ರಾಜ್ಯ ಬಿಜೆಪಿ ನಾಯಕರನ್ನು ಹೈಕಮಾಂಡ್ ಹತ್ತಿರಕ್ಕೂ ಬಿಟ್ಟುಕೊಂಡಿಲ್ಲ: ಸಚಿವ ಆರ್ಬಿ ತಿಮ್ಮಾಪುರ
ವಿಧಾನಸಭೆ ಅಧಿಕವೇಶನ ಮುಕ್ತಾಯವಾದರೂ ಕರ್ನಾಟಕದ ವಿಪಕ್ಷ ನಾಯಕರ ಆಯ್ಕೆಯಾಗಿಲ್ಲ. ಈ ಬಗ್ಗೆ ಆಡಳಿತ ಪಕ್ಷ ಕಾಂಗ್ರೆಸ್ ವ್ಯಂಗ್ಯವಾಡುತ್ತಲೇ ಬರುತ್ತಿದೆ. ಇದೀಗ ಮಾತನಾಡಿದ ಸಚಿವ ತಿಮ್ಮಾಪುರ, ರಾಜ್ಯ ಬಿಜೆಪಿ ನಾಯಕರನ್ನು ಹೈಕಮಾಂಡ್ ಹತ್ತಿರಕ್ಕೂ ಬಿಟ್ಟುಕೊಂಡಿಲ್ಲ ಎಂದು ಜರಿದಿದ್ದಾರೆ.
ಬಾಗಲಕೋಟೆ, ಜುಲೈ 23: ರಾಜ್ಯ ಬಿಜೆಪಿ ನಾಯಕರನ್ನೇ ಹೈಕಮಾಂಡ್ ತಿರಸ್ಕರಿಸಿದೆ ಎಂದು ಅಬಕಾರಿ ಸಚವಿ ಆರ್.ಬಿ.ತಿಮ್ಮಾಪುರ (RB Timmapur) ಹೇಳಿದ್ದಾರೆ. ಜಿಲ್ಲೆಯಲ್ಲಿ ಮಾತನಾಡಿದ ಅವರು, ಬಿಜೆಪಿ (BJP) ಹೈಕಮಾಂಡ್ ಈವರೆಗೆ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಲ್ಲ. ರಾಜ್ಯ ಬಿಜೆಪಿ ನಾಯಕರನ್ನು ಹತ್ತಿರಕ್ಕೂ ಹೈಕಮಾಂಡ್ ಬಿಟ್ಟುಕೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ (Narendra Modi), ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಆಗಲಿ ತಮ್ಮ ಕಚೇರಿ ಒಳಗೂ ಬಿಟ್ಟುಕೊಳ್ಳುತ್ತಿಲ್ಲ. ಇದರಿಂದ ರಾಜ್ಯ ಬಿಜೆಪಿ ನಾಯಕರು ಗಾಬರಿಗೊಂಡಿದ್ದಾರೆ ಎಂದರು.
ನಮ್ಮನ್ನ ಕರೆದು ವಿರೋಧ ಪಕ್ಷದ ನಾಯಕನನ್ನಾಗಿ ಮಾಡುತ್ತಾರೆ ಎಂದು ಭಾವಿಸಿ ಮೋದಿ, ಅಮಿತ್ ಶಾ RSS ಮೆಚ್ಚಿಸಲು ಹಾದಿ ಬೀದಿಗಳಲ್ಲಿ ಕಿರುಚಾಡುತ್ತಿದ್ದಾರೆ. ಆದರೆ ಮೋದಿ ಅವರು ಇವನರನ್ನ ಒಳಗ ಕರೆಯುತ್ತಿಲ್ಲ, ಗೃಹ ಸಚಿವ ಅಮಿತ್ ಶಾ ಒಳಗೆ ಕರಿಯುತ್ತಿಲ್ಲ. ರಾಜ್ಯ ಬಿಜೆಪಿ ನಾಯಕರ ಸ್ಥಿತಿ ಹೀಗಾಗಿದೆ ಎಂದು ವ್ಯಂಗ್ಯವಾಡಿದರು.
ಮೋದಿ ಅತ್ಯಂತ ಕೆಟ್ಟ ಪ್ರಧಾನಿ: ಆರ್.ಬಿ.ತಿಮ್ಮಾಪುರ
ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣವು ಅತ್ಯಂತ ನೋವಿನ ಘಟನೆಯಾಗಿದೆ. ಇಂತಹ ಪೈಶಾಚಿಕ ಕೃತ್ಯವನ್ನು ಖಂಡಿಸುತ್ತೇನೆ ಎಂದು ಹೇಳಿದ ತಿಮ್ಮಾಪುರ, ಇಂತಹ ಘಟನೆ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿಲ್ಲ. ಆರೋಪಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿಲ್ಲ. ಇಂಥ ಪ್ರಧಾನಿ ಇದ್ದರೆ ಬಡವರು, ಹಿಂದುಳಿದವರು ಬದುಕುವುದು ಹೇಗೆ? ಅವಮಾನಕ್ಕೀಡಾದ ಸಂತ್ರಸ್ತೆಗೆ ಸಾಂತ್ವನದ ಮಾತುಗಳು ಸಹ ಹೇಳಿಲ್ಲ. ಇದು ನಾಚಿಕೆಗೇಡಿನ ಸಂಗತಿ. ಮೋದಿ ನಾನು ಕಂಡ ಅತ್ಯಂತ ಕೆಟ್ಟ ಪ್ರಧಾನಿ ಎಂದರು.
ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ನವರಿಗೆ ಉಗ್ರರ ಜತೆ ಅವಿನಾಭಾವ ಸ್ನೇಹ ಸಂಬಂಧ; ಬಿಜೆಪಿ ಆಕ್ರೋಶ
ಹಾಲಿನ ದರ ಏರಿಕೆ: ಮೊಸರಿನ ಕಡೆ ಬೆರಳು ಮಾಡಿದ ತಿಮ್ಮಾಪುರ
ರಾಜ್ಯ ಸರ್ಕಾರದಿಂದ ಹಾಲಿನ ದರ ಮೂರು ರೂಪಾಯಿ ಏರಿಕೆ ವಿಚಾರವಾಗಿ ಮಾತನಾಡಿದ ತಿಮ್ಮಾಪುರ, ಅಭಿವೃದ್ದಿಗಾಗಿ ತೆರಿಗೆ ಹಾಕುವುದು, ಜನಸಾಮಾನ್ಯರ ತೆರಿಗೆಯಿಂದ ಅಭಿವೃದ್ಧಿ ಕೆಲಸ ಮಾಡುವುದು ನಡೆಯುತ್ತಿರುತ್ತದೆ. ಈ ಹಿಂದೆ ಕೇಂದ್ರ ಸರ್ಕಾರ ಮೊಸರಿನ ಮೇಲೆ ಜಿಎಸ್ಟಿ ಹಾಕಿತ್ತಲ್ಲ. ಇದಕ್ಕೆ ಬಿಜೆಪಿ ನಾಯಕರು ಉತ್ತರಿಸಲಿ, ಆಮೇಲೆ ನಾವು ಉತ್ತರಿಸುತ್ತೇವೆ. ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು ಮೋದಿ ಸರ್ಕಾರ ಎಂದು ಟೀಕಿಸಿದರು.
ಸರ್ಕಾರದಲ್ಲಿ ವರ್ಗಾವಣೆ ದಂದೆ ನಡೆಯುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅಬಕಾರಿ ಸಚಿವರು, ಬಿಜೆಪಿಗರು ಅಧಿಕಾರದಲ್ಲಿದ್ದಾಗ ಅದನ್ನೇ ಮಾಡಿದ್ದಾರಾ? ಏನಾದರು ಸಾಕ್ಷಿ ಆಧಾರಗಳು ಇದ್ದರೆ ಕೊಡಲಿ ಎಂದು ಸವಾಲು ಹಾಕಿದರು.
ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಹೆಚ್ಚು ಬೆಲೆ ಇಲ್ಲ: ತಿಮ್ಮಾಪುರ
ಸಿಎಂ ಆಯ್ಕೆ ಮಾಡುವುದು ಗೊತ್ತು, ಕೆಳಗೆ ಇಳಿಸುವುದು ಗೊತ್ತಿದೆ ಎಂದು ಸ್ವಪಕ್ಷದ ಎಂಎಲ್ಸಿ ಬಿಕೆ ಹರಿಪ್ರಸಾದ್ ಅವರು ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಬಕಾರಿ ಸಚಿವ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ 136 ಶಾಸಕರ ಜೊತೆಗೆ ಹೈಕಮಾಂಡ್ ಬೆಂಬಲ ಕೂಡ ಇದೆ. ಹೀಗಾಗಿ ಹರಿಪ್ರಸಾದ್ ಹೇಳಿಕೆಗೆ ಹೆಚ್ಚು ಬೆಲೆ ಇಲ್ಲ. ಅವರು ಯಾವ ದೃಷ್ಟಿ ಇಟ್ಟುಕೊಂಡು ಹೇಳಿದ್ದಾರೆ ಗೊತ್ತಿಲ್ಲ. ಸರ್ಕಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಅವರ ಹೇಳಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸಲ್ಲ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ