ಪರ್ಫ್ಯೂಮ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ಹೈ ಫ್ಲೇಮ್ ಗ್ಯಾಸ್ನಿಂದ ಹೊತ್ತಿಕೊಂಡ ಬೆಂಕಿ
ಬೆಂಗಳೂರು ದಕ್ಷಿಣ ತಾಲೂಕಿನ ರಾಮಸಂದ್ರದಲ್ಲಿರುವ ಪರ್ಫ್ಯೂಮ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಮೂವರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಒಂದು ವಾರದ ಹಿಂದೆ ಅಷ್ಟೆ ಕಾರ್ಖಾನೆ ಶುರುವಾಗಿತ್ತು. ಇದೀಗ ಬೆಂಕಿಯ ಕೆನ್ನಾಲಿಗೆ ಇಡೀ ಕಾರ್ಖಾನೆ ಸುಟ್ಟು ಭಸ್ಮವಾಗಿದೆ. ಈ ಅಗ್ನಿ ಅವಘಡಕ್ಕೆ ಕಾರಣ ತಿಳಿದು ಬಂದಿದೆ.
ಬೆಂಗಳೂರು, ಫೆಬ್ರವರಿ 19: ಬೆಂಗಳೂರು ದಕ್ಷಿಣ ತಾಲೂಕಿನ ರಾಮಸಂದ್ರದಲ್ಲಿರುವ ಪರ್ಫ್ಯೂಮ್ ಕಾರ್ಖಾನೆಯಲ್ಲಿ (Perfume Factory) ಹೈ ಫ್ಲೇಮ್ ಗ್ಯಾಸ್ನಿಂದಾಗಿ ಅಗ್ನಿ ಅವಘಡ (Fire accident) ಸಂಭವಿಸಿದೆ ಎಂಬ ಅಂಶ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಮೃತ ಸಲೀಂ ಗುಜರಿ ವ್ಯಾಪಾರ ಮಾಡುತ್ತಿದ್ದನು. ಜಾಗದ ಮಾಲೀಕ ವಿಠಲ್ ಹಾಗೂ ಸಲೀಂ ಒಂದೇ ಗ್ರಾಮದವರು. ಇಬ್ಬರು ಸೇರಿ ಒಂದು ವಾರದ ಹಿಂದೆ ಗುಜರಿ ಅಂಗಡಿ ಪ್ರಾರಂಭಿಸಿದ್ದರು. ಈ ಅಂಗಡಿಯಲ್ಲಿ ಲೋಡ್ಗಟ್ಟಲೆ ಖಾಲಿಯಾದ ಪರ್ಫ್ಯೂಮ್ ಬಾಟಲಿಗಳನ್ನು ಸಂಗ್ರಹಿಸಿ, ಅವುಗಳನ್ನು ನಜ್ಜುಗುಜ್ಜು ಮಾಡಿ ವಿಲೇವಾರಿ ಮಾಡುತ್ತಿದ್ದರು. ಈ ಗುಜುರಿ ಅಂಗಡಿಯಲ್ಲಿ ಮೂರು ಲಕ್ಷಕ್ಕೂ ಅಧಿಕ ಪರ್ಫ್ಯೂಮ್ ಬಾಟಲ್ಗಳನ್ನು ಜಮಾವಣೆ ಮಾಡಲಾಗಿತ್ತು.
ಆದರೆ ಇತ್ತೀಚಿಗೆ ಅಕ್ರಮವಾಗಿ ಖಾಲಿ ಪರ್ಫ್ಯೂಮ್ ಬಾಟಲ್ಗಳಲ್ಲಿ ಪರ್ಫ್ಯೂಮ್ ತುಂಬುವ ಕೆಲಸ ಮಾಡುತ್ತಿದ್ದರು. ಮೃತ ಚಾಲಕ ಮೆಹಬೂಬ್ ಪೋರ್ಟರ್ ಆ್ಯಪ್ ಮುಖಾಂತರ ಲೋಡ್ ಬುಕ್ ಮಾಡಿಕೊಳ್ಳುತ್ತಿದ್ದನು. ಅದರಂತೆ ಮೆಹಬೂಬ್ ಖಾಲಿ ಪರ್ಫ್ಯೂಮ್ ಬಾಟಲ್ಗಳನ್ನು ಲೋಡ್ ಮಾಡಿಕೊಂಡು ಇಲ್ಲಿ ಅನ್ಲೋಡ್ ಮಾಡಿದ್ದಾನೆ. ಮೆಹಬೂಬ್ ಮೊದಲ ಬಾರಿಗೆ ಪರ್ಫ್ಯೂಮ್ ಕಾರ್ಖಾನೆಗೆ ತೆರಳಿದ ಹಿನ್ನೆಲೆಯಲ್ಲಿ ಒಳಗಡೆ ಏನಿದೆ ಅಂತ ಸಹಜ ಕುತೂಹಲದಿಂದ ಗೊಡೌನ್ ಒಳಗಡೆ ತೆರಳಿದ್ದಾನೆ.
ಇದನ್ನೂ ಓದಿ: ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ಅಗ್ನಿ ಅವಘಡ, ಹೊತ್ತಿ ಉರಿದ ಮೂರು ಅಂತಸ್ತಿನ ಕಟ್ಟಡ
ಒಳಗಡೆ ಸುತ್ತಾಡಿ ಹೊರಗಡೆ ಬರುವಾಗ ದೂರವಾಣಿ ಕರೆ ಬಂದಿದೆ. ಆಗ ಮೆಹಬೂಬ್ ಗೋಡೌನ್ನಲ್ಲೇ ನಿಂತು ಮಾತನಾಡಲು ಆರಂಭವಿಸಿದ್ದಾನೆ. ಈ ವೇಳೆಗಾಗಲೆ ಹೈ ಫ್ಲೇಮ್ ಪರ್ಫ್ಯೂಮ್ ಗ್ಯಾಸ್ ಎಲ್ಲಡೆ ಹಬ್ಬಿತ್ತು. ಇದರಿಂದ ಒಮ್ಮೇಲೆ ಬೆಂಕಿ ಹೊತ್ತಿಕೊಂಡಿದೆ. ಈ ಸಮಯದಲ್ಲಿ ಮೆಹಬೂಬುಗೆ ಹೊರಗೆ ಬರಲು ಸಾಧ್ಯವಾಗದೆ ಬೆಂಕಿಗಾಹುತಿಯಾಗಿದ್ದಾನೆ ಎಂದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.
600 ರೂ. ಕೂಲಿ ಕೆಲಸಕ್ಕೆ ಹೋಗಿ ಜೀವಕ್ಕೆ ಕುತ್ತು
ಹೊಸ ಫ್ಯಾಕ್ಟರಿಯಾಗಿದೆ ಸಂಬಳ ಜಾಸ್ತಿ ಸಿಗುತ್ತೆ, ಅಲ್ಲದೆ ಮನೆ ಪಕ್ಕದಲ್ಲೇ ಫ್ಯಾಕ್ಟರಿ ಇದೆ ಅಂತ ಅಂತ ಗಾಯಾಳುಗಳು ಇರ್ಫಾನ್, ಅಪ್ರೋಜ್ ಪಾಷಾ ಒಂದು ವಾರದ ಹಿಂದಷ್ಟೆ ಕೆಲಸಕ್ಕೆ ಸೇರಿದ್ದರು. ಇರ್ಫಾನ್ ಪಾಷಾ ಸುಗಂಧ ದ್ರವ್ಯ ಫ್ಯಾಕ್ಟರಿಯಲ್ಲಿ ಕ್ಯಾಂಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಆದರೆ ಹೆಚ್ಚಿನ ಸಂಬಳ ನೀಡುತ್ತಾರೆ ಎಂಬ ಆಸೆಯಿಂದ ಡ್ರೈವರ್ ಕೆಲಸ ಬಿಟ್ಟು ಫ್ಯಾಕ್ಟರಿಗೆ ಸೇರಿದ್ದನು.
ಇನ್ನು ರವಿವಾರ (ಫೆ.18) ರಂದು ರಜೆ ಇದ್ದ ಕಾರಣ, ಇರ್ಫಾನ್ ಪಾಷಾಗೆ ಊಟ ಕೊಡಲು ಅಪ್ರೋಜ್ ಪಾಷಾ, ಅಪ್ರೋಜ್ ಪಾಷಾರ ಮಗ ಮತ್ತು ಅಪ್ರೋಜ್ ಪಾಷಾರ ಅಕ್ಕನ ಮಗ ಕಾರ್ಖಾನೆಗೆ ಹೋಗಿದ್ದರು. ಈ ವೇಳೆ ಕಾರ್ಖಾನೆಯಲ್ಲಿ ಧಿಡೀರನೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೆ ಐವರು ಹೊರಗೆ ಓಡಿ ಬಂದರೂ, ಬೆಂಕಿ ತಗುಲಿತ್ತು. ಗಾಯಾಳುಗಳು ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ