ಬಳ್ಳಾರಿ/ಬೆಂಗಳೂರು, (ಜನವರಿ 23): ಅತ್ಯಾಪ್ತ ಗೆಳೆಯರಾಗಿದ್ದ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ನಡುವಿ ಬಿರುಕು ಕಾಣಿಸಿಕೊಂಡಿದೆ. ಒಟ್ಟಿಗೆ ಸೇರಿಕೊಂಡೇ ಎದುರಾಳಿಗಳನ್ನು ಮಟ್ಟ ಹಾಕುತ್ತಿದ್ದ ದೋಸ್ತಿಯಲ್ಲಿ ಕಲಹ ಉಂಟಾಗಿದ್ದು, ಇದೀಗ ಪರಸ್ಪರ ಬಹಿರಂಗವಾಗಿಯೇ ಕಿತ್ತಾಟಕ್ಕಿಳಿದಿದ್ದಾರೆ. ನನ್ನನ್ನು ರಾಜಕೀಯವಾಗಿ ತುಳಿಯಲು ರೆಡ್ಡಿ ಪ್ರಯತ್ನಿಸುತ್ತಿದ್ದಾರೆ ಎಂದು ಶ್ರೀರಾಮುಲು ಆರೋಪಿಸಿ ಪಕ್ಷ ತೊರೆಯುವ ಮಾತುಗಳನ್ನಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಜನಾರ್ದನ ರೆಡ್ಡಿ ಸಹ ಪತ್ರಿಕಾಗೋಷ್ಠಿ ನಡೆಸಿ ಶ್ರೀರಾಮುಲುಗೆ ತಿರುಗೇಟು ನೀಡಿದ್ದಾರೆ. ಅಲ್ಲದೇ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹೀಗೆ ಹಳೇ ದೋಸ್ತಿಗಳ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪ ಜೋರಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಧ್ಯ ಪ್ರವೇಶ ಮಾಡಿದ್ದು, ಶ್ರೀರಾಮುಲು ಮನವೊಲಿಕೆ ಮುಂದಾಗಿದ್ದಾರೆ.
ಸಂಡೂರು ಉಪಚುನಾವಣೆ ಸಂಬಂಧ ಕೋರ್ ಕಮಿಟಿ ಸಭೆಯಲ್ಲಿ ಉಸ್ತುವಾರಿ ರಾಧಾ ಮೋಹನ್ ದಾಸ್ ಹಾಗೂ ಶ್ರೀರಾಮುಲು ನಡುವೆ ಮಾತಿನ ಜಟಾಪಟಿ ನಡೆದಿದ್ದು, ಈ ವೇಳೆ ಶ್ರೀರಾಮುಲು ಪಕ್ಷ ತೊರೆಯುವ ಮಾತುಗಳನ್ನಾಡಿದ್ದಾರೆ. ಇದರಿಂದ ಅಲರ್ಟ್ ಆಗಿರುವ ಜೆಪಿ ನಡ್ಡಾ ಶ್ರೀರಾಮುಲು ಮನವೊಲಿಕೆಗೆ ಮುಂದಾಗಿದ್ದಾರೆ. ಇಂದು (ಜನವರಿ 23) ಜೆಪಿ ನಡ್ಡಾ ಅವರು ಶ್ರೀರಾಮುಲು ಅವರಿಗೆ ದೂರವಾಣಿ ಕರೆ ಮಾಡಿ ದೆಹಲಿಗೆ ಬನ್ನಿ ಕೂತು ಮಾತಾಡೋಣ ಎಂದು ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಈ ವೇಳೆ ಶ್ರೀರಾಮುಲು, ಕೋರ್ ಕಮಿಟಿ ಸಭೆಯಲ್ಲಿ ತಮಗಾದ ಅವಮಾನದ ಬಗ್ಗೆ ಜೆಪಿ ನಡ್ಡಾ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಪಕ್ಷ ಬಿಡುವ ಬಗ್ಗೆ ಹಾಗೂ ಪಕ್ಷದ ವಿರುದ್ಧ ಏನೂ ಮಾತನಾಡಬೇಡಿ. ದೆಹಲಿಗೆ ಬನ್ನಿ ಕುಳಿತುಕೊಂಡು ಮಾತಾಡೋಣ ಎಂದು ನಡ್ಡಾ ಮನವೊಲಿಸಿದ್ದು, ಇದಕ್ಕೆ ಶ್ರೀರಾಮುಲು ಸಹ ಓಕೆ ಎಂದಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಶ್ರೀರಾಮುಲು ದೆಹಲಿಗೆ ತೆರಳಲಿದ್ದು, ಜೆಪಿ ನಡ್ಡಾ, ಬಿಲ್ ಸಂತೋಷ್ ಸೇರಿದಂತೆ ಇತರೆ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಒಟ್ಟಿನಲ್ಲಿ ರಾಜ್ಯ ನಾಯಕರ ವಿರುದ್ಧ ಸಿಡಿದೆದ್ದಿರುವ ಶ್ರೀರಾಮುಲು ಅವರನ್ನು ಸದ್ಯಕ್ಕೆ ಜೆಪಿ ನಡ್ಡಾ ಅವರೇ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಮುಂದೆ ಏನಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
Published On - 6:11 pm, Thu, 23 January 25