ಚಿಕ್ಕಮಗಳೂರು, ಮಾರ್ಚ 01: ಲೋಕಸಭೆ ಚುನಾವಣೆಗೆ (Lok Sabha Election) ಎರಡು ತಿಂಗಳು ಬಾಕಿ ಉಳಿದಿದೆ. ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲಲು ರಣತಂತ್ರ ಹೆಣೆಯುತ್ತಿವೆ. ಇನ್ನು ಕಾರ್ನಾಟಕದಲ್ಲಿ ಜೆಡಿಎಸ್ (JDS) ಬಿಜೆಪಿ (BJP) ಜೊತೆ ಮೈತ್ರಿ ಮಾಡಿಕೊಂಡಿದೆ. ಇದರಿಂದ ಮೋದಿ ಅಲೆಯಲ್ಲಿ ಮತ್ತು ಸ್ಥಳೀಯ ನಾಯಕರ ವರ್ಚಸ್ಸಿನಿಂದ ಕನಿಷ್ಠ 2-3 ಕ್ಷೇತ್ರಗಳಲ್ಲಿ ಗೆಲವು ಸಾಧಿಸುತ್ತೇವೆ ಎಂದು ಜೆಡಿಎಸ್ ನಾಯಕರು ಲೆಕ್ಕಾಚಾರ ಹಾಕಿದ್ದಾರೆ. ಇನ್ನು ಜೆಡಿಎಸ್ ಲೋಕಸಭೆ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ನಿರ್ಧಿರಿಸಿದೆ. ವಿಶೇಷವಾಗಿ ಮಂಡ್ಯ (Mandya) ಕ್ಷೇತ್ರವನ್ನೇ ಪ್ರಮುಖವಾಗಿಸಿಕೊಂಡಿದೆ. ಈ ಸಂಬಂಧ ತಂತ್ರಗಾರಿಗೆ ರೂಪಿಸಲು ಕಾಫಿನಾಡು ಚಿಕ್ಕಮಗಳೂರಿನ ರೆಸಾರ್ಟ್ನಲ್ಲಿ (Chikkamagaluru Resort) ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರು ಪಕ್ಷದ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ.
ಹೀಗಾಗಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ಇಂದಿನಿಂದ ಮೂರು ದಿನಗಳ ಕಾಲ ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಸಮೀಪದ ಹನಿ ಡ್ಯೂ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಮತ್ತು ಶಾಸಕರು ಇಂದು (ಮಾ.01) ಮಧ್ಯಾಹ್ನ ಚಿಕ್ಕಮಗಳೂರಿಗೆ ತೆರಳಲಿದ್ದಾರೆ. ರೆಸಾರ್ಟ್ನಲ್ಲಿ ಕುಳಿತು ಲೋಕಸಭಾ ಚುನಾವಣೆ ಸಂಬಂಧ ರಣತಂತ್ರ ಹೆಣೆಯಲಿದ್ದಾರೆ.
ಈ ಸಭೆಯಲ್ಲಿ ಮಂಡ್ಯ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸುವ ಬಗ್ಗೆ ಚರ್ಚಿಸಲಿದ್ದಾರೆ. ಹಾಗೆ ಮಂಡ್ಯದ ರಾಜಕೀಯ ಬೆಳವಣಿಗೆ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಹಳೆ ಮೈಸೂರು ಭಾಗದ ಜೆಡಿಎಸ್ ಶಾಸಕರು, ಮುಖಂಡರು ಭಾಗಿಯಾಗಲಿದ್ದಾರೆ. ಹೀಗಾಗಿ ಹೆಚ್ಡಿ ಕುಮಾರಸ್ವಾಮಿ ಸಂಪೂರ್ಣ ರೆಸಾರ್ಟ್ ಬುಕ್ ಮಾಡಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಕರ್ನಾಟಕದಿಂದ ಜೈಶಂಕರ್, ನಿರ್ಮಲಾ ಸೀತಾರಾಮನ್ ಸ್ಪರ್ಧೆ ಸಾಧ್ಯತೆ: ಪ್ರಲ್ಹಾದ್ ಜೋಶಿ
ಮೂರು ದಿನಗಳ ಸಭೆ ನಂತರ ಕೊನೆ ದಿನ ಮಾರ್ಚ್ 3 ರಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಎಂಎಲ್ಸಿ ಭೋಜೇಗೌಡ ಅವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೆಚ್ಡಿ ಕುಮಾರಸ್ವಾಮಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಪಕ್ಷೇತರವಾಗಿ ಸ್ಪರ್ಧಿಸಿದ್ದರು. ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಅಘೋಷಿತ ಬೆಂಬಲ ವ್ಯಕ್ತಪಡಿಸಿತ್ತು. ಅಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿ, ಸೋಲು ಕಂಡಿದ್ದರು. ಸುಮಲತಾ ಅಂಬರೀಶ್ ಗೆದ್ದಿದ್ದರು. ಆದರೆ ಇದೀಗ ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದು, ಅತ್ತ ಜೆಡಿಎಸ್ ಬಿಜೆಪಿ ಮಿತ್ರಪಕ್ಷದಲ್ಲಿ ಸೇರಿಕೊಂಡಿದೆ. ಇದರಿಂದ ಈ ಬಾರಿಯ ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ಸುಮಲತಾ ಅಂಬರೀಶ್ ಅವರ ಪಾಲಾಗೊತ್ತೊ ಅಥವಾ ಎನ್ಡಿಎ ಅಭ್ಯರ್ಥಿಗೆ ಸಿಗುತ್ತೊ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:13 am, Fri, 1 March 24