ಲೋಕಸಭೆ ಚುನಾವಣೆ 2024: ಮೈಲ್ಯಾಕ್ನಿಂದ 26 ಲಕ್ಷ ಅಳಿಸಲಾಗದ ಶಾಯಿ ಪೂರೈಕೆ
ಎರಡು ತಿಂಗಳು ಕಳೆದರೆ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಹೀಗಾಗಿ 10 ಎಂಎಲ್ ಪ್ರಮಾಣದ 26.55 ಲಕ್ಷ ಶಾಯಿ ಬಾಟಲುಗಳನ್ನು ಪೂರೈಸುವಂತೆ ಚುನಾವಣಾ ಆಯೋಗವು ಶಾಯಿ ತಯಾರಿಸುವ ದೇಶದ ಏಕಮಾತ್ರ ಸಂಸ್ಥೆಯಾಗಿರುವ ಮೈಸೂರು ಮೈಲ್ಯಾಕ್ (ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ) ಗೆ ತಿಳಿಸಿದೆ.
ಮೈಸೂರು, ಫೆಬ್ರವರಿ 25: ದೇಶದಲ್ಲಿ ಯಾವುದೆ ಸಾರ್ವತ್ರಿಕ ಚುನಾವಣೆ ನಡೆದರೂ ಕೈ ಬೆರಳಿಗೆ ಹಚ್ಚುವ ಶಾಯಿ ಪೂರೈಕೆಯಾಗುವುದು ನಮ್ಮ ಕರ್ನಾಟಕದ ಮೈಸೂರಿನಿಂದ (Mysore). ಹೌದು ಅಳಿಸಲಾಗದ ಈ ಶಾಯಿಯನ್ನು ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ (Mylac) ತಯಾರಿಸುತ್ತದೆ. ಇನ್ನು ಎರಡು ತಿಂಗಳು ಕಳೆದರೆ ದೇಶದಲ್ಲಿ ಲೋಕಸಭೆ ಚುನಾವಣೆ (Loka Sabha Election) ನಡೆಯಲಿದೆ. ಹೀಗಾಗಿ 10 ಎಂಎಲ್ ಪ್ರಮಾಣದ 26.55 ಲಕ್ಷ ಶಾಯಿ ಬಾಟಲುಗಳನ್ನು ಪೂರೈಸುವಂತೆ ಚುನಾವಣಾ ಆಯೋಗವು (Election Commission) ಶಾಯಿ ತಯಾರಿಸುವ ದೇಶದ ಏಕಮಾತ್ರ ಸಂಸ್ಥೆಯಾಗಿರುವ ಮೈಸೂರು ಮೈಲ್ಯಾಕ್ (ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ) ಗೆ ತಿಳಿಸಿದೆ.
ಮಾರ್ಚ್ 15ರ ಓಳಗಾಗಿ ದೇಶದ ಎಲ್ಲ ರಾಜ್ಯಗಳ ಚುನಾವಣಾ ಆಯುಕ್ತರ ಕಚೇರಿಗಳ ಬೇಡಿಕೆಗೆ ಅನುಗುಣವಾಗಿ ಅಳಿಸಲಾಗದ ಶಾಯಿ ಪೂರೈಕೆ ಮಾಡಲಾಗುತ್ತದೆ. 10 ಎಂಎಲ್ನ ಒಂದು ಬಾಟಲಿಯಿಂದ 700 ಮತದಾರರ ಬೆರಳಿಗೆ ಶಾಯಿ ಗುರುತು ಹಾಕಬಹುದು.
ಮೈಲ್ಯಾಕ್ ಆಡಳಿತ ವರ್ಗ ಈಗಾಗಲೇ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಗೋವಾ, ಅರುಣಾಚಲ ಪ್ರದೇಶ, ತ್ರಿಪುರ, ನಾಗಲ್ಯಾಂಡ್, ಮಿಜೋರಾಂ ರಾಜ್ಯಗಳಿಗೆ ಅಳಿಸಲಾಗದ ಶಾಯಿ ಪೂರೈಕೆ ಮಾಡಿದೆ.
ಇದನ್ನೂ ಓದಿ: ಮತದಾನದ ಶಾಯಿ: ಮೈಸೂರಿನಲ್ಲಿ ಮಾತ್ರ ತಯಾರಾಗುತ್ತದೆ ಮತದಾನದ ಶಾಯಿ; ಇಲ್ಲಿದೆ ಸ್ವಾರಸ್ಯಕರ ಮಾಹಿತಿ
ಚುನಾವಣಾ ಆಯೋಗ ಕಳೆದ ಡಿಸೆಂಬರ್ನಲ್ಲೇ ಅಳಿಸಲಾಗದ ಶಾಯಿ ಪೂರೈಕೆಗೆ ಬೇಡಿಕೆ ಇಟ್ಟಿದ್ದರು. 26.55 ಲಕ್ಷ ಅಳಿಸಲಾಗದ ಶಾಯಿ ಬಾಟಲುಗಳ ಪೂರೈಕೆಯಿಂದ ಮೈಲ್ಯಾಕ್ಗೆ ಬರೋಬ್ಬರಿ 55 ಕೋಟಿ ರೂ. ಆದಾಯ ಹರಿದು ಬರಲಿದೆ.
1937 ರಿಂದ ಮೈಲ್ಯಾಕ್ ಕಾರ್ಯ ಆರಂಭ
1937ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದರ್ಶಿತ್ವದ ಫಲವಾಗಿ ಮೈಲ್ಯಾಕ್ ಆರಂಭವಾಗಿದೆ. ಸ್ವಾತಂತ್ರ್ಯ ನಂತರ ಮೈಲ್ಯಾಕ್ ಮೈಸೂರು ಸರ್ಕಾರದ ಅಧೀನಕ್ಕೆ ಒಳಪಟ್ಟಿದೆ. ನಂತರ ಮೈಸೂರು ಲ್ಯಾಕ್ ಅಂಡ್ ಪೇಂಟ್ಸ್ ಲಿಮಿಟೆಡ್ ಎಂದು ಮರು ನಾಮಕರಣ ಮಾಡಲಾಯಿತು.
1989 ರಿಂದ ವಾರ್ನಿಷ್ ಉತ್ಪಾದನೆ ಆರಂಭಿಸಲಾಯಿತು. ಆ ಬಳಿಕ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಎಂದು ಮರು ನಾಮಕರಣ ಮಾಡಲಾಯಿತು. ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ವಿಶ್ವದ 30ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಅಳಿಸಲಾಗದ ಶಾಯಿ ಪೂರೈಕೆ ಮಾಡುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ