ಯುಟರ್ನ್‌ ಹೊಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಈಗ ಹೇಳಿದ್ದೇನು?

| Updated By: Digi Tech Desk

Updated on: Aug 19, 2022 | 3:19 PM

ನಿನ್ನೆ ನಾನು ನೀಡಿದ ಹೇಳಿಕೆ ಬಗ್ಗೆ ಸಾಕಷ್ಟು ಗೊಂದಲ ಆಗಿದೆ. ಶಿಕಾರಿಪುರದ ಜನ ಒತ್ತಾಯ ಮಾಡಿದ್ದಕ್ಕೆ ನಿನ್ನೆ ಆ ರೀತಿ ಹೇಳಿದ್ದೇನೆ. ಆದ್ರೆ ಅಂತಿಮ ತೀರ್ಮಾನ ಮಾಡೋದು ಮೋದಿ, ಶಾ, ಜೆ.ಪಿ. ನಡ್ಡಾ - ಬಿ.ಎಸ್. ಯಡಿಯೂರಪ್ಪ

ಯುಟರ್ನ್‌ ಹೊಡೆದ ಮಾಜಿ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ, ಈಗ ಹೇಳಿದ್ದೇನು?
ಯುಟರ್ನ್‌ ಹೊಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇಂದು ಹೇಳಿದ್ದೇನು?
Follow us on

ಬೆಂಗಳೂರು: ನಿನ್ನೆಯಷ್ಟೇ ರಾಜಕೀಯ ಸನ್ಯಾಸತ್ವ ಘೋಷಿಸಿ, ಪುತ್ರ ವಿಜಯೇಂದ್ರಗಾಗಿ ಶಿಕಾರಿಪುರ ಕ್ಷೇತ್ರ (Shikaripura) ಬಿಟ್ಟುಕೊಡುವ ನಿರ್ಧಾರ ಪ್ರಕಟಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಇಂದು ಯುಟರ್ನ್‌ ಹೊಡೆದಿದ್ದಾರೆ. ನಿನ್ನೆ ನಾನು ನೀಡಿದ ಹೇಳಿಕೆ ಬಗ್ಗೆ ಸಾಕಷ್ಟು ಗೊಂದಲ ಆಗಿದೆ. ಶಿಕಾರಿಪುರದ ಜನ ಒತ್ತಾಯ ಮಾಡಿದ್ದಕ್ಕೆ ನಿನ್ನೆ ಆ ರೀತಿ ಹೇಳಿದ್ದೇನೆ. ಆದ್ರೆ ಅಂತಿಮ ತೀರ್ಮಾನ ಮಾಡೋದು ಮೋದಿ, ಶಾ, ಜೆ.ಪಿ. ನಡ್ಡಾ. ಪಕ್ಷದ ವರಿಷ್ಠರ ತೀರ್ಮಾನವೇ (BJP High Command) ಅಂತಿಮ. ನಾನು ನನ್ನ ಸಲಹೆ ಹೇಳಿದ್ದೇನೆ ಅಷ್ಟೇ…  ಎಂದು ಮಾಜಿ ಸಿಎಂ ಬಿಎಸ್‌ವೈ ಇದೀಗತಾನೆ ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದು, ಹಳೇ ಮೈಸೂರು ಭಾಗದಲ್ಲಿ ಬೇಕಾದರೂ ವಿಜಯೇಂದ್ರ ಸ್ಪರ್ಧಿಸ್ತಾರೆ. ಎಲ್ಲಿ ಸ್ಪರ್ಧಿಸಿದರೂ ಗೆದ್ದು ಬರುವ ಶಕ್ತಿ ಬಿ.ವೈ. ವಿಜಯೇಂದ್ರಗೆ ಇದೆ. ಶಿಕಾರಿಪುರದ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ನಿನ್ನೆ ಹಾಗೆ ಕ್ಷೇತ್ರ ಬಿಟ್ಟುಕೊಡುವ ಮಾತನ್ನಾಡಿದ್ದೆ. ಪಕ್ಷದ ವರಿಷ್ಠರು ಏನೇ ತೀರ್ಮಾನ ಮಾಡಿದರೂ ಬದ್ಧರಾಗಿರುತ್ತೇವೆ. ಪ್ರಧಾನಿ ಮೋದಿ, ಅಮಿತ್‌ ಶಾ ಮತ್ತು ಜೆ.ಪಿ. ನಡ್ಡಾ ಸೂಚನೆ ಪಾಲಿಸುತ್ತೇವೆ ಎಂದು ಹೇಳಿದ್ದಾರೆ.

140 ಕ್ಕೂ ಹೆಚ್ಚು ಸೀಟು ಗೆಲ್ಲಿಸಿಕೊಂಡು ಬರುತ್ತೇವೆ-ಯಡಿಯೂರಪ್ಪ

ಪಕ್ಷದಲ್ಲಿ ನನ್ನ ಮೂಲೆಗುಂಪು ಮಾಡಲಾಯ್ತು ಎನ್ನೋದು ಸತ್ಯಕ್ಕೆ ದೂರವಾದ ಮಾತು. ನನಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಪುರಸಭೆ ಸದಸ್ಯನಾಗಿದ್ದವನನ್ನು ನಾಲ್ಕು ಬಾರಿ ಸಿಎಂ ಮಾಡಿದೆ. ನಾನು ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ಕಟ್ಟುತ್ತೇನೆ. 140 ಕ್ಕೂ ಹೆಚ್ಚು ಸೀಟು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಬಿಎಸ್​ವೈ ಭಿನ್ನರಾಗಕ್ಕೆ ಕಾರಣ ಏನು?:

ವಿಜಯೇಂದ್ರ ಸ್ಪರ್ಧೆ ವಿಚಾರವಾಗಿ ಬಿಎಸ್​ವೈ ಭಿನ್ನರಾಗ ತೋರಿದ್ದು, ಬಿಜೆಪಿ ಆಂತರಿಕ ಆಕ್ಷೇಪದಿಂದ ರಾಗ ಬದಲಿಸಿದ್ರಾ ರಾಜಾಹುಲಿ ಎಂಬ ಅನುಮಾನ ಕಾಡತೊಡಗಿದೆ. ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರಗೆ ಸ್ವಯಂ ಟಿಕೇಟ್​ ಘೋಷಿಸಿ ಪಕ್ಷದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು. ಇದರಿಂದಾಗಿ ಪಕ್ಷದೊಳಗೆ ಬಿಜೆಪಿ ನಾಯಕರಿಂದ ಆಂತರಿಕ ಆಕ್ಷೇಪ ವ್ಯಕ್ತವಾಗಿತ್ತು.

ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್​ ವಿವೇಚನೆಯಂತೆ ನಡೆಯುತ್ತದೆ. ಬಿಜೆಪಿಯ ಕೇಂದ್ರ ಚುನಾವಾಣ ಸಮಿತಿಯಿಂದ ಅಭ್ಯರ್ಥಿಗಳ ಆಯ್ಕೆಯಾಗುತ್ತದೆ. ಆದರೆ ಬಿಎಸ್​ವೈ ಅದಕ್ಕೂ ಮುಂಚಿತವಾಗಿ ಟಿಕೆಟ್​ ಘೋಷಿಸಿದ್ದಾರೆ. ಪಕ್ಷದಲ್ಲಿ ತಮಗಿರುವ ಹಿರಿಯತನ ಮತ್ತು ಹಿಡಿತ ಆಧರಿಸಿ ಪುತ್ರನಿಗೆ ಟಿಕೆಟ್​ ಘೋಷಿಸಿದ್ದರು. ಹೇಳಿಕೆ ನಂತರದ ಪರಿಣಾಮಗಳ ಬಗ್ಗೆ ಬಿಎಸ್​ವೈ ಪರಮಾರ್ಶೆ ನಡೆಸಿದ್ದು, ಅದೇ ಕಾರಣಕ್ಕೆ ನಿನ್ನೆಯ ಹೇಳಿಕೆಗೆ ತಿದ್ದುಪಡಿ ತಂದಿದ್ದಾರೆ ಬಿಎಸ್​ವೈ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.

ಸಿಎಂ ಬೊಮ್ಮಾಯಿ, ಸಚಿವ ಅಶೋಕ್ ಕಾವೇರಿ ನಿವಾಸಕ್ಕೆ ದೌಡು!

ನಿನ್ನೆ ಮಹತ್ವದ ರಾಜಕೀಯ ನಿರ್ಧಾರ ಪ್ರಕಟಿಸುವ ಸಂದರ್ಭದಲ್ಲಿ ಸ್ವ ಕ್ಷೇತ್ರ ಶಿಕಾರಿಪುರದಲ್ಲಿ ತಂಗಿದ್ದ ಯಡಿಯೂರಪ್ಪ ಇಂದು ಸೀದಾ ಬೆಂಗಳೂರಿನ ಕಾವೇರಿ ನಿವಾಸಕ್ಕೆ ವಾಪಸಾಗಿದ್ದಾರೆ. ಯಡಿಯೂರಪ್ಪ ವಾಪಸಾಗುತ್ತಿದ್ದಂತೆ ರಾಜಕೀಯ ಪ್ರಾಮುಖ್ಯತೆ ಅರಿತು ಅವರನ್ನು ಭೇಟಿಯಾಗಲು ಸಿಎಂ ಬಸವರಾಜ ಬೊಮ್ಮಾಯಿ ಕಾವೇರಿ ನಿವಾಸಕ್ಕೆ ಆಗಮಿಸಿದ್ದಾರೆ. ಚುನಾವಣಾ ಕಣದಿಂದ ಹಿಂದೆ ಸರಿಯುವ ಬೆಳವಣಿಗೆಗೆ ಸಂಬಂಧಿಸಿ ಯಡಿಯೂರಪ್ಪ ಜೊತೆ ಸಿಎಂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಸಿಎಂಗೆ ಸಚಿವ ಆರ್ ಅಶೋಕ್ ಕೂಡ ಸಾಥ್ ನೀಡಿದ್ದಾರೆ.

ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ:

ಯಡಿಯೂರಪ್ಪ ಅಂದ್ರೆ ಒಂದು ದೊಡ್ಡ ಶಕ್ತಿ. ಕರ್ನಾಟಕದಲ್ಲಿ ಜನಪ್ರಿಯ ವ್ಯಕ್ತಿ ಯಾರೂ ಅಂದ್ರೆ ಅದು ಯಡಿಯೂರಪ್ಪ ಅವರು. ಅವರು ಈಗಾಗಲೇ ಹೇಳಿದ್ದಾರೆ ಮನೆಯಲ್ಲಿ ಕೂರಲ್ಲ ಅಂತ. ಈ ವಿಚಾರದಲ್ಲಿ ತೆರೆ ಎಳೆಯಬೇಕು ಅಂತ ನಾನು ಕೇಳಿಕೊಳ್ಳುತ್ತೇನೆ. ಅಂತಿಮವಾಗಿ ವರಿಷ್ಠರು ತೀರ್ಮಾನ ಮಾಡ್ತಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

Published On - 3:20 pm, Sat, 23 July 22