ನನ್ನ ಹೆಣದ ಮೇಲೆ ಸರ್ಕಾರ ಮಾಡಬೇಕು: ಹೆಚ್​ಡಿ ದೇವೇಗೌಡ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ವ್ಯಂಗ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 30, 2023 | 4:20 PM

ಬಿಜೆಪಿ ಜೊತೆ ಸರ್ಕಾರ ಮಾಡಿದರೆ ನನ್ನ ಹೆಣದ ಮೇಲೆ ಮಾಡಬೇಕು ಎಂದು ಇದೇ ಜೆಡಿಎಸ್​ ವರಿಷ್ಠ ಹೆಚ್​ಡಿ ದೇವೇಗೌಡ ಹೇಳಿದ್ದರು. ಆದರೆ ಈಗ ಜನತಾ ದಳ ಉಳಿವಿಗಾಗಿ ಬಿಜೆಪಿ ಜೊತೆ ಸೇರುತ್ತಿದ್ದೇವೆ ಅಂತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಜೊತೆಗೆ ಅಧಿಕಾರ ಇರಲಿ ಇಲ್ಲದಿರಲಿ, ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲ್ಲ ಎಂದಿದ್ದಾರೆ.  

ಬೆಂಗಳೂರು, ಸೆಪ್ಟೆಂಬರ್​ 30: ಅಧಿಕಾರ ಇರಲಿ ಇಲ್ಲದಿರಲಿ, ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲ್ಲ ಎಂದು ಹೇಳುವ ಮೂಲಕ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಟಾಂಗ್​ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜೊತೆ ಸರ್ಕಾರ ಮಾಡಿದರೆ ನನ್ನ ಹೆಣದ ಮೇಲೆ ಮಾಡಬೇಕು ಎಂದು ಇದೇ ಜೆಡಿಎಸ್​ ವರಿಷ್ಠ ಹೆಚ್​ಡಿ ದೇವೇಗೌಡ ಹೇಳಿದ್ದರು. ಆದರೆ ಈಗ ಜನತಾ ದಳ ಉಳಿವಿಗಾಗಿ ಬಿಜೆಪಿ ಜೊತೆ ಸೇರುತ್ತಿದ್ದೇವೆ ಅಂತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಒಂದು ಧರ್ಮದ ಮೇಲೆ ಇನ್ನೊಂದು ಧರ್ಮ ಎತ್ತಿಕಟ್ಟುವುದು ರಾಜಕಾರಣನಾ? ಜನರನ್ನು ಬಿಟ್ಟು, ಸಮಾಜ ಬಿಟ್ಟು ರಾಜಕಾರಣ ಮಾಡಲು ಆಗುವುದಿಲ್ಲ. ಜಾತ್ಯತೀತ ಪಕ್ಷ ಅಂತ ಯಾವುದಾದರು ಇದ್ದರೆ ಅದು ಕಾಂಗ್ರೆಸ್ ಪಕ್ಷ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಬಿಡಲ್ಲ-ಸಿಎಂ ಸಿದ್ದರಾಮಯ್ಯ

ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬ ಶಾಸಕ ಶಾಮನೂರು ಶಿವಶಂಕರಪ್ಪ ಆರೋಪಕ್ಕೆ ಲಿಂಗಾಯತರೇ 7 ಮಂದಿ ಸಚಿವರಿಲ್ವಾ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ನನ್ನ ಬಳಿ ಅಂಕಿಅಂಶಗಳಿವೆ. ನಮ್ಮ ಸರ್ಕಾರ ಯಾವ ಸಮುದಾಯಕ್ಕೂ ಅನ್ಯಾಯ ಮಾಡಿಲ್ಲ ಎಂದರು.

ಪ್ರತಿಯೊಬ್ಬ ವ್ಯಕ್ತಿಯು ಜಾತ್ಯಾತೀತವಾಗಿರುವುದು ಅಗತ್ಯ

ಪ್ರತಿಯೊಬ್ಬ ವ್ಯಕ್ತಿಯು ಜಾತ್ಯಾತೀತವಾಗಿರುವುದು ಅಗತ್ಯ. ನಮ್ಮಲ್ಲಿ ಅನೇಕ ಜಾತಿ ಧರ್ಮಗಳಿವೆ. ಇದರಲ್ಲಿ ನಾವು ಏಕತೆಯನ್ನ ಕಾಣಬೇಕು. ಎಲ್ಲರಲ್ಲೂ ಮನುಷ್ಯತ್ವ ಕಾಣಬೇಕು. ಬೇರೆ ಸಮುದಾಯವರು ಈ ಕಟ್ಟಡಕ್ಕೆ ಸೌಹಾರ್ದ ಭವನ ಅಂತ ಹೆಸರು ಇಟ್ಟಿರುವುದು ತುಂಬಾ ಸಂತೋಷ.

ಇದನ್ನೂ ಓದಿ: ಬಿಜೆಪಿ, ಜೆಡಿಎಸ್ ಮೈತ್ರಿ ಬಗ್ಗೆ ಮೌನ ಮುರಿದ ಸಿಎಂ ಇಬ್ರಾಹಿಂ: ಜೆಡಿಎಸ್ ರಾಜ್ಯಾಧ್ಯಕ್ಷ ಹೇಳಿದ್ದೇನು?

ಬಿಎ ಮೊಯಿದಿನ್ ಅವರೇ ಕಟ್ಟಡಕ್ಕೆ ಹೆಸರು ಸೂಚಿಸದಂತೆ. ನಮ್ಮ ಸಂವಿಧಾನ ಸ್ಪಷ್ಟವಾಗಿ ಹೇಳಿದೆ ಜಾತ್ಯಾತೀತವಾಗಿ ನಿರ್ಮಾಣವಾಗಿದೆ ಅಂತ. ಹುಟ್ಟುವಾಗ ಯಾವ ಜಾತಿಯಿಂದನಾದರೂ ಹುಟ್ಟಲ್ಲಿ ಆದರೆ ಮನುಷ್ಯತ್ವ ಮರೆಯಬಾರದು ಎಂದು ಹೇಳಿದ್ದಾರೆ.

ನನ್ನ ಅವಧಿ ಮುಗಿಯುವಷ್ಟರಲ್ಲಿ 10 ಸಾವಿರ ಕೋಟಿ ರೂ. ಮಾಡುತ್ತೇನೆ

ಮುಸ್ಲಿಂ ಸಮುದಾಯದಿಂದ ಅಭಿವೃದ್ಧಿಗೆ ಹಣ ಬೇಡಿಕೆ ವಿಚಾರವಾಗಿ ಮಾತನಾಡಿದ ಅವರು, 400 ಕೋಟಿ ರೂ. ಇತ್ತು ಮೊದಲು. ನಂತರ ಅದನ್ನ ನಾನು 3 ಸಾವಿರ ಕೋಟಿ ರೂ. ಮಾಡಿದೆ. ಆವಾಗ ಕೂಡ ನನ್ನ ಯಾರು ಕೇಳಿರಲಿಲ್ಲ, ಅನುದಾನ ಹೆಚ್ಚು ಮಾಡಿದ್ದೆ. ಈಗಲೂ ಕೂಡ ಅಷ್ಟೇ ಅನುದಾನ ಹೆಚ್ಚು ಮಾಡುತ್ತೇನೆ. ಮುಂದೆ ನನ್ನ ಅವಧಿ ಮುಗಿಯುವಷ್ಟರಲ್ಲಿ 10 ಸಾವಿರ ಕೋಟಿ ರೂ. ಮಾಡುತ್ತೇನೆ. ಅದು ನನ ಕೆಲಸ. ರಾಜ್ಯದಲ್ಲಿ ನಾವು ಎಲ್ಲಾ ಸಮುದಾಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ. ರಾಜ್ಯದ ಸಂಪತ್ತು ಎಲ್ಲರಿಗೂ ಸಿಗಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.