ಬೆಂಗಳೂರು: ಮಾಜಿ ಶಾಸಕ ಯು.ಬಿ.ಬಣಕಾರ್ (U B Banakar) ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. . ಬಿಜೆಪಿ ಸದಸ್ಯತ್ವ, ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕ ಸ್ಥಾನಕ್ಕೆ ಬಣಕಾರ್ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಚುನಾವಣೆ ಹೊತ್ತಲ್ಲಿ ಬಿಜೆಪಿ ಶಾಕ್ ಕೊಟ್ಟಿದ್ದಾರೆ ಇನ್ನು ಈ ಬಗ್ಗೆ ಬೆಂಗಳೂರಿನಲ್ಲಿ ಇಂದು(ನ.9) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಯಾರೇ ಮನವೊಲಿಸಿದರೂ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ಸಮಸ್ಯೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿಗೂ ಗೊತ್ತಿದೆ. ಸಿಎಂ ಬೊಮ್ಮಾಯಿ ನಿವಾಸಕ್ಕೆ ಹೋದರೆ ಬಹಳ ಬ್ಯುಸಿ ಇರುತ್ತಾರೆ. ಈಗ ಯಡಿಯೂರಪ್ಪ ಅವರನ್ನು ಭೇಟಿ ಮಾಡುವ ಅವಶ್ಯಕತೆ ಇಲ್ಲ. ಬಿಎಸ್ವೈ ಸಿಎಂ ಆಗಬೇಕೆಂದು ಬಿ.ಸಿ.ಪಾಟೀಲ್ಗೆ ಸಹಕಾರ ಕೊಟ್ಟೆ. ಹಿರೇಕೆರೂರಲ್ಲಿ ಬಿ.ಸಿ.ಪಾಟೀಲ್ರನ್ನು ಗೆಲ್ಲಿಸುವ ಕೆಲಸ ಮಾಡಿದ್ದೇನೆ. ಆದರೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತೆ ಎಂದು ದೂರವಿಡುವ ಪ್ರಯತ್ನಿಸಿದರು. ಕಾರ್ಯಕರ್ತರ ಜೊತೆ ಚರ್ಚಿಸಿಯೇ ತೀರ್ಮಾನ ಕೈಗೊಂಡಿದ್ದೇನೆ ಎಂದು ಹೇಳಿದರು.
ಯಡಿಯೂರಪ್ಪನವರ ಆಪ್ತ, ಮಾಜಿ ಶಾಸಕ ಬಿಜೆಪಿಗೆ ಗುಡ್ ಬೈ, ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದಲ್ಲಿ ಇಬ್ಬರು ನಾಯಕರಿದ್ದೆವು. ಇಬ್ಬರೂ ನಾಯಕರು ಒಟ್ಟಿಗೆ ಹೋಗಲು ಆಗಲಿಲ್ಲ. ಬಿಎಸ್ವೈ ನಮ್ಮಿಬ್ಬರನ್ನು ಪಕ್ಷದ ಎರಡು ಕಣ್ಣುಗಳು ಎಂದಿದ್ದರು. ಕೃಷಿ ಸಚಿವ ಬಿ.ಸಿ.ಪಾಟೀಲ್ರಿಂದ ನನಗೆ ಕಿರುಕುಳ ಇತ್ತು. ಹಾಗಾಗಿ ನಾನು ಬಿಜೆಪಿ ಬಿಡುವ ನಿರ್ಧಾರವನ್ನು ಮಾಡಿದ್ದೇನೆ. ಕಾರ್ಯಕರ್ತರ ಜತೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಬೇರೆಯವರಾಗಿದ್ದರೆ 4-5 ತಿಂಗಳ ಹಿಂದೆಯೇ ಪಕ್ಷ ಬಿಡುತ್ತಿದ್ದರು. ನ.11ರಂದು ನನ್ನ ಮುಂದಿನ ನಡೆ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದು ತಿಳಿಸಿದರು.
2 ಬಾರಿ ಹಿರೇಕೆರೂರು ಕ್ಷೇತ್ರದ ಶಾಸಕರಾಗಿದ್ದ ಯು.ಬಿ.ಬಣಕಾರ್ 1994 ಹಾಗೂ 2013ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದ್ರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಬಿ.ಸಿ. ಪಾಟೀಲ್ ವಿರುದ್ಧ ಸೋಲುಕಂಡಿದ್ದರು. ಬಳಿಕ ಬದಲಾದ ರಾಜಕೀಯ ವಿದ್ಯಾಮಾನದಿಂದ ಬಿ.ಸಿ.ಪಾಟೀಲ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಬಣಕರ್ ಅವರಿಗೆ ಬಿಜೆಪಿ ಟಿಕೆಟ್ ಸಿಗುವುದು ಸಾಧ್ಯತೆಗಳು ಕಡಿಮೆ. ಇದರಿಂದ ಬಣಕಾರ್ ತಮ್ಮ ಮುಂದಿನ ರಾಜಕೀಯ ನಡೆಗಾಗಿ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
Published On - 6:59 pm, Wed, 9 November 22