ದಲಿತ ಸಿಎಂ ಆಗಲೇಬೇಕು ಅನ್ನೋದು ನಮ್ಮೆಲ್ಲರ ಒತ್ತಾಯ: ಉರಿಲಿಂಗ ಪೆದ್ದಿಮಠ ಸ್ವಾಮೀಜಿ

| Updated By: ವಿವೇಕ ಬಿರಾದಾರ

Updated on: Oct 06, 2024 | 7:24 PM

ಸ್ವಾತಂತ್ರ್ಯ, ನ್ಯಾಯ, ಸಮಾನತೆ ಅಂತ ಓದುತ್ತೇವೆ. ಇದನ್ನು ಗೋಡೆ ಮೇಲೆ ಅಲ್ಲ, ವಿಧಾನಸೌಧದಲ್ಲಿ ತೋರಿಸಬೇಕು. ದಲಿತರನ್ನು ಮುಖ್ಯಮಂತ್ರಿ ಮಾಡದಿದ್ದರೆ ಯಾವ ಪಕ್ಷದವರು ದಲಿತ, ಶೋಷಿತರ ಬೀದಿಗೆ ತಲೆ ಎತ್ತಿ ಬರುವಂತಿಲ್ಲ ಎಂದು ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಎಚ್ಚರಿಕೆ ನೀಡಿದರು.

ದಲಿತ ಸಿಎಂ ಆಗಲೇಬೇಕು ಅನ್ನೋದು ನಮ್ಮೆಲ್ಲರ ಒತ್ತಾಯ: ಉರಿಲಿಂಗ ಪೆದ್ದಿಮಠ ಸ್ವಾಮೀಜಿ
ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ
Follow us on

ಬೆಂಗಳೂರು, ಅಕ್ಟೋಬರ್​ 06: ಸಿದ್ದರಾಮಯ್ಯ (Siddaramaiah) ಅವರ ಸ್ಥಾನ ಪಲ್ಲಟವಾದರೆ ದಲಿತರು ಮುಖ್ಯಮಂತ್ರಿಯಾಗುವ ನಂಬಿಕೆ ಇದೆ. ದಲಿತ ಮುಖ್ಯಮಂತ್ರಿ ಆಗಲೇಬೇಕು ಅನ್ನೋದು ನಮ್ಮೆಲ್ಲರ ಒತ್ತಾಯವಾಗಿದೆ ಎಂದು ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ (Urilingapeddi Mutt Swamiji) ಹೇಳಿದರು. ಬೆಂಗಳೂರಿನಲ್ಲಿ ಟಿವಿ9 ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಯಾವುದೇ ಪಕ್ಷ ಇರಲಿ ದಲಿತ ಸಿಎಂ ರಾಜ್ಯಕ್ಕೆ ಅಗತ್ಯವಿದೆ ಎಂದರು.

ಸಂವಿಧಾನದಲ್ಲಿ ಸ್ವಾತಂತ್ರ್ಯ, ನ್ಯಾಯ, ಸಮಾನತೆ ಅಂತ ಓದುತ್ತೇವೆ. ಇದನ್ನು ಗೋಡೆ ಮೇಲೆ ಅಲ್ಲ, ವಿಧಾನಸೌಧದಲ್ಲಿ ತೋರಿಸಬೇಕು. ದಲಿತರನ್ನು ಮುಖ್ಯಮಂತ್ರಿ ಮಾಡದಿದ್ದರೇ ಯಾವ ಪಕ್ಷದವರೂ ದಲಿತ, ಶೋಷಿತರ ಬೀದಿಗೆ ತಲೆ ಎತ್ತಿ ಬರುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.

ಜಾತಿಗಣತಿ ವರದಿ ಜಾರಿಗೆ ಕೆಲ ಸಮುದಾಯ ವಿರೋಧ ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಸದಸ್ಯರೇ ಆಗದಂತಹ ಸಮುದಾಯವಿದೆ. ಅವರು ಭಾರತದ ಪ್ರಜೆ ಅಲ್ವಾ? ಅವರಿಗೆ ಮತದಾನದ ಹಕ್ಕಿಲ್ವಾ? ಕೂಡಲೇ ಜಾತಿಗಣತಿ ವರದಿ ಅಂಗೀಕಾರವಾಗಬೇಕು. ರಾಜ್ಯ ಕಾಂಗ್ರೆಸ್‌ ಸರ್ಕಾರ ಬಿದ್ದರೆ ಬೀಳಲಿ ಬಿಡಿ. ಸರ್ಕಾರ ಜನರಿಗೆ ಅನುಕೂಲವಾಗದಿದ್ದರೆ ಹೇಗೆ? ಕೆಲವರಿಂದ ಕೆಲವರಿಗಾಗಿ ಕೆಲವರಿಗೋಸ್ಕರ ಸರ್ಕಾರ ಇರೋದಾ? ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಸರ್ಕಾರ ಇರಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್​​ನಲ್ಲಿ ಮತ್ತೆ ದಲಿತ ಸಿಎಂ ಕೂಗು? ಕಿಚ್ಚು ಹಚ್ಚಿದ ಸಚಿವ ಡಾ ಮಹದೇವಪ್ಪ ಹೇಳಿಕೆ

ಜಾತಿಗಣತಿ ವರದಿ ಜಾರಿಗೆ ಲಿಂಗಾಯತ, ಒಕ್ಕಲಿಗ ಶ್ರೀಗಳು ವಿರೋಧ ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಒಂದು ಸಮುದಾಯದವರು 11 ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಮತ್ತೊಂದು ಸಮುದಾಯದವರು 11 ಬಾರಿ ಮುಖ್ಯಮಂತ್ರಿಯಾಗಿದ್ದಾರೆ. 1 ಕೋಟಿ 60 ಲಕ್ಷ ಇರುವ ಈ ಸಮುದಾಯ ಹೀಗೆ ಜೀತದಾಳುಗಳಾಗಿ ಇರಬೇಕಾ? ಜನಸಂಖ್ಯೆ ಎಷ್ಟಿದೆ ಎಂದು ಹೊರಬರಲಿ. ಜಾತಿಗಣತಿ ವರದಿ ಜಾರಿಗೆ ನಿಮ್ಮ ವಿರೋಧವೇಕೆ? ನಮ್ಮ ವಿರೋಧವೇಕೆ? ಜಾತಿಗಣತಿ ವರದಿ ಬಿಡುಗಡೆ ವಿಚಾರದಲ್ಲಿ ಯಾರೂ ವಿಳಂಬ ಮಾಡಬಾರದು ಎಂದರು.

ಸಿಎಂ ಕುರ್ಚಿಗೆ ರೇಸ್​​

ಕರ್ನಾಟಕದಲ್ಲಿ ಮುಡಾ ಹಗರಣ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎದ್ದಿದ್ದು ಮುಖ್ಯಮಂತ್ರಿಗಳ ಕುರ್ಚಿ ಅಲಗಾಡುತ್ತಿದೆ. ಮುಡಾ ಹಗರಣ ಸಂಬಂಧ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ವಿಪಕ್ಷಗಳು ಒತ್ತಾಯಿಸುತ್ತಿವೆ. ಇನ್ನು ಕಾಂಗ್ರೆಸ್​ ಪಕ್ಷದೊಳಗೆ ಸಿಎಂ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಿದೆ.

ಇತ್ತೀಚಿಗೆ ಅಷ್ಟೇ ಸಚಿವ ಸತೀಶ್​ ಜಾರಕಿಹೊಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಇದು ರಾಜ್ಯ ಕಾಂಗ್ರೆಸ್​ನಲ್ಲಿ ಮತ್ತೊಂದು ಅಲೆ ಉದ್ಭವವಾಗುವಂತೆ ಮಾಡಿದ್ದು, ಒಂದು ವೇಳೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದರೆ ಆ ಕುರ್ಚಿ ಮೇಲೆ ದಲಿತ ನಾಯಕ ಕೂರಲು ತಯಾರಿ ನಡೆಯುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಇಂದು (ಅ.06) ಸಚಿವ ಸತೀಶ್ ಜಾರಕಿಹೊಳಿ ಅವರು ಸಚಿವ ಜಿ. ಪರಮೇಶ್ವರ ಅವರನ್ನು ಭೇಟಿ ಮಾಡಿದ್ದು, ದಲಿತ ಸಿಎಂ ವಿಚಾರವಾಗಿ ಚರ್ಚೆ ನಡೆದಿದೆ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ