ಮೈಸೂರು: ಕೋಲಾರದಲ್ಲಿ ಸ್ಪರ್ಧಿಸಲು ಮುಂದಾಗಿರುವ ಸಿದ್ದರಾಮಯ್ಯ (Former CM Siddaramaiah), ಎರಡನೇ ಕ್ಷೇತ್ರವಾಗಿ ಮೈಸೂರಿನ ವರುಣಾದಿಂದಲೂ ಸ್ಪರ್ಧಿಸಬಹುದು ಎಂಬ ಮಾತು ಇತ್ತೀಚೆಗೆ ಅಲ್ಲಲ್ಲಿ ಕೇಳಿಬರುತ್ತಿದೆ. ಆದರೆ, ಕಾಂಗ್ರೆಸ್ ಮೂಲಗಳು ಈ ಸುದ್ದಿಯನ್ನು ಅಲ್ಲಗಳೆದಿರುವುದು ಹೌದು. ಹಾಲಿ ಶಾಸಕ ಹಾಗು ಸಿದ್ದರಾಮಯ್ಯರ ಪುತ್ರ ಡಾ. ಯತೀಂದ್ರ (Varuna MLA Dr Yatindra) ಈಗಾಗಲೇ ವರುಣಾ ಕ್ಷೇತ್ರದಾದ್ಯಂತ ಸಂಚಾರ ನಡೆಸುತ್ತಿದ್ದಾರೆ. ಮೆಲ್ಲಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾನೇ ವರುಣಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದ್ದಾರೆ.
ನನ್ನ ತಂದೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದಿದ್ದಾರೆ. ಹಾಗಾಗಿ ವರುಣಾ ಕ್ಷೇತ್ರದಲ್ಲಿ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಹಾಲಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ವರುಣಾ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆ. ಈ ಕ್ಷೇತ್ರ ರಚನೆ ಆದಾಗಿನಿಂದಲೂ ಕಾಂಗ್ರೆಸ್ ಪಕ್ಷವೇ ಗೆಲ್ಲುತ್ತಾ ಬಂದಿದೆ. ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ನಮಗೆ ಭಯ ಇಲ್ಲ. ಯಾರೇ ಆದರೂ ಗೆಲ್ಲುವ ಗುರಿಯೊಂದಿಗೆ ಸ್ಪರ್ಧೆ ಮಾಡುತ್ತಾರಾದರೂ ಅಂತಿಮವಾಗಿ ವರುಣಾದಲ್ಲಿ ನಾವೇ ಗೆಲ್ಲುತ್ತೇವೆ ಎಂದು ಡಾ. ಯತೀಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಮ್ಮ ರಾಜ್ಯದಲ್ಲಿ ಹೊಸ ಪಕ್ಷ ಕಟ್ಟುವುದರಿಂದ ಏನೂ ಆಗಲ್ಲ: ಜನಾರ್ದನ ರೆಡ್ಡಿಗೆ ಟಾಂಗ್ ನೀಡಿದ ಸಂಸದ ದೇವೇಂದ್ರಪ್ಪ
ಇದೇ ವೇಳೆ, ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ಚುರುಕಿನಿಂದ ಸುತ್ತಾಟ ನಡೆಸುತ್ತಿದ್ದಾರೆ. ಮೆಲ್ಲಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳೀಯ ಕಾರ್ಯಕರ್ತರ ಬೈಕ್ ಏರಿ ರೌಂಡ್ಸ್ ನಡೆಸಿದ್ದಾರೆ. ಅಲ್ಲಿನ ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸುತ್ತಿದ್ದಾರೆ.
ಬೈಕ್ನಲ್ಲಿ ಸಂಚಾರ ನಡೆಸಲು ಕಾರಣವೇನೆಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಯತೀಂದ್ರ, ಗ್ರಾಮದ ಮತ್ತು ಜನರ ಸಮಸ್ಯೆ ಆಲಿಸಲು ಬೈಕ್ನಲ್ಲಿ ಹೋಗುವುದು ಸೂಕ್ತ. ಆದಕಾರಣ ಬೈಕ್ನಲ್ಲಿ ರೌಂಡ್ಸ್ ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ವರುಣ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಮೂರು ಚುನಾವಣೆಗಳಾಗಿದ್ದು, ಪ್ರತೀ ಬಾರಿಯೂ ಕಾಂಗ್ರೆಸ್ ಗೆದ್ದಿದೆ. 2008 ಮತ್ತು 2013ರಲ್ಲಿ ಸಿದ್ದರಾಮಯ್ಯ ಗೆದ್ದಿದ್ದರು. 2018ರ ಚುನಾವಣೆಯಲ್ಲಿ ಯತೀಂದ್ರ ಅವರು ಭಾರೀ ಮತಗಳ ಅಂತರದಿಂದ ದಾಖಲೆ ಜಯ ಪಡೆದಿದ್ದರು. 59 ಸಾವಿರ ಮತಗಳಿಗೂ ಹೆಚ್ಚು ಅಂತರದ ಗೆಲುವು ಅವರದ್ದಾಗಿತ್ತು. ಆದರೆ, ಈ ಬಾರಿ ಬಿಜೆಪಿಯಿಂದ ಪ್ರಬಲ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜ್ಯದಲ್ಲಿ ಈ ಬಾರಿ ಏಪ್ರಿಲ್–ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಗಳಾಗುವ ಸಾಧ್ಯತೆ ಇದೆ.
ವರದಿ: ರಾಮ್, ಟಿವಿ9 ವರದಿಗಾರ, ಮೈಸೂರು