ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ಹಿರಿಯೂರು ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್
ಮಾಜಿ ಶಾಸಕಿ ಪೂರ್ಣಿಮಾ ಮತ್ತು ಟಿ.ಡಿ.ಶ್ರೀನಿವಾಸ್ ಶುಕ್ರವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸೇರ್ಪಡೆಯಾಗಿದ್ದಾರೆ. ಈ ವೇಳೆ ಸಚಿವ ಡಿ.ಸುಧಾಕರ್, ಮಾಜಿ ಸಿಎಂ ಮೊಯ್ಲಿ ಮತ್ತು ಶಾಸಕ ಜಯಚಂದ್ರ ಭಾಗಿ ಆಗಿದ್ದರು. ಸೇರ್ಪಡೆ ಬಳಿಕ ಮಾತನಾಡಿ ಸಿಎಂ ಸಿದ್ದರಾಮಯ್ಯ ಎ.ಕೃಷ್ಣಪ್ಪ ಪುತ್ರಿ ಪೂರ್ಣಿಮಾಗೆ ಟಿಕೆಟ್ ತಪ್ಪಲು ನಾನೂ ಸ್ವಲ್ಪ ಕಾರಣ ಎಂದಿದ್ದಾರೆ.
ಬೆಂಗಳೂರು, ಅಕ್ಟೋಬರ್ 20: ಹಿರಿಯೂರು ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ (Poornima Srinivas) ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸೇರ್ಪಡೆಯಾದರು. ಪೂರ್ಣಿಮಾ ಅವರ ಪತಿ ಶ್ರೀನಿವಾಸ್ ಅವರು ಸಹ ಕಾಂಗ್ರೆಸ್ ಸೇರಿದರು. ಈ ವೇಳೆ ಸಚಿವ ಡಿ.ಸುಧಾಕರ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಶಾಸಕ ಜಯಚಂದ್ರ ಸೇರಿದಂತೆ ಹಲವು ಮುಖಡರು ಉಪಸ್ಥಿತರಿದ್ದರು.
ಎ.ಕೃಷ್ಣಪ್ಪ ಪುತ್ರಿ ಪೂರ್ಣಿಮಾಗೆ ಟಿಕೆಟ್ ತಪ್ಪಲು ನಾನೂ ಸ್ವಲ್ಪ ಕಾರಣ: ಸಿಎಂ ಸಿದ್ದರಾಮಯ್ಯ
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಎ.ಕೃಷ್ಣಪ್ಪ ಪುತ್ರಿ ಪೂರ್ಣಿಮಾಗೆ ಟಿಕೆಟ್ ತಪ್ಪಲು ನಾನೂ ಸ್ವಲ್ಪ ಕಾರಣ. ಟಿಕೆಟ್ ತಪ್ಪಿಸಿದ್ದು ನಾನೇ ಅಂತಾ ಗೊತ್ತಿದ್ರೂ ಸಿಟ್ಟು ಮಾಡಿಕೊಂಡಿಲ್ಲ. ಭೈರತಿ ಬಸವರಾಜಗೆ ಟಿಕೆಟ್ ಕೊಡಿಸಲು ಹೋಗಿ ಇವರಿಗೆ ತಪ್ಪಿತು. ಬಿಜೆಪಿ ಶಾಸಕರಾದರೂ ಕಾಂಗ್ರೆಸ್ ರಕ್ತ ಪೂರ್ಣಿಮಾರಲ್ಲಿ ಹರಿಯುತ್ತಿತ್ತು ಎಂದು ಹೇಳಿದ್ದಾರೆ.
ಶ್ರೀನಿವಾಸ್ ಕೂಡ ಒಲ್ಲದ ಮನಸ್ಸಿನಿಂದಲೇ ಬಿಜೆಪಿಯಲ್ಲಿದ್ದರು. ಕೃಷ್ಣಪ್ಪ, ಶ್ರೀನಿವಾಸ್ ಇಬ್ಬರೂ ಸಾಮಾಜಿಕ ನ್ಯಾಯದ ಪರವಾಗಿ ಇರುವವರು. ಕಾಂಗ್ರೆಸ್ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಪಕ್ಷ. ಸಮಾಜವನ್ನು ಜಾತಿ ಧರ್ಮದ ಆಧಾರದ ಮೇಲೆ ಒಡೆಯುವ ಪಕ್ಷ ಅಲ್ಲ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ಸಚಿವ ಸಂಪುಟ ಬದಲಾವಣೆ: ಕಾಂಗ್ರೆಸ್ನಿಂದ ತೇಲಿಬಂತು ಮತ್ತೊಂದು ಸುದ್ದಿ
ಕೆಲವರು ಜಾತ್ಯತೀತ ಅಂತಾ ಬೋರ್ಡ್ ಹಾಕಿಕೊಳ್ಳುತ್ತಾರೆ. ಆಮೇಲೆ ಸ್ವಾರ್ಥಕ್ಕಾಗಿ ಕೋಮುವಾದಿಗಳ ಜತೆ ಸೇರಿಕೊಳ್ಳುತ್ತಾರೆ ಎಂದು JDS ವಿರುದ್ಧ ಕಿಡಿ ಕಾರಿದ್ದಾರೆ. ಕೋಮುವಾದ ದೇಶಕ್ಕೆ ಹಾನಿಕಾರಕ. ಬಹುತ್ವ ಇರುವ ದೇಶದಲ್ಲಿ ಕೋಮುವಾದ ಸರಿಯಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಎ.ಕೃಷ್ಣಪ್ಪ ಪುತ್ರಿಗೆ ಬಹಳ ದಿನದಿಂದ ಗಾಳ ಹಾಕಿಕೊಂಡೇ ಬಂದಿದ್ದೆ: ಡಿಸಿಎಂ ಡಿಕೆ ಶಿವಕುಮಾರ್
ಈ ವೇಳೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಎ.ಕೃಷ್ಣಪ್ಪ ಪುತ್ರಿಗೆ (ಪೂರ್ಣಿಮಾ) ಬಹಳ ದಿನದಿಂದ ಗಾಳ ಹಾಕಿಕೊಂಡೇ ಬಂದಿದ್ದೆ. ಆ ಮೀನು ಕಚ್ಚಲಿಲ್ಲ, ಶ್ರೀನಿವಾಸ್ಗೂ ಗಾಳ ಹಾಕುತ್ತಿದ್ದೆ. ಅದೂ ಕಚ್ಚಿರಲಿಲ್ಲ. ಏನೇನೋ ಲೆಕ್ಕಾಚಾರ ಹಾಕುತ್ತಿದ್ದ ಮೀನು ಈಗ ಸೇರಿಕೊಂಡಿದೆ. ಕೊನೆಗೂ ನಮ್ಮ ಪಕ್ಷಕ್ಕೆ ಎಲ್ಲಾ ಸೇರ್ಪಡೆ ಆಗಿದ್ದಾರೆ. ಯಾವ ಸಮುದಾಯದ 4-5 ಸಾವಿರ ಜನ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.