ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಗೊಂದಲಗಳಿಗೆ ತೆರೆ ಎಳೆದ ದೇವೇಗೌಡ
ಸಿದ್ದರಾಮಯ್ಯ ಅವರು ನೈತಿಕತೆ ಬಗ್ಗೆ ಮಾತನಾಡುತ್ತಾರೆ. ನೀವು ಮಾತನಾಡುವ ಮಾತು ಹೃದಯದ ಅಂತರಾಳದಿಂದ ಬರಬೇಕು. ಅಧಿಕಾರ ಬರುತ್ತೆ, ಹೋಗುತ್ತೆ. ನೈತಿಕತೆ ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮಾಡಿದರು.
ಬೆಂಗಳೂರು: ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ವಿಚಾರ ರಾಜಕೀಯ ಪಡಸಾಲೆಯಲ್ಲಿ ಬಹಳ ಚರ್ಚೆಯಾಗುತ್ತಿದೆ. ವಿಧಾನಸಭೆ ಅಧಿವೇಶನದಲ್ಲೂ ಬಿಜೆಪಿ ನಾಯಕರು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಆರೋಪಗಳಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಅಲ್ಲದೇ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಜಂಟಿಯಾಗಿ ಸುದ್ದಿಗೋಷ್ಠಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಮೈತ್ರಿ ಪಕ್ಕಾ ಎನ್ನಲಾಗಿತ್ತು. ಆದರೆ ಇದಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ (HD Devegowda) ಅವರು ತೆರೆಳೆದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸೀಟು ಗೆಲ್ಲುತ್ತೇವೆ ಗೊತ್ತಿಲ್ಲ. ಸ್ವತಂತ್ರವಾಗಿ ಹೋರಾಟ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ಸಿಎಂ, ಪ್ರಧಾನಿ ಆದೆ, ಕುಮಾರಸ್ವಾಮಿ ಸೇರಿದಂತೆ ಅನೇಕರು ಸಿಎಂ ಆಗಿದ್ದಾರೆ. ಈ ಪಕ್ಷ ಅಳಿಸಿ ಹಾಕುತ್ತೇವೆ ಅಂದರೇ ಅದು ಸಾಧ್ಯವಿಲ್ಲ. ನಮ್ಮ 19 ಶಾಸಕರು, 7 ವಿಧಾನಪರಿಷತ್ ಸದಸ್ಯರ ಜೊತೆ ಕೂತು ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ. ಜಿ.ಟಿ ದೇವೇಗೌಡರ ಅಧ್ಯಕ್ಷತೆಯಲ್ಲಿ ಕಮೀಟ ಮಾಡಿ, ಕಾರ್ಯಕ್ರಮ ರೂಪಿಸಲು ಸಲಹೆ ನೀಡಿದ್ದಾರೆ. ಲಕ್ಷಾಂತರ ಕಾರ್ಯಕರ್ತರ ಅಭಿಪ್ರಾಯ ಪಡೆದು ಒಂದು ಗೂಡಿಸುವ ಕೆಲಸ ಮಾಡಲಿದ್ದೇವೆ ಎಂದರು.
ಸಿದ್ದರಾಮಯ್ಯ ಅವರು ನೈತಿಕತೆ ಬಗ್ಗೆ ಮಾತನಾಡುತ್ತಾರೆ. ನೀವು ಮಾತನಾಡುವ ಮಾತು ಹೃದಯದ ಅಂತರಾಳದಿಂದ ಬರಬೇಕು. ಅಧಿಕಾರ ಬರುತ್ತೆ, ಹೋಗುತ್ತೆ. ನೈತಿಕತೆ ಮುಖ್ಯ. ನೈಸ್ ಹಗರಣ ಕುರಿತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸದನ ಸಮಿತಿ ರಚನೆ ಮಾಡಿದರು. ಸಮಿತಿ ವರದಿಯಲ್ಲಿ 11,668 ಎಕರೆ ವಾಪಸ್ ಕೊಡಲು ವರದಿ ನೀಡಿದೆ. ಯಾರ ಭೂಮಿ ಇದು? ಭೂಮಿ ವಾಪಸ್ ಪಡೆಯಲು ಸಿದ್ದರಾಮಯ್ಯಗೆ ಏನು ಕಷ್ಟ? ಇದರಲ್ಲಿ ಬರುವ ಹಣವನ್ನು ಐದು ಉಚಿತ ಕಾರ್ಯಕ್ರಮಕ್ಕೆ ಬಳಸಿಕೊಳ್ಳಿ. ಕೋಟ್ಯಾಂತರ ಹಣ ಇದರಲ್ಲಿ ಬರುತ್ತೆ. ಒಂದು ಎಕರೆಗೆ ಐದು, ಹತ್ತು ಕೋಟಿ ಬರುತ್ತೆ ಎಂದರು.
ಇದನ್ನೂ ಓದಿ: ಸಚಿವರ ವಿರುದ್ಧ ಸಿಎಂ ಸಿದ್ದರಾಮಯ್ಯಗೆ 20 ಶಾಸಕರು ದೂರು ಕೊಟ್ಟಿದ್ದಾರೆ: ಎನ್ ರವಿಕುಮಾರ್
ಇನ್ನು ಕಾಂಗ್ರೆಸ್ ಸಮಯ ಬಂದಾಗ ಸೆಕ್ಯುಲರ್ನತ್ತ ವಾಲುತ್ತದೆ. ಧರ್ಮ ಅಂತ ಬಂದಾಗ ನೋ ಸೆಕ್ಯುಲರ್ ಅನ್ನುತ್ತೆ. 1983ರಲ್ಲಿ ಜನತಾ ಪಕ್ಷ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿತ್ತು. ಇದು ಕಾಂಗ್ರೆಸೇತರ ಮೊದಲ ಸರ್ಕಾರ. 18 ಜನ ಬಿಜೆಪಿ, 8 ಕಮ್ಯುನಿಸ್ಟ್, 5 ಪಕ್ಷೇತರು ಸೇರಿ ಮೊದಲ ಬಾರಿಗೆ ಕಾಂಗ್ರೆಸೇತರ ಸರ್ಕಾರ ರಚನೆ ಮಾಡಲಾಯ್ತು. ಆ ಸರ್ಕಾರದಲ್ಲಿ ಸಿದ್ದರಾಮಯ್ಯ ಕಾವಲು ಸಮಿತಿ ಅಧ್ಯಕ್ಷ ಆಗಿದ್ದರು.
ಇದು ಸುಭದ್ರ ಸರ್ಕಾರ ಅಲ್ಲ ಅನ್ನೋದು ಎರಡು ತಿಂಗಳಲ್ಲಿ ಗೊತ್ತಾಗಿದೆ
ಸಿಂಗಾಪುರದಲ್ಲಿ ಆಪರೇಷನ್ ಬಗ್ಗೆ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಶಾಸಕ ಜಿಟಿ ದೇವೇಗೌಡ ಮಾತನಾಡಿ ನಾವು ಇರೋದು ಕೇವಲ 19 ಶಾಸಕರು, ಸರ್ಕಾರ ಬೀಳಿಸೋಕೆ ಆಗುತ್ತಾ? ಕಾಂಗ್ರೆಸ್ ಸರ್ಕಾರ ಬೀಳುವುದು ನಮ್ಮ ಕೈಯಲ್ಲಿ ಇಲ್ಲ. ಜೆಡಿಎಸ್ ಮತ್ತೆ ಸಂಘಟನೆ ಮಾಡಿ ಅಧಿಕಾರಕ್ಕೆ ಬಂದೇ ಬರುತ್ತೆ. ಉತ್ತರ ಕರ್ನಾಟಕದಲ್ಲಿ ಜನರು ದೇವೇಗೌಡರನ್ನ ನೆನೆಯುತ್ತಾರೆ. ಸುಭದ್ರ ಸರ್ಕಾರ ಅಲ್ಲ ಅನ್ನೋದು ಎರಡು ತಿಂಗಳಲ್ಲಿ ಗೊತ್ತಾಗಿದೆ. ಕಾಂಗ್ರೆಸ್ನಲ್ಲಿ ಅಸಮಾಧಾನ ಭುಗಿಲೆದ್ದಿದೆ ಎಂದು ಹೇಳಿದರು.
ಕರ್ನಾಟಕ ಒಂದೇ ಭಾರತ ದೇಶ ಅಲ್ಲ. ಕರ್ನಾಟಕ ರಾಜ್ಯ ಚುನಾವಣೆ, ಲೋಕಸಭೆ ಚುನಾವಣೆಯಲ್ಲಿ ಪ್ರಭಾವ ಬೀರಲ್ಲ. ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆಯಲ್ಲಿ ಇರುವುದು ಕೇವಲ 50 ಸ್ಥಾನ. ಕಾಂಗ್ರೆಸ್ 50 ಸ್ಥಾನದಿಂದ 500 ಸ್ಥಾನಕ್ಕೆ ಬರುವುದಕ್ಕೆ ಆಗುತ್ತಾ? ಎಂದು ಪ್ರಶ್ನಿಸಿದರು.
ಜೆಡಿಎಸ್ ಎಲ್ಲಿದೆ ಮುಳುಗಿದೆ. ಎಂಎಲ್ಎ ಅಲ್ಲಿ ಎಲ್ಲಿದ್ದಾರೆ ಅಂತ ಮಾತನಾಡುತ್ತಾರೆ. ಜೆಡಿಎಸ್ ಬಗ್ಗೆ ಟೀಕೆ ಮಾಡ್ತೀರಾ ಜೆಡಿಎಸ್ ಎರಡು ಸ್ಥಾನ ಇದ್ದಾಗಲೂ ಗಟ್ಟಿ, ಈಗಲೂ ಜೆಡಿಎಸ್ ಪಕ್ಷ ಗಟ್ಟಿಯಾಗಿದೆ. ಹರಿಪ್ರಸಾದ್ ಹೇಳಿದರು ಯಾರನ್ನ ಬೇಕಾದರು ಸಿಎಂ ಮಾಡುತ್ತೇನೆ. ಯಾರನ್ನು ಬೇಕಾದರೂ ಇಳಿಸುತ್ತೇನೆ ಅಂತ. ನಾವು ಹೇಳಿದ್ವ ಅದನ್ನ. ಈಗ ನೀವು ಬೀಳಿಸುವ ತಂತ್ರ ಆಗುತ್ತಿದೆ ಅಂತ ಹೇಳುತ್ತಿದ್ದೀರಿ ಎಂದರು.
ಐದು ಯೋಜನೆಗಳನ್ನು ಎಲ್ಲಿಂದ ಹಣ ತರುತ್ತೀರಿ. ರೈತರಿಗೆ ಕೃಷಿಗೆ ಅನುಕೂಲಕ್ಕೆ ಹಣ ಎಲ್ಲಿ ಇಟ್ಟಿದ್ದೀರಾ? ಆರ್ಥಿಕ ತಜ್ಞರು ಹೇಳುತ್ತಿದ್ದಾರೆ ಹಣ ಹೊಂದಿಸಲು ಕಷ್ಟ ಅಂತ. ಅಲ್ಪಸಂಖ್ಯಾತರಿಂದ ನೀವು ಅಧಿಕಾರಕ್ಕೆ ಬಂದಿದ್ದೀರಾ. ಅವರಿಗೆ ನೀವು ಅನುಕೂಲ ಮಾಡಿದ್ದೀರಾ. 4% ಮೀಸಲಾತಿ ವಾಪಸ್ ನೀಡಿದ್ರಾ ಎಂದು ಪ್ರಶ್ನಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:40 pm, Tue, 25 July 23