ಹೊಂದಾಣಿಕೆ ರಾಜಕೀಯ: ಎಚ್.ಡಿ. ಕುಮಾರಸ್ವಾಮಿ ಸದನಕ್ಕೆ ಗೈರು?
ಮಾಜೀ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸದನದಿಂದ ದೂರ ಉಳಿಯಲು ಆಡಳಿತ ಪಕ್ಷದ ಜೊತೆ ಮಾಡಿಕೊಂಡಿರುವ ಹೊಂದಾಣಿಕೆ ರಾಜಕೀಯವೇ ಕಾರಣ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮಾಜೀ ಮುಖ್ಯ ಮಂತ್ರಿ ಮತ್ತು ಜೆಡಿಎಸ್ ನಾಯಕ, ಎಚ್.ಡಿ. ಕುಮಾರಸ್ವಾಮಿ ಈ ಬಾರಿ ಸದನಕ್ಕೆ ಅಂದರೆ ವಿಧಾನ ಸಭಾ ಅಧಿವೇಶನಕ್ಕೆ ಯಾಕೆ ಬರುತ್ತಿಲ್ಲ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಪಕ್ಷದ ಶಾಸಕರು ಸದನದಲ್ಲಿ ಬಾವಿಗಳಿದು ತಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗುತ್ತಿಲ್ಲ, ಇದು ಸರಿಯಾಗುವವರೆಗೆ ಧರಣಿಯನ್ನು ಹಿಂಪಡೆಯಲ್ಲ ಎಂದು ಕುಳಿತಿದ್ದರು. ಆಗ ಕೂಡ ಅವರು ಸದನಕ್ಕೆ ಹೋಗಲಿಲ್ಲ. ಕೊನೆಗೆ ಬಿಜೆಪಿ ಸರಕಾರ ಜೆಡಿಎಸ್ ಕ್ಷೇತ್ರಗಳಿಗೆ ಯಾವುದೇ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ಕೊಟ್ಟಿರುವುದರಿಂದ ಅವರು ಧರಣಿ ಹಿಂಪಡೆದಿದ್ದಾರೆ. ಆಗಲೂ ಕುಮಾರಸ್ವಾಮಿ ಸದನಕ್ಕೆ ಹೋಗಿ ತಮ್ಮ ಪಕ್ಷದ ಸದಸ್ಯರಿಗೆ ಅನ್ಯಾಯವಾಗುವುದನ್ನು ತಡೆಯಲಿಲ್ಲ.
ಯಾಕೆ ಈ ಅನುಮಾನ?
ಕುಮಾರಸ್ವಾಮಿ ಅವರು ವಿರೋಧ ಪಕ್ಷದಲ್ಲಿದ್ದಾಗ ಅವರ ನಡೆ ಬೇರೆ ನಾಯಕರ ನಡೆಯಂತೆ ಇಲ್ಲದಿರುವುದು ನಿಜ . ಸಿದ್ದರಾಮಯ್ಯ ಸರಕಾರವಿದ್ದಾಗ ಕೂಡ ವಿರೋಧ ಪಕ್ಷದಲ್ಲಿ ಕುಳಿತಿದ್ದ ಕುಮಾರಸ್ವಾಮಿ ಬೇರೆ ರೀತಿ ವರ್ತಿಸಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿತ್ತು. ಊಟಕ್ಕಿಂತ ಮೊದಲು ಮಾತನಾಡುತ್ತಿದ್ದ ಕುಮಾರಸ್ವಾಮಿ ಅಕ್ರಮ ಮರಳು ಗಣಿಗಾರಿಕೆ ಹೇಗೆ ನಡೆಯುತ್ತಿದೆ? ವಿವರವಾಗಿ ಮಾತನಾಡುತ್ತಿದ್ದರು. ಊಟದ ನಂತರ ತಾನು ದಾಖಲೆ ಮಂಡಿಸುವುದಾಗಿ ಹೇಳಿ ನಿಲ್ಲಿಸಿದ್ದರು. ಆದರೆ, ಊಟದ ನಂತರ ಅವರು ಸದನಕ್ಕೆ ಬರಲೇ ಇಲ್ಲ ಮತ್ತು ಆ ವಿಚಾರ ಮುಂದಕ್ಕೆ ಹೋಗಲೇ ಇಲ್ಲ. ಕುಮಾರಸ್ವಾಮಿ ಅವರು ವಿರೋಧ ಪಕ್ಷದಲ್ಲಿದ್ದಾಗ ಅವರ ನಡೆ ನಿಗೂಢವಾಗಿರುವದಂತೂ ನಿಜ. ಒಮ್ಮೆ ಆ ದಿನ ಅವರು ದಾಖಲೆ ಬಿಡುಗಡೆ ಮಾಡಿದ್ದರೆ ಸಿದ್ದರಾಮಯ್ಯ ಸರಕಾರದಲ್ಲಿದ್ದ ಮಂತ್ರಿಯೋರ್ವರು ರಾಜೀನಾಮೆ ಕೊಡುವ ಸ್ಥಿತಿ ಬರುತ್ತಿತ್ತು ಎಂದು ಅವರ ಪಕ್ಷದ ನಾಯಕರು ಈಗಲೂ ಹೇಳುತ್ತಾರೆ.
ಓರ್ವ ಮಾಜೀ ಮುಖ್ಯಮಂತ್ರಿಯಾಗಿ ಅವರ ರಾಜಕೀಯ ನಡೆ ಮತ್ತು ತಂತ್ರಗಾರಿಕೆ ಬಹಳ ನಿಗೂಢವಾಗೇ ಇರುವುದನ್ನು ಎಲ್ಲರೂ ಗಮನಿಸಿದ್ದಾರೆ. ಬೆಂಗಳೂರಿನಲ್ಲಿ ಮುಂಗಡಪತ್ರ ಅಧಿವೇಶನ ನಡೆಯುತ್ತಿದ್ದರೆ, ಕುಮಾರಸ್ವಾಮಿ ಮೈಸೂರಿನ ಹಾಲು ಒಕ್ಕೂಟದ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿದೆ. ಪಕ್ಷದ ಮೂಲಗಳ ಪ್ರಕಾರ, ಕುಮಾರಸ್ವಾಮಿ ಸರಕಾರದ ಜೊತೆ ಎಡ್ಜಸ್ಟಮೆಂಟ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಬಿಜೆಪಿ ಸರಕಾರವನ್ನು ನೇರವಾಗಿ ಎದುರಿಸಿ ಪದೇ ಪದೇ ಬಯ್ಯಲು ಆಗದು. ಆ ಕಾರಣದಿಂದ ಅವರು ಸದನದಿಂದ ದೂರವಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಟಿವಿ9 ಡಿಜಿಟಲ್ಗೆ ಹೇಳಿದರು.
ಈ ನಡುವೆ ಸದನಕ್ಕೆ ಹೋದರೆ ಉಪಯೋಗ ಇಲ್ಲ ಎಂದು ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ಶಾಸಕ, ಎ.ಎಚ್. ವಿಶ್ವನಾಥ್ ತಿರುಗೇಟು ನೀಡಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿ ಈ ರೀತಿಯ ಮಾತು ಹೇಳ್ತಾರಾ? ನಾನು ಕುಮಾರಸ್ವಾಮಿಯ ಹೇಳಿಕೆಯನ್ನು ಖಂಡಿಸುತ್ತೇನೆ. ಸಾರ್ವಭೌಮ ಸದನದ ಸದಸ್ಯರು ಬೀದಿಯಲ್ಲಿ ಮಾತಾಡ್ತಾರಾ? ನಂಜನಗೂಡು ರಥದ ಬೀದಿಯಲ್ಲಿ ನಿಂತು ಮಾತಾಡುತ್ತಾರಾ? ಅಲ್ಲಿ ಹೂ, ಬಾಳೆಹಣ್ಣು ಮಾರುವವರು ಉತ್ತರ ನೀಡ್ತಾರಾ? ಎಂದು ವಿಶ್ವನಾಥ ಕೇಳಿದ್ದಾರೆ.
ಇದನ್ನೂ ಓದಿ:
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಮೊದಲ ದಿನದ 5 ಕೋಟಿ ಹೇಳಿಕೆ ನೆನಪಿಸಿಕೊಂಡ ಎಚ್.ಡಿ.ಕುಮಾರಸ್ವಾಮಿ
ಮೈಸೂರಿನ ಮೈಮುಲ್ ಚುನಾವಣೆಯಲ್ಲಿ ಹೆಚ್ ಡಿ ಕುಮಾರಸ್ವಾಮಿಗೆ ಭಾರೀ ಮುಖಭಂಗ