National Herald case ಇಡಿ ದಾಳಿ ಖಂಡಿಸಿ ದೆಹಲಿಯ ಹೆರಾಲ್ಡ್ ಹೌಸ್ ಹೊರಗೆ ಕಾಂಗ್ರೆಸ್ ಪ್ರತಿಭಟನೆ
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ಕಾರ್ಯಕರ್ತರು ರಾಜಕೀಯ ಹಗೆ ಸಾಧಿಸಲು ಬಿಜೆಪಿ ಸರ್ಕಾರ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.
ದೆಹಲಿ: ಜಾರಿ ನಿರ್ದೇಶನಾಲಯ (Enforcement Directorate) ಮಂಗಳವಾರ ದೆಲಿಯಲ್ಲಿ ಕಾಂಗ್ರೆಸ್ ಪಕ್ಷ (Congress) ಒಡೆತನದ ನ್ಯಾಷನಲ್ ಹೆರಾಲ್ಡ್ ನ್ಯೂಸ್ ಪೇಪರ್ (National Herald newspaper)ಕಚೇರಿ ಮೇಲೆ ದಾಳಿ ನಡೆಸಿದ್ದು ಇದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಕಚೇರಿ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ಕಾರ್ಯಕರ್ತರು ರಾಜಕೀಯ ಹಗೆ ಸಾಧಿಸಲು ಬಿಜೆಪಿ ಸರ್ಕಾರ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಜಿಂದಾಬಾದ್, ಸೋನಿಯಾ ಗಾಂಧಿ ಜಿಂದಾಬಾದ್ ಎಂಬ ಘೋಷಣೆಗಳನ್ನು ಅವರು ಕೂಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಅಮಿತ್ ಮಾಳವೀಯ, ಗಾಂಧಿಗಳು ಕಾನೂನಿಗಿಂತ ಮೇಲಲ್ಲ ಎಂದಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಒಳ್ಳೆಯ ಸಮಯ ಕೆಟ್ಟ ಸಮಯ ಎಂಬುದಿಲ್ಲ ಎಂದು ಮಾಳವೀಯ ಹೇಳಿರುವುದಾಗಿ ಟೈಮ್ಸ್ ನೌ ವರದಿ ಮಾಡಿದೆ.
#WATCH | Congress workers protest outside Herald House in Delhi as raids by Enforcement Directorate (ED) in the National Herald case continue at 12 locations. pic.twitter.com/6SjpI24Ns7
— ANI (@ANI) August 2, 2022
ಸೆಂಟ್ರಲ್ ದೆಹಲಿಯ ಬಹಾದ್ದೂರ್ ಶಾ ಜಾಫರ್ ಮಾರ್ಗದಲ್ಲಿರುವ ನ್ಯಾಷನಲ್ ಹೆರಾಲ್ಡ್ ನ್ಯೂಸ್ ಪೇಪರ್ ಪ್ರಧಾನಕಚೇರಿ ಸೇರಿದಂತೆ 12 ಸ್ಥಳಗಳಲ್ಲಿ ಇಡಿ ದಾಳಿ ನಡೆಸಿದೆ. ನ್ಯಾಷನಲ್ ಹೆರಾಲ್ಡ್-ಸಂಯೋಜಿತ ವಹಿವಾಟಿನಲ್ಲಿ ಭಾಗಿಯಾಗಿರುವ ಸಂಸ್ಥೆಗಳ ವಿರುದ್ಧ ಇವತ್ತಿನ ದಾಳಿಯಲ್ಲಿ ನಿಧಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪುರಾವೆಗಳನ್ನು ಸಂಗ್ರಹಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್ ಗಾಂಧಿಯನ್ನು ಇಡಿ ವಿಚಾರಣೆಗೊಳಪಡಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ.
ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥೆ ಸುಪ್ರಿಯಾ ಶ್ರಿನೇತ್, ಭಾರತದ ಸ್ವಾತಂತ್ರ್ಯ ಚಳವಳಿಯ ಹೊತ್ತಲ್ಲಿ ಬ್ರಿಟಿಷರು ಮಾಡಿದಂತೆಯೇ ಮೋದಿ ಸರ್ಕಾರ ಮಾಡುತ್ತಿದೆ. ಬ್ರಿಟಿಷರು ನ್ಯಾಷನಲ್ ಹೆರಾಲ್ಡ್ ಮೇಲೆ ದಾಳಿ ನಡೆಸಿ, ಅದನ್ನು ನಿಷೇಧಿಸಿದ್ದರು. ಮೋದಿ ಸರ್ಕಾರವೂ ಅದನ್ನೇ ಮಾಡುತ್ತಿದೆ . ಈ ದೇಶದ ನಿಜವಾದ ಸಮಸ್ಯೆ ಬೆಲೆ ಏರಿಕೆ ಮತ್ತು ನಿರುದ್ಯೋಗ. ನೀವು ಅದೆಷ್ಟೇ ತಡೆಯಿರಿ, ರಸ್ತೆಯಿಂದ ಹಿಡಿದು ಸಂಸತ್ ವರೆಗೆ ನಾವು ಪ್ರತಿಭಟನೆ ನಡೆಸುತ್ತೇವೆ. ನೀವು ಬಿಜೆಪಿ ಸೇರಿದರೆ ಇಡಿ ನಿಮ್ಮೆಲ್ಲ ಪ್ರಕರಣಗಳನ್ನು ಮುಚ್ಚಿಹಾಕುತ್ತದೆ, ಇಲ್ಲದಿದ್ದರೆ ದಾಳಿ ನಡೆಸುತ್ತದೆ . ಜನರ ದನಿ ಮತ್ತು ಸತ್ಯದ ನುಡಿಗೆ ಸರ್ಕಾರ ಹೆದರುತ್ತಿದೆ. ಅದಕ್ಕಾಗಿಯೇ ಅದು ಈ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಹೆದರಿಸುತ್ತದೆ ಎಂದಿದ್ದಾರೆ.
Published On - 5:15 pm, Tue, 2 August 22