾದರೆ, ಕಾಂಗ್ರೆಸ್ ಟಿಪ್ಪು ಸಮರ್ಥಕ ಎಂದು ಸಿ.ಟಿ. ರವಿ ಹೇಳಿದ್ದಾರೆ.
ಕೋಲಾರ: ಬ್ರಾಹ್ಮಣ ಸಿಎಂ ವಿಚಾರವನ್ನು ಎತ್ತಿದ ಮಾಜಿ ಸಿಎಂ ಕುಮಾರಸ್ವಾಮಿ (HDK Brahmin CM) ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (CT Ravi) ಗುಡುಗಿದ್ದಾರೆ. ಜೆಡಿಎಸ್ನ ಹೆಸರನ್ನು ಜಾತ್ಯತೀತ ಜನತಾ ದಳ ಎನ್ನುವ ಬದಲು ಜಾತಿಯ ದಳ ಎಂದು ಹೆಸರು ಬದಲಿಸಿದರೆ ಒಳ್ಳೆಯದು ಎಂದು ಹೆಚ್ಡಿಕೆಗೆ ಸಿ.ಟಿ. ರವಿ ಸಲಹೆ ನೀಡಿದ್ದಾರೆ.
ಪ್ರತೀ ಬಾರಿ ಲಾಟರಿ ಹೊಡೆಯಲು ಸಾಧ್ಯವಿಲ್ಲ. ಈ ಹಿಂದೆ ಕುಮಾರಸ್ವಾಮಿಗೆ ಲಾಟರಿ ಹೊಡೆದಿತ್ತು, ಹಾಗಾಗಿ ಅದೇ ವಾದ ಅವರದ್ದಾಗಿದೆ. ಬಿಜೆಪಿ ಪಕ್ಷದಲ್ಲಿ ಬ್ರಾಹ್ಮಣ ಸಿಎಂ ವಿಚಾರ ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಇಂಥ ಚರ್ಚೆಗಳು ಎದುರಾಗಿದ್ದವು. ಜಾತ್ಯತೀತ ನಾಯಕರೆನಿಸಿಕೊಂಡವರು ಜಾತಿ ಬಗ್ಗೆ ಮಾತನಾಡುವುದು ಸರಿಯಲ್ಲ. ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡುವುದು ಬಿಜೆಪಿಯ ಸಿದ್ಧಾಂತವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.
ಡಿಕೆಶಿಗೆ ಟಾಂಟ್
ಬಿಜೆಪಿಯಲ್ಲಿ ನಾಯಕತ್ವ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೀಡಿದ ಹೇಳಿಕೆಗೆ ಸಿ.ಟಿ. ರವಿ ವ್ಯಂಗ್ಯದ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಒಂದು ಕಾಲದಲ್ಲಿ ಇಂದಿರಾ ಗಾಂಧಿ ಹೆಸರು ಹೇಳಿದರೆ ಬೇಲಿ ಗೂಟಕ್ಕೂ ಹೋಗಿ ವೋಟು ಹಾಕುತ್ತಿದ್ದರು. ಎಂಎಲ್ಎ, ಎಂಪಿ ಆಗುತ್ತಿದ್ದರು. ಅದರೆ, ಈಗ ಕಾಂಗ್ರೆಸ್ನವರಿಗೆ ರಾಹುಲ್ ಗಾಂಧಿ ಹೆಸರು ಹೇಳಿದರೆ ಬರುವ ವೋಟೂ ಹೋಗುತ್ತದೆ. ಅದೇ ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳಿದರೆ ಬಿಜೆಪಿಗೆ ವೋಟ್ ಬೀಳುತ್ತದೆ. ಇದು ಬಿಜೆಪಿಯ ಅದೃಷ್ಟ, ಕಾಂಗ್ರೆಸ್ನವರ ದುರದೃಷ್ಟ ಎಂದು ಮಾಜಿ ಸಚಿವರು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: DK Shivakumar: ನನ್ನ ಮಗಳ ಫೀಸ್ ಬಗ್ಗೆ ಮಾಹಿತಿ ಬೇಕಂತೆ; ಸಿಬಿಐಗೆ ಬುದ್ಧಿ ಹೇಳುತ್ತೇನೆ ಎಂದ ಡಿಕೆ ಶಿವಕುಮಾರ್
ಟಿಪ್ಪು ಸುಲ್ತಾನ್ ವಿಚಾರ:
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತೊಮ್ಮೆ ಟಿಪ್ಪು ಸುಲ್ತಾನ್ ವಿಚಾರವನ್ನು ಕೆದಕಿ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದಾರೆ. ಬಿಜೆಪಿಯದ್ದು ಒಡೆಯರ್, ಸಾವರ್ಕರ್ ಸಿದ್ಧಾಂತವಾದರೆ, ಕಾಂಗ್ರೆಸ್ನದ್ದು ಟಿಪ್ಪು ಸಿದ್ಧಾಂತದ ಪ್ರತಿಪಾದನೆ ಎಂದು ಟೀಕಿಸಿದ್ದಾರೆ.
ಟಿಪ್ಪು ಸುಲ್ತಾನ್ ಹುಟ್ಟು ರಾಜನಲ್ಲ. ಮೈಸೂರು ರಾಜ ಒಡೆಯರ್ ಅವರ ಸಂಸ್ಥಾನದಲ್ಲಿ ಟಿಪ್ಪುವಿನ ತಂದೆ ಒಬ್ಬ ಸಾಮಾನ್ಯ ಸೈನಿಕನಾಗಿದ್ದು ಸೇನಾಧಿಪತಿಯಾದವರು. ಸುಲ್ತಾನ್ ಮೋಸದಿಂದ ಒಡೆಯರ್ ಸಂಸ್ಥಾನ ಕಬಳಿಸಿದ್ದು ಟಿಪ್ಪು.
ಟಿಪ್ಪು ಸುಲ್ತಾನ್ ಪಾರ್ಸಿ ಭಾಷೆಯನ್ನು ಮೈಸೂರಿನಲ್ಲಿ ಬಲವಂತವಅಗಿ ಹೇರಿದವರು. ನಮಗೂ ಪಾರ್ಸಿಗೂ ಏನು ಸಂಬಂಧ? ಅದು ನಮ್ಮ ನೆರೆಹೊರೆಯ ಭಾಷೆಯೂ ಅಲ್ಲ. ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ್ದು ಸತ್ಯ. ಅದೇ ರೀತಿ ಪೆರಂಬೂರಿನಲ್ಲಿ ಹಿಂದೂಗಳ ನರಮೇಧ ಮಾಡಿದ್ದೂ ಅಷ್ಟೇ ಸತ್ಯ. ಮಂಡ್ಯದ ಅಯ್ಯಂಗಾರ ಕುಟುಂಬಗಳನ್ನು ನರಮೇಧ ಮಾಡಿದ್ದು ಟಿಪ್ಪು. ರಾಜ ರಾಣಿಯರನ್ನು ಸೆರೆಮನೆಯಲ್ಲಿ ಇಟ್ಟಿದ್ದು ಟಿಪ್ಪುವಿನ ಸಿದ್ದಾಂತ. ಸತ್ಯದ ಪರ ಧ್ವನಿ ಎತ್ತಿದವರನ್ನು ನರಮೇಧ ಮಾಡಿದ್ದು ಟಿಪ್ಪು ಸಿದ್ಧಾಂತ. ಒಡೆಯರ್ ಕೊಡುಗೆ ಏನೆಂದು ಕೇಳಿದರೆ ಕನ್ನಂಬಾಡಿ ಕಟ್ಟೆ, ಮೈಸೂರು ಪೇಪರ್ ಮಿಲ್ಸ್ ಹೆಸರು ಹೇಳಬಹುದು. ಆದರೆ, ಟಿಪ್ಪು ಕೊಡುಗೆ ಏನು ಎಂದರೆ ಯಾರೂ ಹೇಳಲು ತಯಾರಿಲ್ಲ. ಒಡೆಯರ್, ಸಾವರ್ಕರ್ ಸಿದ್ಧಾಂತದ ಮೇಲೆ ಬಿಜೆಪಿ ನಡೆಯುತ್ತದೆ. ಟಿಪ್ಪುವಿನ ಸಿದ್ಧಾಂತದ ಪ್ರತಿಪಾದನೆ ಕಾಂಗ್ರೆಸ್ನದ್ದು ಎಂದು ಸಿ.ಟಿ. ರವಿ ಅಭಿಪ್ರಾಯಪಟ್ಟಿದ್ದಾರೆ.
Published On - 3:39 pm, Thu, 9 February 23