ಜನಾರ್ದನ ರೆಡ್ಡಿಯನ್ನು ದಿಲ್ಲಿಗೆ ಕರೆಯಿಸಿಕೊಂಡು ಮಾತನಾಡಿದ ಶಾ, ಭೇಟಿ ಹಿಂದಿನ ರಹಸ್ಯವೇನು?

| Updated By: ರಮೇಶ್ ಬಿ. ಜವಳಗೇರಾ

Updated on: Mar 15, 2024 | 6:18 PM

ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ತಯಾರಿ ಜೋರಾಗಿ ನಡೆಯುತ್ತಿದೆ. ಈಗಾಗಲೇ ಕರ್ನಾಟಕ ಬಿಜೆಪಿಯ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟ ಮಾಡಲಾಗಿದೆ. ಬಿಜೆಪಿ ಪಾಲಿಗೆ ಕರ್ನಾಟಕವು ಭದ್ರಕೋಟೆಯಾಗಿದ್ದು, ಸಂಪೂರ್ಣ ಹಿಡಿತ ಸಾಧಿಸಲು ಕಾರ್ಯತಂತ್ರವನ್ನು ರೂಪಿಸಲಾಗುತ್ತಿದೆ. ಇದರ ಮಧ್ಯೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಜನಾರ್ದನ ರೆಡ್ಡಿಯನ್ನು ದಿಲ್ಲಿಗೆ ಕರೆಯಿಸಿಕೊಂಡು ಮಾತನಾಡಿದ ಶಾ, ಭೇಟಿ ಹಿಂದಿನ ರಹಸ್ಯವೇನು?
ಅಮಿತ್ ಶಾ, ಜನಾರ್ದನ ರೆಡ್ಡಿ
Follow us on

ನವದೆಹಲಿ, (ಮಾರ್ಚ್ 14): ಲೋಕಸಭಾ ಚುನಾವಣೆಗೆ (Lok Sabha Election 2024) ಹೊಸ್ತಿಲಲ್ಲೇ ಗಂಗಾವತಿ ಶಾಸಕ ಹಾಗೂ ಕೆ ಆರ್​ಪಿಪಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ (Gali Janardhan Reddy) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಇಂದು(ಮಾರ್ಚ್ 14) ನವದೆಹಲಿಯಲ್ಲಿ ಶಾ ಭೇಟಿ ಮಾಡಿ ಪ್ರಸಕ್ತ ರಾಜ್ಯ ರಾಜಕೀಯ ವಿದ್ಯಾಮಾನಗಳ ಬಗ್ಗೆ ಚರ್ಚಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಭೇಟಿಗೆ ಖುದ್ದು ಅಮಿತ್ ಶಾ ಅವರೇ ರೆಡ್ಡಿಗೆ ಆಹ್ವಾನ ನೀಡಿರುವುದು ಭಾರೀ ಕುತೂಹಲ ಮೂಡಿಸಿದೆ. ಲೋಕಸಭಾ ಚುನಾವಣೆಯಲ್ಲಿ ರೆಡ್ಡಿ ಬಿಜೆಪಿಯನ್ನು ಬೆಂಬಲಿಸಲಿದ್ದಾರಾ? ಎಂಬ ಪ್ರಶ್ನೆ ಮೂಡಿದೆ.

ನವದೆಹಲಿಯಲ್ಲಿ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿರುವ ಬಗ್ಗೆ ರೆಡ್ಡಿ ತಮ್ಮ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಫೋಟೋ ಸಮೇತ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಭಾರತ ರಾಷ್ಟ್ರದ ಕೇಂದ್ರ ಗೃಹಮಂತ್ರಿಗಳಾದ ಅಮಿತ್ ಶಾ ಜಿಯವರ ಆಹ್ವಾನದ ಮೇರೆಗೆ ನವದೆಹಲಿಯಲ್ಲಿ ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷನಾಗಿ ಭೇಟಿ ಮಾಡಿ ಕರ್ನಾಟಕ ರಾಜ್ಯದ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದು, ನನಗೆ ಬಹಳ ಸಂತೋಷವನ್ನು ತಂದಿದೆ” ಎಂದು ಜನಾರ್ದನ ರೆಡ್ಡಿ ಬರೆದುಕೊಂಡಿದ್ದಾರೆ.


ವಿಧಾನಸಭೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಅವರಿಗೆ ಬಿಜೆಪಿಯಿಂದ ಸ್ಪರ್ಧೆ ಮಾಡಬೇಕೆಂಬ ಆಸೆ ಇತ್ತಾದರೂ ಬಿಜೆಪಿ ಅವರನ್ನು ಸೇರಿಸಿಕೊಳ್ಳಲಿಲ್ಲ. ಹೀಗಾಗಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಕಟ್ಟಿದರು. ಈ ಪಕ್ಷದಿಂದ ತಾವೊಬ್ಬರೇ ಗೆದ್ದರೂ ಕೆಲ ಕಡೆ ಬಿಜೆಪಿಯ ಅಭ್ಯರ್ಥಿಗಳನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದರು. ಇದು ಬಿಜೆಪಿಗೆ ದೊಡ್ಡ ಮಟ್ಟದ ಹೊಡೆತವನ್ನೇ ಕೊಟ್ಟಿತ್ತು. ಅಲ್ಲದೆ, ಈಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿಯೂ ರೆಡಿ ಬಿಜೆಪಿಯನ್ನು ಬೆಂಬಲಿಸಲು ತಯಾರಾಗಿದ್ದರು. ಆದರೆ, ಬಿಜೆಪಿ ಹೈಕಮಾಂಡ್‌ ಒಲವು ತೋರದ ಕಾರಣ ಅವರು ಕಾಂಗ್ರೆಸ್‌ ಬೆಂಬಲಸಿದ್ದರು. ಆದ್ರೆ, ಇದೀಗ ಏಕಾಏಕಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಬಿಜೆಪಿಗೆ ಬೆಂಬಲ ಸೂಚಿಸುತ್ತಾರಾ ರೆಡ್ಡಿ?

ಈ ನಡುವೆ ಮಾತನಾಡಿದ್ದ ಜನಾರ್ದನ ರೆಡ್ಡಿ, “ಈ ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಕಡೆ ಕೆಆರ್‌ಪಿಪಿಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇನೆ” ಎಂದು ಹೇಳಿದ್ದರು. ಈ ಎಲ್ಲ ಬೆಳವಣಿಗೆ ಮಧ್ಯೆ ಈಗ ಜನಾರ್ದನ ರೆಡ್ಡಿ ಅವರನ್ನು ಅಮಿತ್‌ ಶಾ ಕರೆಸಿಕೊಂಡಿದ್ದಾರೆ. ಕೆಲವು ಹೊತ್ತು ಚರ್ಚೆಯನ್ನೂ ನಡೆಸಿದ್ದಾರೆ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಲು ಸೂಚನೆಯನ್ನು ನೀಡಿರಬಹುದೇ? ಮುಂದೆ ಪಕ್ಷದಿಂದ ಸಹಕಾರ ಕೊಡುವುದಾಗಿ ಹೇಳಲಾಗಿದೆಯೇ ಎಂಬ ಪ್ರಶ್ನೆ ಮೂಡಿದೆ.

ಹಲವು ವರ್ಷಗಳ ಬಳಿಕ ಭೇಟಿ

ಜನಾರ್ದನ ರೆಡ್ಡಿ ಅವರು ಬಿಜೆಪಿಯ ಹಳೇ ನಾಯಕ. ಹಿಂದೆ ಬಿಜೆಪಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ, ಬದಲಾದ ಸನ್ನಿವೇಶದಲ್ಲಿ ಅವರು ಸಚಿವರಾಗಿದ್ದಾಗಲೇ ಜೈಲು ಸೇರಬೇಕಾದ ಪರಿಸ್ಥಿತಿ ಬಂದೊದಗಿತ್ತು. ಹೌದು.. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ವರ್ಷ ಕಾಲ ಜೈಲುವಾಸವನ್ನು ಅನುಭವಿಸಿದ್ದರು. ಇದರಿಂದ ಬಿಜೆಪಿಗೆ ಭಾರೀ ಮುಖಭಂಗವಾಗಿತ್ತು. ಅಲ್ಲದೇ ಈ ಬಗ್ಗೆ ಸಿದ್ದರಾಮಯ್ಯ ಬಳ್ಳಾರಿ ವರೆಗೆ ಪಾದಯಾತ್ರೆ ಮಾಡಿ ರೆಡ್ಡಿ ವಿರುದ್ಧ ತೊಡೆತಟ್ಟಿದ್ದರು. ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ, ಜನಾರ್ದನ ರೆಡ್ಡಿ ಅವರನ್ನು ಪಕ್ಷದಿಂದ ದೂರ ಇಟ್ಟಿತ್ತು. ಅಲ್ಲದೇ ಜೈಲಿಗೆ ಹೋಗಿಬಂದಾಗಿನಿಂದ ರೆಡ್ಡಿಯನ್ನು ಯಾವೊಬ್ಬ ಕೇಂದ್ರ ಬಿಜೆಪಿ ನಾಯಕರು ಹತ್ತಿರ ಸೇರಿಸಿಕೊಂಡಿರಲಿಲ್ಲ. ಇದೀಗ ಹಲವು ವರ್ಷಗಳ ನಂತರ ಖುದ್ದು ಅಮಿತ್ ಶಾ, ರೆಡ್ಡಿ ಜೊತೆ ಮಾತುಕತೆ ನಡೆಸಿರುವುದು ಹಲವು ಚರ್ಚೆಗೆ ಗ್ರಾಸವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:39 pm, Thu, 14 March 24