ನವದೆಹಲಿ: ಕಾಂಗ್ರೆಸ್ ಪಕ್ಷದ ಕಟ್ಟಾ ಕಾರ್ಯಕರ್ತರಾಗಿದ್ದ ಗುಲಾಂ ನಬಿ ಆಜಾದ್ (Ghulam Nabi Azad) ಇದೀಗ ಕಾಂಗ್ರೆಸ್ಗೆ ಗುಡ್ ಬೈ ಹೇಳಿದ್ದಾರೆ. ತಮ್ಮ ರಾಜೀನಾಮೆಗೆ ರಾಹುಲ್ ಗಾಂಧಿಯೇ (Rahul Gandhi) ಕಾರಣ ಎಂದು ಸೋನಿಯಾ ಗಾಂಧಿಗೆ ಪತ್ರವನ್ನೂ ಬರೆದಿದ್ದಾರೆ. ರಾಹುಲ್ ಗಾಂಧಿಯವರ ಕಟು ಟೀಕೆಯೊಂದಿಗೆ ಇಂದು ಕಾಂಗ್ರೆಸ್ ತೊರೆದಿರುವ ಗುಲಾಂ ನಬಿ ಆಜಾದ್ ಜಮ್ಮು ಕಾಶ್ಮೀರದಲ್ಲಿ ಹೊಸ ಪಕ್ಷವನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯಾಗಿರುವ ಗುಲಾಂ ನಬಿ ಆಜಾದ್ ತಮ್ಮ ತವರು ನೆಲದಲ್ಲಿ ತಮ್ಮ ಹೊಸ ಪಕ್ಷವನ್ನು ಪ್ರಾರಂಭಿಸಲು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
“ನಾನು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗುತ್ತೇನೆ. ನಾನು ನನ್ನ ರಾಜ್ಯದಲ್ಲಿ ನನ್ನದೇ ಆದ ಪಕ್ಷವನ್ನು ರಚಿಸುತ್ತೇನೆ. ನಂತರ ರಾಷ್ಟ್ರ ರಾಜಕಾರಣದ ಬಗ್ಗೆ ಪರಿಶೀಲಿಸುತ್ತೇನೆ” ಎಂದು ಗುಲಾಂ ನಬಿ ಆಜಾದ್ ಇಂಡಿಯಾ ಟುಡೇಗೆ ತಿಳಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯಲಿದೆ.
ಗುಲಾಂ ನಬಿ ಆಜಾದ್ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಬಹಳ ಆತ್ಮೀಯ ಸಂಬಂಧ ಹೊಂದಿದ್ದಾರೆ. ಅವರಿಗೆ ಸಂಸತ್ತಿನಲ್ಲಿ ಬೀಳ್ಕೊಡುಗೆ ನೀಡುವ ಸಂದರ್ಭದಲ್ಲಿ ಮೋದಿ ಭಾವುಕರಾಗಿ ಗುಲಾಂ ನಬಿ ಆಜಾದ್ ನನ್ನ ನಿಜವಾದ ಸ್ನೇಹಿತ ಎಂದು ಹೇಳಿದ್ದ ವಿಡಿಯೋ ಮತ್ತೆ ವೈರಲ್ ಆಗಿತ್ತು. ಈ ಮೂಲಕ ಕಾಂಗ್ರೆಸ್ ತೊರೆದ ಗುಲಾಂ ನಬಿ ಆಜಾದ್ ಬಿಜೆಪಿ ಸೇರಲಿದ್ದಾರೆ ಎಂಬ ಚರ್ಚೆಗಳೂ ನಡೆದಿದ್ದವು. ಆದರೆ, ಗುಲಾಂ ನಬಿ ಆಜಾದ್ ಜಮ್ಮು ಮತ್ತು ಕಾಶ್ಮೀರ ಚುನಾವಣೆಗೆ ಮುಂಚಿತವಾಗಿ ತಮ್ಮದೇ ಸ್ವಂತ ಪಕ್ಷ ಸ್ಥಾಪಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: BIG NEWS: ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಗುಲಾಂ ನಬಿ ಆಜಾದ್
73 ವರ್ಷದ ಗುಲಾಂ ನಬಿ ಆಜಾದ್ ಇಂದು ಕಾಂಗ್ರೆಸ್ನ ತನ್ನ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ಕಾಂಗ್ರೆಸ್ನ ಹಲವಾರು ಪ್ರಮುಖ ನಾಯಕರು ಪಕ್ಷಕ್ಕೆ ವಿದಾಯ ಹೇಳುತ್ತಿರುವುದರಿಂದ ಕಾಂಗ್ರೆಸ್ಗೆ ದೊಡ್ಡ ಹೊಡೆತ ಬಿದ್ದಿದೆ. ಇದೀಗ ಗುಲಾಂ ನಬಿ ಆಜಾದ್ ಕೂಡ ದೊಡ್ಡ ಶಾಕ್ ನೀಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದ 5 ಪುಟಗಳ ಸುದೀರ್ಘ ಪತ್ರದಲ್ಲಿ ಗುಲಾಂ ನಬಿ ಆಜಾದ್ ತಾವು ಕಾಂಗ್ರೆಸ್ನಿಂದ ದೂರ ಸರಿಯುತ್ತಿರುವುದಕ್ಕೆ ಪಕ್ಷದಲ್ಲಿ ಹಿರಿಯ ನಾಯಕರನ್ನು ದೂರವಿಡುವುದು ಮತ್ತು ಪಕ್ಷದಲ್ಲಿ ಬೆಳೆಯುತ್ತಿರುವ ಪಕ್ಷಪಾತವೇ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ, ರಾಹುಲ್ ಗಾಂಧಿಯನ್ನು “ಅಪ್ರಬುದ್ಧ” ಎಂದು ಗುಲಾಂ ನಬಿ ಆಜಾದ್ ಕರೆದಿದ್ದಾರೆ.
ಇದನ್ನೂ ಓದಿ: Ghulam Nabi Azad: ಸೂತ್ರದ ಗೊಂಬೆಯಂಥ ಅಸಮರ್ಥ ನಾಯಕನ ಪಿಎಗಳು ಕಾಂಗ್ರೆಸ್ ಮುನ್ನಡೆಸುತ್ತಿದ್ದಾರೆ; ಗುಲಾಂ ನಬಿ ಆಜಾದ್
ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಗುಲಾಂ ನಬಿ ಆಜಾದ್, ನನಗೆ ವೈಯಕ್ತಿಕ ಮಟ್ಟದಲ್ಲಿ ಇಡೀ ಗಾಂಧಿ ಕುಟುಂಬದ ಬಗ್ಗೆ ಅಪಾರ ಗೌರವವಿದೆ. ಇಲ್ಲಿ ನಾನು ವೈಯಕ್ತಿಕ ಸಂಬಂಧದ ಬಗ್ಗೆ ಮಾತನಾಡುತ್ತಿಲ್ಲ. ಕಾಂಗ್ರೆಸ್ ಪತನದ ಬಗ್ಗೆ ಮಾತನಾಡುತ್ತಿದ್ದೇನೆ. ರಾಹುಲ್ ಗಾಂಧಿ ರಾಜಕೀಯಕ್ಕೆ ಬಂದ ನಂತರ ಮತ್ತು ವಿಶೇಷವಾಗಿ ಜನವರಿ 2013ರ ನಂತರ ರಾಹುಲ್ ಗಾಂಧಿಯನ್ನು ಉಪಾಧ್ಯಕ್ಷರನ್ನಾಗಿ ನೇಮಿಸಿದ ನಂತರ ಕಾಂಗ್ರೆಸ್ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಕಾಂಗ್ರೆಸ್ ಪೂರ್ತಿ ನಾಶವಾಗುತ್ತಿದೆ. ಕಾಂಗ್ರೆಸ್ ರಾಷ್ಟ್ರೀಯ ಮಟ್ಟದಲ್ಲಿ ತನಗೆ ಲಭ್ಯವಿರುವ ರಾಜಕೀಯ ಜಾಗವನ್ನು ಬಿಜೆಪಿಗೆ ಮತ್ತು ರಾಜ್ಯ ಮಟ್ಟದ ಜಾಗವನ್ನು ಪ್ರಾದೇಶಿಕ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ ಎಂದು ಹೇಳಿದ್ದಾರೆ.
Published On - 3:09 pm, Fri, 26 August 22