ಬೆಂಗಳೂರು: ಪರ್ಫ್ಯೂಮ್ ಗೋಡೌನ್‌ನಲ್ಲಿ ಅಗ್ನಿ ದುರಂತ ಪ್ರಕರಣ: ಇಬ್ಬರು ಗಾಯಾಳು ಬಾಲಕರು ಸಾವು
ಬೆಂಗಳೂರು ದಕ್ಷಿಣ ತಾಲೂಕಿನ ರಾಮಸಂದ್ರದಲ್ಲಿರುವ ಪರ್ಫ್ಯೂಮ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಮೂವರು ಮೃತಪಟ್ಟಿದ್ದರು. ಬಳಿಕ 15 ವರ್ಷದ ಗಾಯಾಳು ಬಾಲಕ ಕೊನೆಯುಸಿರೆಳೆದ್ದಿದ್ದನು. ಇದೀಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 10 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಆ ಮೂಲಕ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಬೆಂಗಳೂರು, ಫೆ.22: ದಕ್ಷಿಣ ತಾಲೂಕಿನ ರಾಮಸಂದ್ರದಲ್ಲಿರುವ ಪರ್ಫ್ಯೂಮ್ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ (Fire Accident) ಗಂಭೀರವಾಗಿ ಗಾಯಗೊಂಡ ಐವರ ಪೈಕಿ 10 ಮತ್ತು 15 ವರ್ಷದ ಬಾಲಕರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಿಯಾನ್ ಪಾಷಾ (10) ಮತ್ತು ಸಾಜಿದ್ (15) ಮೃತ ದುರ್ದೈವಿಗಳು. ಕಳೆದ ನಾಲ್ಕು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಯಾನ್ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇದಕ್ಕೂ ಮುನ್ನ, ಸಾಜಿದ್ ಮೃತಟ್ಟಿದ್ದನು. ಆ ಮೂಲಕ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ತಂದೆಗೆ ಊಟ ಕೊಡಲು ಬಂದಿದ್ದ ಬಾಲಕರು
ರಿಯಾನ್ ತಂದೆ ಅಫ್ರೋಜ್ ಪರ್ಫ್ಯೂಮ್ ಗೋಡೌನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಊಟ ಕೊಡಲೆಂದು ರಿಯಾನ್ ಮತ್ತು ಸಂಬಂಧಿ ಸಾಜಿದ್ ಇಬ್ಬರೂ ಫ್ಯಾಕ್ಟರಿಗೆ ಬಂದಿದ್ದರು. ಈ ವೇಳೆ ನಡೆದ ಅಗ್ನಿ ಅವಘಡದಲ್ಲಿ ರಿಯಾನ್, ಸಾಜಿದ್ ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯ, ಉಳಿದ ಮೂವರ ಸ್ಥಿತಿ ಕೂಡ ಗಂಭೀರವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಇದನ್ನೂ ಓದಿ: ಸುಗಂಧ ದ್ರವ್ಯ ಕಾರ್ಖಾನೆಯಲ್ಲಿ ಸ್ಫೋಟ ಪ್ರಕರಣ; ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ
ನಿನ್ನೆ ಬೆಳಿಗ್ಗೆ ಸಾಜಿದ್ ಪಾಷ ಮೃತಪಟ್ಟಿದ್ದಾನೆ. ಈಗ ರಿಯಾನ್ ಪಾಷ ಮೃತಪಟ್ಟಿದ್ದಾನೆ. ಊಟ ಕೊಡಲು ಹೋಗಿ ಈ ಇಬ್ಬರು ಮೃತಪಟ್ಟಿದ್ದಾರೆ. ರಿಯಾನ್ ಪಾಷ ತಂದೆ ಅಲ್ಲಿ ಕೆಲಸಕ್ಕೆಂದು ಅಂದು ಹೊಗಿದ್ದರು. ಅದೇ ದಿನ ಮೊದಲ ಬಾರಿಗೆ ಕೆಲಸಕ್ಕೆ ಹೋಗಿರುವುದು. ಅಫ್ರೋಜ್ ಲಾರಿ ಡ್ರೈವರ್ ಕೆಲಸ ಮಾಡುತ್ತಾ ಇದ್ದರು. ಘಟನೆ ನಡೆದ ಕೂಡಲೇ ಮೂವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಈಗ ಬಾಲಕರಿಬ್ಬರು ಮೃತಪಟ್ಟಿದ್ದಾರೆ. ಅಫ್ರೋಜ್ಗೆ ಚಿಕಿತ್ಸೆ ಮುಂದುವರಿದಿದೆ, ಇನ್ನೂ ಉಳಿದ ಇಬ್ಬರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಮೃತ ಬಾಲಕರ ಮಾವ ಅಪ್ಜಲ್ ಖಾನ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:15 am, Thu, 22 February 24