ಸತ್ಯವನ್ನು ಮುಚ್ಚಿಡಲು ಚಲುವರಾಯಸ್ವಾಮಿ ಮಾಟ, ಮಂತ್ರ ಮಾಡಿಸುತ್ತಾನೆ: ಸುರೇಶ್ ಗೌಡ
ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಸಚಿವ ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಚಲುವರಾಯಸ್ವಾಮಿ ಕಡಿಮೆ ಎಂದರೂ ಇಲ್ಲಿವರೆಗೆ 300-400 ಕೋಟಿ ಲೂಟಿ ಹೊಡೆದಿದ್ದಾನೆ. ಇದನ್ನು ಮುಚ್ಚಿಹಾಕಲು ಮಾಟ, ಮಂತ್ರ ಮಾಡಿಸುತ್ತಾನೆ ಎಂದು ಆರೋಪ ಮಾಡಿದರು.
ಬೆಂಗಳೂರು: ಸಚಿವ ಚಲುವರಾಯಸ್ವಾಮಿ (Cheluvarayaswamy) ಮಾಟ, ಮಂತ್ರ ಮಾಡಿಸುತ್ತಾನೆ. ಸತ್ಯವನ್ನು ಸುಳ್ಳು ಸುಳ್ಳು ಎಂದು ಹತ್ತು ಬಾರಿ ಹೇಳಿ ಸುಳ್ಳು ಮಾಡುತ್ತಾನೆ. ಸಚಿವ ಚಲುವರಾಯಸ್ವಾಮಿ ಅದೃಷ್ಟ ಚೆನ್ನಾಗಿದೆ. ಚಲುವರಾಯಸ್ವಾಮಿ ಗೆದ್ದಾಗೆಲ್ಲ ದುಡ್ಡು ಮಾಡುತ್ತಾನೆ. ನಾವು ಗೆದ್ದಾಗ ವಿರೋಧ ಪಕ್ಷದಲ್ಲಿ ಕೂತು ಬಾಯಿ ಬಡಿದುಕೊಳ್ಳುತ್ತೇವೆ ಎಂದು ಮಾಜಿ ಶಾಸಕ ಸುರೇಶ್ ಗೌಡ (Suresh Gowda) ಹೇಳಿದರು.
ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ನಮ್ಮ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿದರೇ ನಾವು ಸುಮ್ಮನಿರಲ್ಲ. ಪುಟ್ಟೇಗೌಡರಿಗೆ ಈತ ಬೀಡಿ, ಸಿಗರೇಟ್ ತಂದು ಕೊಡುತ್ತಿದ್ದು ಸುಳ್ಳಾ? ಶಿವರಾಮೇಗೌಡ ಬಳಿ ಐದು ಸಾವಿರ ರೂ. ಹಣಕ್ಕೆ ಬಂದಿದ್ದು ಸುಳ್ಳಾ? ಚಲುವರಾಯಸ್ವಾಮಿಯನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಮಾಡಿದ್ದು ಜೆಡಿಎಸ್. ಶಾಸಕ, ಸಚಿವ, ಎಂಪಿಯನ್ನಾಗಿ ಮಾಡಿದ್ದು ಜೆಡಿಎಸ್ ಪಕ್ಷ. ಚಲುವರಾಯಸ್ವಾಮಿಗೆ ನಿಯತ್ತು ಇಲ್ಲ. ಹಿಟ್ಟಿಕ್ಕಿದವಳನ್ನೇ ಇಟ್ಟು ಕೊಳ್ಳುವವರನ್ನು ಏನು ಅಂತ ಕರಿಯೋದು? ಎಂದು ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಚಲುವರಾಯಸ್ವಾಮಿ ವಿರುದ್ಧದ ಲಂಚ ಪತ್ರ ರಾಜ್ಯಪಾಲರ ಕಚೇರಿಗೆ ಹೋಗಿದ್ದು ಎಲ್ಲಿಂದ? ಸ್ಫೋಟಕ ಮಾಹಿತಿ ಬಹಿರಂಗ
ನನ್ನ ಚರಿತ್ರೆ ಬಗ್ಗೆ ಮಾತನಾಡುತ್ತಾನೆ, ಇವನ ಚರಿತ್ರೆ ಹಳಸಿ ಹೋಗಿದೆ. ಇವನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ನೊಣ ಬಿದ್ದ ನಮ್ಮ ತಟ್ಟೆಯನ್ನು ನೋಡುತ್ತಾನೆ. ನಾನು ಸೋತಿದ್ದೀನಿ, ಸತ್ತಿಲ್ಲ. 30 ರಿಂದ 40 ಸಾವಿರ ಅಂತರದಲ್ಲಿ ಸೋತಿದ್ದರೇ ರಾಜಕಾರಣವನ್ನೇ ಬಿಟ್ಟು ಬಿಡುತ್ತಿದ್ದೆ. 47 ಸಾವಿರ ಅಂತರದಲ್ಲಿ ಸೋತವನೆ ತಲೆ ಎತ್ತಿಕೊಂಡು ಬಂದಿದ್ದಾನೆ. ನಾನು 4 ಸಾವಿರ ಅಂತರದಲ್ಲಿ ಸೋತವನು ನಾನು ಏಕೆ ತಲೆ ಕೆಡಿಸಿಕೊಳ್ಳಬೇಕು. ನಾನು ಎಲ್ಲರಿಗು ಗೌರವ ಕೊಡುತ್ತೇನೆ. ಆದರೆ ಚಲುವರಾಯಸ್ವಾಮಿ ಬಗ್ಗೆ ನನಗೆ ಭಯವೂ ಇಲ್ಲ, ಗೌರವವೂ ಇಲ್ಲ ಎಂದರು.
ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿಗೆ ಮೊದಲ ಸ್ಥಾನ
ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿಗೆ ಮೊದಲ ಸ್ಥಾನ. ಅಧಿಕಾರ ಸಿಕ್ಕಾಗ ಜನಗಳಿಗೆ ಒಳ್ಳೆಯದು ಮಾಡಬೇಕು. ಅಧಿಕಾರಿಗಳ ವರ್ಗಾವಣೆಯಲ್ಲಿ 150 ಕೋಟಿ ರೂ., ಜಲಧಾರೆ ಯೋಜನೆ 100 ಕೋಟಿ ರೂ., ಅಧಿಕಾರಿಗಳ ಬಳಿ ಲೂಟಿ ಹೀಗೆ 300 ಕೋಟಿ ರೂ. ಚಲುವರಾಯಸ್ವಾಮಿ ಒಬ್ಬನೇ ಲೂಟಿ ಹೊಡೆದಿದ್ದಾನೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮಾಡಿ ದುಡ್ಡನ್ನು ಏರ್‌ಲಿಫ್ಟ್ ಮಾಡುತ್ತಿದೆ. ಹಿಂದಿನ ಸರ್ಕಾರ ಜೆಸಿಬಿಯಲ್ಲಿ ಹಣ ತುಂಬುತ್ತಿದೆ ಎನ್ನುತ್ತಿದ್ದರು. ಆದರೆ ಈ ಸರ್ಕಾರ ಭ್ರಷ್ಟ ಹಣವನ್ನು ಏರ್‌ಲಿಫ್ಟ್ ಮಾಡುತ್ತಿದೆ. ಇವರು ರಾಜ್ಯವನ್ನೇ ಲೂಟಿ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಚಲುವರಾಯಸ್ವಾಮಿಗೆ ಬ್ರೈನ್ ಮ್ಯಾಪಿಂಗ್ ಮಾಡಬೇಕು. ಎಲ್ಲೆಲ್ಲಿ ಎಷ್ಟೆಷ್ಟು ತಿಂದಿದ್ದಾನೆ ಗೊತ್ತಾಗುತ್ತದೆ. ಕಾಂಗ್ರೆಸ್ ಪಕ್ಷದ ಯುವ ಅಧ್ಯಕ್ಷನದು ಬೆಂಗಳೂರಿನಲ್ಲಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಇದೆ. ಅಲ್ಲಿ ಚಲುವರಾಯಸ್ವಾಮಿ ಎಷ್ಟು ಬ್ಲಾಕ್ ಮನಿ ವೈಟ್ ಮಾಡಿದ್ದಾನೆ.? ಅದೆಲ್ಲವೂ ಆಚೆ ಬರುತ್ತದೆ, ಈಡಿ ಕಣ್ಣು ಬಿಡಲಿದೆ. ಬೆಳ್ಳೂರು ಕ್ರಾಸ್‌ನಲ್ಲಿ ಪೆಟ್ರೋಲ್ ಬಂಕ್ ಮಾಲೀಕರ ಹತ್ತಿರ ಎಷ್ಟು ಕಲೆಕ್ಷನ್ ಮಾಡುತ್ತಿದ್ದಾನೆ ?ಎಲ್ಲವೂ ಜನರಿಗೆ ಗೊತ್ತಿದೆ ಎಂದರು.
ತಿಂದವನು ಕಕ್ಕಲೇ ಬೇಕು, ಎಲ್ಲ ಮುಂದೆ ಗೊತ್ತಾಗುತ್ತೆ. ಅಧಿಕಾರಗಳು ಪತ್ರ ಬರೆದದ್ದು ಸತ್ಯ. ಬೆಂಗಳೂರಿನ 37 ಕ್ರೆಸೆಂಟ್ ಹೋಟೆಲ್‌ಗೆ ಅಧಿಕಾರಿಗಳನ್ನು ಕರೆಸಿಕೊಂಡು ಒತ್ತಡ ಹೇರಿದ್ದಾರೆ. ಎಲ್ಲಾ ಬಿಗಿ ಭದ್ರತೆ ಮಾಡಿಕೊಂಡು, ಅಧಿಕಾರಗಳು ಪತ್ರ ಬರೆದಿಲ್ಲ ಎಂದು ಸುಳ್ಳು ಹೇಳಿದ್ದಾರೆ37 ಕ್ರೆಸೆಂಟ್ ಹೋಟೆಲ್ ಹಾಗೂ ಆ ರಸ್ತೆಯ ಸಿಸಿಟಿವಿ ದೃಶ್ಯ ತೆಗೆಸಿ. ಆಗ ಯಾವ ಎಡಿ, ಜೆಡಿ ಯಾರೆಲ್ಲಾ ಹೋಗಿದ್ದರು ತಿಳಿಯುತ್ತದೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:47 am, Wed, 16 August 23