ಹುಬ್ಬಳ್ಳಿಯಿಂದ ಚಿತ್ರದುರ್ಗದ ಮುರುಘಾಮಠಕ್ಕೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಮಠಕ್ಕೆ ಆಗಮಿಸಲಿರುವ ರಾಹುಲ್ ಅವರೊಂದಿಗೆ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸುರ್ಜೆವಾಲಾ, ಕೆ.ಸಿ.ವೇಣುಗೋಪಾಲ ಇರುತ್ತಾರೆ. ಮಠದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರು ಸೇರಿ ವಿವಿಧ ಮಠಾಧೀಶರು ರಾಹುಲ್ ಅವರೊಂದಿಗೆ ಮಾತನಾಡಲಿದ್ದಾರೆ. ಮುರುಘಾಮಠದ ಬೇಟಿ ಬಳಿಕ ದಾವಣಗೆರೆಗೆ ತೆರಳಲಿರುವ ಅವರು, ದಾವಣಗೆರೆಯಲ್ಲಿ ಆಯೋಜಿಸಿರುವ ಸಿದ್ದರಾಮೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಇಲ್ಲ
ನಗರದಲ್ಲಿ ನಡೆದ ಕಾಂಗ್ರೆಸ್ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿಯೂ ರಾಹುಲ್ ಗಾಂಧಿ ಪಾಲ್ಗೊಂಡಿದ್ದರು. ಚುನಾವಣೆಗೆ ಮೊದಲು ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಒಗ್ಗೂಡಿ ಕೆಲಸ ಮಾಡಿ. ಪಕ್ಷವನ್ನು ಅಧಿಕಾರಕ್ಕೆ ತರಲು ಗಮನಕೊಡಿ ಎಂದು ಕಿವಿಮಾತು ಹೇಳಿದರು. ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಎಲ್ಲರೂ ಸಣ್ಣತನ ಬಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಅನಗತ್ಯವಾಗಿ ಪರಸ್ಪರ ಕಚ್ಚಾಟ ಬೇಡ. ಕರ್ನಾಟಕ ಕಾಂಗ್ರೆಸ್‌ನಲ್ಲಿ ಅತ್ಯುತ್ತಮ ನಾಯಕರ ಪಡೆ ಇದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಹರಿಪ್ರಸಾದ್ ಸೇರಿ ಬಹುತೇಕರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಮುಂದಿನ ಮುಖ್ಯಮಂತ್ರಿ ಘೋಷಣೆ ಅಪ್ರಸ್ತುತ. ಚುನಾವಣೆ ಫಲಿತಾಂಶದ ಬಳಿಕವಷ್ಟೇ ಈ ಬಗ್ಗೆ ತೀರ್ಮಾನ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರಕ ವಾತಾವರಣ ಇದೆ. ಬಿಜೆಪಿ ಆಡಳಿತದ ವಿರುದ್ಧ ಜನ ಬೇಸತ್ತಿದ್ದಾರೆ. ಹೀಗಿರುವಾಗ ನೀವೇಕೆ ನಿಮ್ಮ ಹೇಳಿಕೆಗಳಿಂದ ವಾತಾವರಣ ಕೆಡಿಸುತ್ತಿದ್ದೀರಿ. ಇದರಿಂದ ಯಾರಿಗೂ ಪ್ರಯೋಜನವಿಲ್ಲ. ಶೀಘ್ರವೇ ಟಿಕೆಟ್ ಘೋಷಣೆ ಮಾಡಲು ಬಹುತೇಕ ನಾಯಕರು ಮನವಿ ಮಾಡಿದ್ದಾರೆ. ಈ ವಿಚಾರವನ್ನು ಎಐಸಿಸಿ ಸ್ಕ್ರೀನಿಂಗ್ ಕಮಿಟಿ ನಿರ್ಧರಿಸುತ್ತದೆ ಎಂದು ಹೇಳಿದರು. ಸಭೆಯಲ್ಲಿ ಸುಮಾರು 20 ನಿಮಿಷ ಉಪಸ್ಥಿತರಿದ್ದ ಅವರು, ಭಾಷಣದ ನಂತರ ಜಿಮ್ಗೆ ತೆರಳಿದರು. ಬಳಿಕ ಕೆ.ಸಿ.ವೇಣುಗೋಪಾಲ್ ಅವರು ಸಭೆಯ ಅಧ್ಯಕ್ಷತೆ ವಹಿಸಿದರು. ರಾಹುಲ್ ಸಮ್ಮುಖದಲ್ಲಿಯೇ ಮಾತನಾಡಿದ್ದ ವೇಣುಗೋಪಾಲ್, ಅನಗತ್ಯ ಹೇಳಿಕೆ, ಶಿಸ್ತು ಮೀರಿ ವರ್ತಿಸುವವರನ್ನು ಪಕ್ಷ ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಸಿದರು.
ಪಕ್ಷದ ಹಿರಿಯ ನಾಯಕರು ಮತ್ತು ಕಾರ್ಯಕರ್ತರಿಗೆ ನೋವಾಗುವ ರೀತಿಯಲ್ಲಿ ಯಾರೂ ಮಾತಾಡಬಾರದು. ಪಕ್ಷದ ಎಲ್ಲೆ ಮೀರಿ, ಶಿಸ್ತು ಮೀರಿ ವರ್ತಿಸಿದರೆ ಯಾರೇ ಆದರೂ ಕ್ರಮ ತೆಗೆದುಕೊಳ್ಳುತ್ತೇವೆ. ಇಂಥ ವರ್ತನೆಯನ್ನು ಸಹಿಸಲು ಸಾಧ್ಯವೇ ಇಲ್ಲ. ಪಕ್ಷ ಕ್ಷಮಿಸಿ ಬಿಡುತ್ತದೆಂಬ ಉಡಾಫೆ ಧೋರಣೆ ಬೇಡ. ಶಿಸ್ತು ಉಲ್ಲಂಘಿಸುವವರ ವಿರುದ್ಧ ಕಠಿಣಾತಿ ಕಠಿಣ ಕ್ರಮವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ. ಇದು ನಾನು ನೀಡುತ್ತಿರುವ ಎಚ್ಚರಿಕೆ, ಎಲ್ಲರೂ ಕಿವಿಗೊಟ್ಟು ಕೇಳಬೇಕು ಎಂದರು.