ಮರಳಿ ‘ಕೈ’ ಹಿಡಿಯುತ್ತಾರಾ ಮಾಜಿ ಸಚಿವ ಡಾ. ಕೆ ಸುಧಾಕರ್: ಕಾಂಗ್ರೆಸ್​​ನಲ್ಲಿ ಹೆಚ್ಚಾಯ್ತು ಚರ್ಚೆ

| Updated By: ಗಣಪತಿ ಶರ್ಮ

Updated on: Feb 22, 2024 | 9:09 AM

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಡಾ. ಕೆ ಸುಧಾಕರ್ ಇದೀಗ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮತ್ತೆ ಕಾಂಗ್ರೆಸ್​ನತ್ತ ಮುಖ ಮಾಡಿದ್ದಾರೆಯೇ ಎಂಬ ಅನುಮಾನ ಹೆಚ್ಚಾಗಿದೆ. ಕಾಂಗ್ರೆಸ್ ಆಂತರಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆಯೇ ಇದಕ್ಕೆ ಕಾರಣ. ಸುಧಾಕರ್ ವಾಪಸಾತಿ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಈಗಾಗಲೇ ಅಭಿಪ್ರಾಯ ಸಂಗ್ರಹಿಸಿದ್ದಾರೆ ಎಂದೂ ಹೇಳಲಾಗಿದೆ.

ಮರಳಿ ‘ಕೈ’ ಹಿಡಿಯುತ್ತಾರಾ ಮಾಜಿ ಸಚಿವ ಡಾ. ಕೆ ಸುಧಾಕರ್: ಕಾಂಗ್ರೆಸ್​​ನಲ್ಲಿ ಹೆಚ್ಚಾಯ್ತು ಚರ್ಚೆ
ಡಾ. ಕೆ ಸುಧಾಕರ್
Follow us on

ಬೆಂಗಳೂರು, ಫೆಬ್ರವರಿ 22: ಮಾಜಿ ಸಚಿವ ಡಾ. ಕೆ ಸುಧಾಕರ್ (K Sudhakar) ಕಾಂಗ್ರೆಸ್‌ಗೆ (Congress) ವಾಪಸಾಗುವ ಬಗ್ಗೆ ‘ಕೈ’ ಪಾಳೆಯದಲ್ಲಿ ಚರ್ಚೆ ಜೋರಾಗಿದೆ. ಈ ವಿಚಾರವಾಗಿ ಕೆಲ ದಿನಗಳ ಹಿಂದೆ ಚಿಕ್ಕಬಳ್ಳಾಪುರ (Chikkaballapur) ನಾಯಕರ ಜೊತೆ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಸುಧಾಕರ್ ಅವರನ್ನು ಮರಳಿ ಪಕ್ಷಕ್ಕೆ ಕರಿಸಿಕೊಳ್ಳುವ ಬಗ್ಗೆ ಚಿಕ್ಕಬಳ್ಳಾಪುರ ನಾಯಕರಿಂದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಆದರೆ ಶಾಸಕ ಪ್ರದೀಪ್ ಈಶ್ವರ್ ತಟಸ್ಥ ನಿಲುವು ಕಾಯ್ದುಕೊಂಡಿದ್ದಾರೆ.

ಇಂಥ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳುವಷ್ಟು ದೊಡ್ಡವನಲ್ಲ. ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.

ಯಶವಂತಪುರ ಬಿಜೆಪಿ ಶಾಸಕ ಎಸ್​ಟಿ ಸೋಮಶೇಖರ್ ಹಾಗೂ ಇತರ ನಾಯಕರ ಜೊತೆ ಚರ್ಚಿಸಿರುವ ಸುಧಾಕರ್, ನಿರಂತರವಾಗಿ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ ಎನ್ನಲಾಗಿದೆ. ಮೂರು ದಿನಗಳ ಹಿಂದಷ್ಟೇ ಸೋಮಶೇಖರ್ ಜೊತೆ ಸುಧಾಕರ್ ಮಾತುಕತೆ ನಡೆಸಿದ್ದರು. ಇದಕ್ಕೆ ಹೊಸಕೋಟೆ ನಾಯಕನಿಂದ ವೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂದೂ ಹೇಳಲಾಗುತ್ತಿದೆ.

ಮತ್ತೊಂದಡೆ, ಸುಧಾಕರ್ ಅವರನ್ನು ಮರಳಿ ಪಕ್ಷಕ್ಕೆ ಕರೆಸಿಕೊಳ್ಳುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ಆದರೆ ಸಿಎಂ ಸಿದ್ದರಾಮಯ್ಯ ಅಳೆದು ತೂಗಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುಧಾಕರ್ ಅವರು ಲೋಕಸಭೆ ಚುನಾವಣೆ ಸಂಬಂಧ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಟಿಕೆಟ್​​ಗೆ ಲಾಬಿ ಮಾಡುತ್ತಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿತ್ತು. ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಅಷ್ಟೇನೂ ಸಕ್ರಿಯವಾಗಿ ಇರದಿದ್ದ ಸುಧಾಕರ್ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮತ್ತೆ ಸಕ್ರಿಯರಾಗಿದ್ದಾರೆ.

ಬಿಜೆಪಿಗೆ ಮತ್ತೊಂದು ಶಾಕ್: ಕಾಂಗ್ರೆಸ್ ಸೇರ್ಪಡೆಯಾಗಲಿರುವ ಮುದ್ದಹನುಮೇಗೌಡ‌

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿಗೆ ಮತ್ತೊಂದು ಶಾಕ್ ಎದುರಾಗಿದೆ. ಮಾಜಿ ಸಂಸದ ಮುದ್ದಹನುಮೇಗೌಡ‌ ಇಂದು (ಗುರುವಾರ) ಸಂಜೆ‌ 4 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆಯಾಗಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವರಾದ ಜಿ.ಪರಮೇಶ್ವರ್, ರಾಜಣ್ಣ ಸಮ್ಮುಖದಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಯಾಗಲಿದ್ದಾರೆ.

ಇದನ್ನೂ ಓದಿ: ಲಂಚ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ: ಮರು ತನಿಖೆಗೆ ಲೋಕಾಯುಕ್ತಕ್ಕೆ ಕೋರ್ಟ್ ಸೂಚನೆ

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಟಿಕೆಟ್ ಕೈತಪ್ಪಿದ ಹಿನ್ನೆಲೆ ಮುದ್ದಹನುಮೇಗೌಡ‌ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಲ್ಲೂ ಟಿಕೆಟ್ ವಂಚಿತರಾಗಿದ್ದರು. ಇದೀಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಟಿಕೆಟ್ ಕೈತಪ್ಪುವ ಭೀತಿ ಹಿನ್ನೆಲೆಯಲ್ಲಿ ವಾಪಸ್​ ಕಾಂಗ್ರೆಸ್​ನತ್ತ ಮುಖ ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ