ಲಂಚ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ: ಮರು ತನಿಖೆಗೆ ಲೋಕಾಯುಕ್ತಕ್ಕೆ ಕೋರ್ಟ್ ಸೂಚನೆ
CM Siddaramaiah Bribery Case: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಹಳೆಯ ಲಂಚ ಪ್ರಕರಣವೊಂದು ಮತ್ತೆ ಸಂಕಷ್ಟ ತಂದೊಡ್ಡುವಂತೆ ಕಾಣುತ್ತಿದೆ. ಈಗಾಗಲೇ ಸಲ್ಲಿಸಿರುವ ಬಿ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ನ್ಯಾಯಾಲಯ ತಿರಸ್ಕರಿಸಿದ್ದು, ಮರು ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಆದೇಶಿಸಿದೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಬೆಂಗಳೂರು, ಫೆಬ್ರವರಿ 22: ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ (Congress Government) ಮುಖ್ಯಮಂತ್ರಿಯಾಗಿದ್ದಾಗ ಲಂಚ ಪಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ (Siddaramaiah) ಈಗ ಸಂಕಷ್ಟ ಎದುರಾಗಿದೆ. ಸಿದ್ದರಾಮಯ್ಯ ವಿರುದ್ಧದ ಆರೋಪ ಸಾಬೀತಾಗಿಲ್ಲವೆಂದು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ನ್ಯಾಯಾಲಯ ತಿರಸ್ಕರಿಸಿದೆ. ಅಲ್ಲದೆ, ಮರುತನಿಖೆ ನಡೆಸಿ ಆರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಲೋಕಾಯುಕ್ತಕ್ಕೆ (Lokayukta) ಸೂಚನೆ ನೀಡಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಈ ವಿದ್ಯಮಾನ ನಡೆದಿರುವುದು ರಾಜಕೀಯವಾಗಿ ಪ್ರತಿಪಕ್ಷ ಬಿಜೆಪಿಗೆ ಪ್ರಮುಖ ಅಸ್ತ್ರವಾಗುವ ಎಲ್ಲ ಸಾಧ್ಯತೆಗಳಿವೆ.
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡ ಎನ್ಆರ್ ರಮೇಶ್ ಖಾಸಗಿ ದೂರು ಸಲ್ಲಿಸಿದ್ದರು. ಸಿಎಂ ಸಿದ್ದರಾಮಯ್ಯ ಹುದ್ದೆಯೊಂದಕ್ಕೆ ನೇಮಕ ಮಾಡಲು ವ್ಯಕ್ತಿಯೊಬ್ಬರಿಂದ ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಏನಿದು ಪ್ರಕರಣ?
ಸಿದ್ದರಾಮಯ್ಯ ಅವರು ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ (2013-18 ಅವಧಿಯಲ್ಲಿ) ಕಿಂಗ್ಸ್ ಕೋರ್ಟ್ನ ಎಲ್ ವಿವೇಕಾನಂದ ಎಂಬವರಿಂದ 1.30 ಕೋಟಿ ರೂಪಾಯಿ ಹಣ ಪಡೆದ ಆರೋಪ ಕೇಳಿಬಂದಿತ್ತು. ಹಣ ಪಡೆದು ವಿವೇಕಾನಂದ ಅವರನ್ನು 2014 ರಲ್ಲಿ ಟರ್ಫ್ ಕ್ಲಬ್ ಸ್ಟೀವರ್ಡ್ ಹುದ್ದೆಗೆ ನೇಮಕ ಮಾಡಲಾಗಿತ್ತು ಎಂಬ ಆರೋಪ ವ್ಯಕ್ತವಾಗಿತ್ತು. ವಿವೇಕಾನಂದ ಅವರನ್ನು 3 ವರ್ಷದ ಅವಧಿಗೆ ನೇಮಕಮಾಡಿ ಆದೇಶ ಹೊರಡಿಸಲಾಗಿತ್ತು. ಈ ಬಗ್ಗೆ ಲೋಕಾಯುಕ್ತಕ್ಕೂ ಎನ್ಆರ್ ರಮೇಶ್ ದೂರು ನೀಡಿದ್ದರು.
ಪ್ರಕರಣದ ತನಿಖೆ ನಡೆದು ಸಿದ್ದರಾಮಯ್ಯ ವಿರುದ್ಧ ಬಿ ರಿಪೋರ್ಟ್ ಸಲ್ಲಿಸಲಾಗಿತ್ತು. ಸಿದ್ದರಾಮಯ್ಯ ವಿರುದ್ಧದ ಆರೋಪ ಸಾಬೀತಾಗಿಲ್ಲವೆಂದು ಬಿ ರಿಫೊರ್ಟ್ನಲ್ಲಿ ಹೇಳಲಾಗಿತ್ತು.
ಬಿಜೆಪಿಗೆ ಚುನಾವಣಾ ಅಸ್ತ್ರ
ಸಿಎಂ ಸಿದ್ದರಾಮಯ್ಯ ವಿರುದ್ಧದ ಆರೋಪ ಮತ್ತೆ ಮುನ್ನೆಲೆಗೆ ಬಂದಿರುವುದು ಬಿಜೆಪಿಗೆ ಪ್ರಬಲ ಚುನಾವಣಾ ಅಸ್ತ್ರವಾಗುವ ಎಲ್ಲ ಸಾಧ್ಯತೆಗಳಿವೆ. ಮತ್ತೊಂದೆಡೆ, ವಿಧಾನಮಂಡಲದ ಬಜೆಟ್ ಅಧಿವೇಶನ ಸಹ ನಡೆಯುತ್ತಿದ್ದು, ಸದನದಲ್ಲಿಯೂ ಸಿಎಂ ವಿರುದ್ಧದ ಆರೋಪ ಚರ್ಚೆಗೆ ಬರುವ ಸಾಧ್ಯತೆಯೂ ಇದೆ. ಈಗಾಗಲೇ 40 ಪರ್ಸೆಂಟ್ ಕಮಿಷನ್ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಕೆಲವು ದಿನಗಳ ಹಿಂದೆ ಆರೋಪ ಮಾಡಿದ್ದರು. ನಂತರ ಅವರು ಬಿಲ್ ಬಿಡುಗಡೆ ಬಗ್ಗೆ ಸ್ಪಷ್ಟನೆ ನೀಡಿದ್ದರೂ ಆ ವಿಚಾರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದ್ದು ಸುಳ್ಳಲ್ಲ.
ಇದನ್ನೂ ಓದಿ: ಕರ್ನಾಟಕ ಸರ್ಕಾರದ ನೂತನ ಪ್ರಯೋಗ: ಸಚಿವರಿಂದ 15ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯರ ಸಂದರ್ಶನ!
ಇದೀಗ ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಸಿದ್ದರಾಮಯ್ಯ ವಿರುದ್ಧ ಕೋರ್ಟ್ ಆದೇಶದಂತೆ ಲೋಕಾಯುಕ್ತ ಮರುತನಿಖೆಯಾಗಬೇಕಿದೆ. ಇದನ್ನು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ಹೇಗೆ ನಿಭಾಯಿಸುತ್ತಿದೆ ಎಂದ ಕಾದುನೋಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:38 am, Thu, 22 February 24