ತೇಜಸ್ವಿನಿ ಅನಂತಕುಮಾರ್‌ ಜತೆ ರಾಜಕೀಯ ಚರ್ಚೆ ಮಾಡಿಲ್ಲ; ಟ್ವೀಟ್​​ಗಾಗಿ ಕ್ಷಮೆ ಕೇಳಿದ ಡಿಸಿಎಂ ಡಿಕೆ ಶಿವಕುಮಾರ್

| Updated By: Ganapathi Sharma

Updated on: Sep 04, 2023 | 7:40 PM

ಡಿಕೆ ಶಿವಕುಮಾರ್ ಹಾಗೂ ತೇಜಸ್ವಿನಿ ಅನಂತ ಕುಮಾರ್ ಮಾತುಕತೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಸೃಷ್ಟಿಸಿತ್ತು. ಇದಕ್ಕೆ ಡಿಕೆ ಶಿವಕುಮಾರ್ ಅವರ ಟ್ವೀಟ್​​ ಮತ್ತಷ್ಟು ಪುಷ್ಟಿ ನೀಡಿತ್ತು. ಆದರೆ ಇದೀಗ ಸ್ಪಷ್ಟನೆ ನೀಡಿರುವ ಡಿಕೆ ಶಿವಕುಮಾರ್, ನಾನು ಆ ಹೆಣ್ಣು ಮಗಳ ಜೊತೆ ಯಾವುದೇ ರಾಜಕೀಯ ವಿಚಾರ ಚರ್ಚಿಸಿಲ್ಲ. ದಯಮಾಡಿ ನಾನು ಕ್ಷಮೆ ಕೇಳುತ್ತೇನೆ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ತೇಜಸ್ವಿನಿ ಅನಂತಕುಮಾರ್‌ ಜತೆ ರಾಜಕೀಯ ಚರ್ಚೆ ಮಾಡಿಲ್ಲ; ಟ್ವೀಟ್​​ಗಾಗಿ ಕ್ಷಮೆ ಕೇಳಿದ ಡಿಸಿಎಂ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್
Follow us on

ಬೆಂಗಳೂರು, ಸೆಪ್ಟೆಂಬರ್ 4: ಮಾಜಿ ಕೇಂದ್ರ ಸಚಿವ ದಿ.ಅನಂತ್​ ಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್ (Tejaswini Ananth Kumar) ಅವರ ಜತೆ ರಾಜಕೀಯ ಚರ್ಚೆ ಮಾಡಲಾಗಿದೆ ಎಂದು ಟ್ವೀಟ್ ಮಾಡಿದ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸೋಮವಾರ ಕ್ಷಮೆಯಾಚನೆ ಮಾಡಿದ್ದಾರೆ. ಜತೆಗೆ, ತೇಜಸ್ವಿನಿ ಅನಂತಕುಮಾರ್‌ ಜತೆ ರಾಜಕೀಯ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನನ್ನ ಹೆಸರಿನಲ್ಲಿ ಆ ರೀತಿ ಸಾಮಾಜಿಕ ಮಾಧ್ಯಮ ಎಕ್ಸ್​​​ನಲ್ಲಿ (Twitter) ಪೋಸ್ಟ್ ಮಾಡಿದವರನ್ನು ಕೂಡಲೇ ತೆಗೆದುಹಾಕುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ತೇಜಸ್ವಿನಿ ಅನಂತಕುಮಾರ್ ಅವರು ಸೋಮವಾರ ಮಧ್ಯಾಹ್ನ ಡಿಕೆ ಶಿವಕುಮಾರ್ ಅವರನ್ನು ಕುಮಾರ ಕೃಪಾ ಅತಿಥಿ ಗೃಹದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅದಾದ ನಂತರ ಡಿಕೆ ಶಿವಕುಮಾರ್ ಅವರ ಟ್ವಿಟರ್ ಹ್ಯಾಂಡಲ್​​ನಲ್ಲಿ, ಫೋಟೊ ಸಹಿತ ಮಾಹಿತಿ ನೀಡಲಾಗಿತ್ತು.

ಡಿಕೆ ಶಿವಕುಮಾರ್ ಟ್ವೀಟ್​​ನಲ್ಲೇನಿತ್ತು?

ಬಿಜೆಪಿಯ ಹಿರಿಯ ನಾಯಕರಾಗಿದ್ದ ದಿ. ಅನಂತ್ ಕುಮಾರ್ ಅವರ ಪತ್ನಿ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಇಂದು ನನ್ನನ್ನು ಕುಮಾರ ಕೃಪಾ ಅತಿಥಿ ಗೃಹದಲ್ಲಿ ಭೇಟಿಯಾಗಿ ರಾಜ್ಯ ರಾಜಕೀಯ ವಿಚಾರಗಳ ಕುರಿತು ಚರ್ಚಿಸಿದರು ಎಂದು ಡಿಕೆ ಶಿವಕುಮಾರ್ ಅವರ ಟ್ವಿಟರ್​ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಲಾಗಿತ್ತು.

ಡಿಕೆ ಶಿವಕುಮಾರ್ ಹೇಳಿದ್ದೇನು?

ನಾನು ಆ ಹೆಣ್ಣು ಮಗಳ ಜೊತೆ ಯಾವುದೇ ರಾಜಕೀಯ ವಿಚಾರ ಚರ್ಚಿಸಿಲ್ಲ. ದಯಮಾಡಿ ನಾನು ಕ್ಷಮೆ ಕೇಳುತ್ತೇನೆ. ದಿವಂಗತ ಅನಂತಕುಮಾರ್‌ ಕಾರ್ಯಕ್ರಮದ ಬಗ್ಗೆ ಅವರು ನನ್ನ ಜೊತೆ ಚರ್ಚಿಸಿದ್ದಾರೆ. ರಾಜಕೀಯ ಚರ್ಚಿಸಲಾಗಿತ್ತು ಎಂದು ಟ್ವೀಟ್‌ ಮಾಡಿದ್ರೆ, ಅದಕ್ಕೆ ಕ್ಷಮೆಯಿರಲಿ. ನನ್ನ ಹೆಸರಲ್ಲಿ ಟ್ವೀಟ್ ಮಾಡಿದವರನ್ನು ಕೂಡಲೇ ತೆಗೆದು ಹಾಕುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಭೇಟಿಯಾದ ತೇಜಸ್ವಿನಿ ಅನಂತಕುಮಾರ್, ಕುತೂಹಲ ಕೆರಳಿಸಿದ ಮಾತುಕತೆ

ಡಿಕೆ ಶಿವಕುಮಾರ್ ಹಾಗೂ ತೇಜಸ್ವಿನಿ ಅನಂತ ಕುಮಾರ್ ಮಾತುಕತೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಸೃಷ್ಟಿಸಿತ್ತು. ಇದಕ್ಕೆ ಡಿಕೆ ಶಿವಕುಮಾರ್ ಅವರ ಟ್ವೀಟ್​​ ಮತ್ತಷ್ಟು ಪುಷ್ಟಿ ನೀಡಿತ್ತು. ಕಳೆದ ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತಕುಮಾರ್ ಅವರು ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಆ ನಂತರ ಅವರ ಪುತ್ರಿ ಜೆಡಿಎಸ್ ಪರ ಟ್ವೀಟ್ ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಡಿಕೆ ಶಿವಕುಮಾರ್ ಭೇಟಿ ಸಹ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ವದಂತಿಗಳಿಗೆ ಸ್ವತಃ ಡಿಕೆ ಶಿವಕುಮಾರ್ ತೆರೆ ಎಳೆದಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ