AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೌಕರರ ಸಂಬಳಕ್ಕಿಲ್ಲ ಗ್ಯಾರಂಟಿ, ಇದು ಉಚಿತ, ಖಚಿತ, ನಿಶ್ಚಿತ; ಕಾಂಗ್ರೆಸ್ ಸರ್ಕಾರದ ಬಗ್ಗೆ ಬಿಜೆಪಿ ಲೇವಡಿ

Karnataka Politics; ಬಿಎಂಟಿಸಿ ನೌಕರರಿಗೆ ತಿಂಗಳು ಮುಗಿದು ಎರಡು ವಾರಗಳಾದರೂ ಸಂಬಳ ಕೈ ಸೇರಿಲ್ಲ! ಕೆಎಸ್​ಆರ್​ಟಿಸಿ ನೌಕರರು ಸಂಬಳವಿಲ್ಲದೆ ಡಿಪೋ ಬಿಟ್ಟು ಮನೆಗೆ ಹೋಗುತ್ತಿಲ್ಲ. 3 ತಿಂಗಳು ಕಳೆದರೂ ಅತಿಥಿ ಉಪನ್ಯಾಸಕರು ಸಂಬಳವನ್ನೇ ಕಂಡಿಲ್ಲ. ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೂ ಸಂಬಳ ಸಿಕ್ಕಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ನೌಕರರ ಸಂಬಳಕ್ಕಿಲ್ಲ ಗ್ಯಾರಂಟಿ, ಇದು ಉಚಿತ, ಖಚಿತ, ನಿಶ್ಚಿತ; ಕಾಂಗ್ರೆಸ್ ಸರ್ಕಾರದ ಬಗ್ಗೆ ಬಿಜೆಪಿ ಲೇವಡಿ
ಸಾಂದರ್ಭಿಕ ಚಿತ್ರ
Ganapathi Sharma
|

Updated on: Aug 12, 2023 | 5:25 PM

Share

ಬೆಂಗಳೂರು, ಆಗಸ್ಟ್ 12: ಕಾಂಗ್ರೆಸ್ ಸರ್ಕಾರದ (Congress Government) ಉಚಿತ ಗ್ಯಾರಂಟಿಗಳು, ಕಮಿಷನ್ ಆರೋಪ ಸೇರಿದಂತೆ ಹಲವು ವಿಚಾರಗಳ ಬಗ್ಗೆ ತೀವ್ರ ವಾಗ್ದಾಳಿ ನಡೆಸುತ್ತಿರುವ ಪ್ರತಿಪಕ್ಷ ಬಿಜೆಪಿ (BJP) ಇದೀಗ, ವಿವಿಧ ಇಲಾಖೆಗಳ ನೌಕರರಿಗೆ ವೇತನ ಬಿಡುಗಡೆಯಾಗದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಸರಣಿ ಟ್ವೀಟ್​ ಮೂಲಕ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಬಿಜೆಪಿ, ನೌಕರರ ಸಂಬಳಕ್ಕಿಲ್ಲ ಗ್ಯಾರಂಟಿ, ಇದು ಉಚಿತ, ಖಚಿತ, ನಿಶ್ಚಿತ ಎಂದು ವ್ಯಂಗ್ಯವಾಡಿದೆ. ಬಿಎಂಟಿಸಿ, ಕೆಎಸ್​ಆರ್​​ಟಿಸಿ ಸೇರಿದಂತೆ ಹಲವು ಇಲಾಖೆಗಳ ನೌಕರರಿಗೆ ವೇತನ ಬಿಡುಗಡೆಯಾಗದಿರುವುದನ್ನು ಬಿಜೆಪಿ ಪ್ರಶ್ನಿಸಿದೆ.

ಬಿಎಂಟಿಸಿ ನೌಕರರಿಗೆ ತಿಂಗಳು ಮುಗಿದು ಎರಡು ವಾರಗಳಾದರೂ ಸಂಬಳ ಕೈ ಸೇರಿಲ್ಲ! ಕೆಎಸ್​ಆರ್​ಟಿಸಿ ನೌಕರರು ಸಂಬಳವಿಲ್ಲದೆ ಡಿಪೋ ಬಿಟ್ಟು ಮನೆಗೆ ಹೋಗುತ್ತಿಲ್ಲ. 3 ತಿಂಗಳು ಕಳೆದರೂ ಅತಿಥಿ ಉಪನ್ಯಾಸಕರು ಸಂಬಳವನ್ನೇ ಕಂಡಿಲ್ಲ. ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೂ ಸಂಬಳ ಸಿಕ್ಕಿಲ್ಲ. ಶಾಲಾ ಶಿಕ್ಷಕರಿಗೂ ತಿಂಗಳಾದರೂ ಖಾತೆಗೆ ಸಂಬಳ ಜಮೆ ಆಗಿಲ್ಲ. ಗುತ್ತಿಗೆ ಆಧಾರದ ಸರ್ಕಾರಿ ನೌಕರರಿಗೆ ಕೂಡ ಸಂಬಳ ತಲುಪಿಲ್ಲ. ಇನ್ನೂ ಹಲವು ಇಲಾಖೆಗಳ ಸರ್ಕಾರಿ ನೌಕರರು ಸಂಬಳ ಸಿಗದೆ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ರಾಜ್ಯದ ಜನರ ಕಿವಿ ಮೇಲೆ ಹೂ ಇಟ್ಟ ಸಿದ್ದರಾಮಯ್ಯ ಅವರ ಸರ್ಕಾರ ಗ್ಯಾರಂಟಿಯ ಹಣ ಕೊಡುವುದು ಹಾಗಿರಲಿ, ಮೊದಲು ನೌಕರರ ಸಂಬಳವನ್ನು ಜಾರಿಗೊಳಿಸಿ ಸ್ವಾಮಿ ಎಂದು ಬಿಜೆಪಿ ಟ್ವೀಟ್​​ನಲ್ಲಿ ಉಲ್ಲೇಖಿಸಿದೆ.

ಅನಾಥರಾದ ಕಾಂಗ್ರೆಸ್ ಶಾಸಕರು; ಬಿಜೆಪಿ

ನೀನೇ ಸಾಕಿದ ಗಿಣಿ ಹದ್ದಾಗಿ‌‌ ಕುಕ್ಕಿತಲ್ಲ ಎನ್ನುವಂತಹ ಸ್ಥಿತಿ ಕರ್ನಾಟಕ ಕಾಂಗ್ರೆಸ್ ಶಾಸಕರದ್ದಾಗಿದೆ. ಒಂದು‌ ಕಡೆ ಸಚಿವರು ಶಾಸಕರ ಎದುರು ಧಿಮಾಕು ದೌಲತ್ತು ತೋರಿಸುತ್ತಿದ್ದಾರೆ. ಇನ್ನೊಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ ಅವರ ದುರಹಂಕಾರಕ್ಕೆ ಬೆಂಗಳೂರಿನ ಶಾಸಕರು ತಲೆ ಚಚ್ಚಿಕೊಳ್ಳುವಂತಾಗಿದೆ. ಶಾಸಕರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಅನುದಾನ ಬಿಡುಗಡೆಗೆ ಒತ್ತಾಯಿಸಿದ್ರೂ, ಡಿಕೆ ಶಿವಕುಮಾರ್ ಅವರು ಕ್ಯಾರೇ ಎನ್ನುತ್ತಿಲ್ಲ. ಸಿಎಂ, ಡಿಸಿಎಂ ಕಿತ್ತಾಟದಲ್ಲಿ ಕಾಂಗ್ರೆಸ್ ಶಾಸಕರು ಅಂತೂ ಅನಾಥರಾಗಿದ್ದಾರೆ. ಯಾವುದೇ ಕ್ಷೇತ್ರವಿರಲಿ ಎಟಿಎಂ ಸರ್ಕಾರಕ್ಕೆ ಕಮಿಷನ್ ಗ್ಯಾರಂಟಿ‌ ಆದ್ರೆ ಮಾತ್ರ ಅನುದಾನಕ್ಕೆ ಪರ್ಮಿಷನ್ ಎಂದು ಮತ್ತೊಂದು ಟ್ವೀಟ್​​ನಲ್ಲಿ ಬಿಜೆಪಿ ಉಲ್ಲೇಖಿಸಿದೆ.

ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್

ರಾಜ್ಯದ ಗುತ್ತಿಗೆದಾರರಿಗೆ ಎಟಿಎಂ ಸರ್ಕಾರದ ಆಡಳಿತಾವಧಿಯಲ್ಲಿ ಬಿಲ್ ಬಾಕಿ ‘ನಿಶ್ಚಿತ’, ಅವಮಾನ ‘ಉಚಿತ’, ಬೆದರಿಕೆ ‘ಖಚಿತ’ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಬಿಎಂಪಿ ಗುತ್ತಿಗೆದಾರರ ಬಳಿಕ ಈಗ ರಾಯಚೂರು ಗುತ್ತಿಗೆದಾರರು ಸಹ, ದಿವಾಳಿ ಸರ್ಕಾರದ ದುರ್ಬಲ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಸರ್ಕಾರ ಮಾತ್ರ ಗುತ್ತಿಗೆದಾರರನ್ನೇ ತಪ್ಪಿತಸ್ಥರನ್ನಾಗಿಸಿ, ತನಗೆ ತಾನೇ ಸಾಚಾತನದ ಸರ್ಟಿಫಿಕೇಟ್ ನೀಡಿಕೊಳ್ಳುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಬೊಮ್ಮಾಯಿ ಕಾಲದ ಬೇಕಾಬಿಟ್ಟಿ ಕಾಮಗಾರಿಗೆ ಹಣಕಾಸು ಇಲಾಖೆಯೇ ಒಪ್ಪಿರಲಿಲ್ಲ: ಜಗದೀಶ್​ ಶೆಟ್ಟರ್ ಸಿಡಿಗುಂಡು!

ಗುತ್ತಿಗೆದಾರರು ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಂತೆ ಏಕಾಏಕಿ ಬಿ.ಬಿ.ಎಂ.ಪಿ ಕಚೇರಿಗೆ ಬೆಂಕಿ ಬಿದ್ದಿದೆ.

ಅಂದಹಾಗೆ ಬಿಬಿಎಂಪಿ ಕಚೇರಿಗೆ ಬೆಂಕಿ ಸಂಬಂಧಿತ ಕಾಂಗ್ರೆಸ್ ಟ್ವೀಟ್ ಅನ್ನು ಡಿಲೀಟ್ ಮಾಡಲಾಗಿದ್ದು, ಪಕ್ಷದ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರೇ ಕಾಂಗ್ರೆಸ್ಸಿನ ಸುಳ್ಳುಗಳನ್ನು ಒಪ್ಪಲಾಗುತ್ತಿಲ್ಲ ಎಂದು ಆ ಮೂಲಕ ಹೇಳಿದ್ದಾರೆ! ಸುಳ್ಳೇ ಕಾಂಗ್ರೆಸ್ ಮನೇದೇವ್ರು ಎಂದು ಬಿಜೆಪಿ ವ್ಯಂಗ್ಯವಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ