ನವದೆಹಲಿ: ಗುಜರಾತ್‌ನಲ್ಲಿ (Gujarat Assembly Polls) ಡಿಸೆಂಬರ್ 1ರಂದು ಮೊದಲ ಹಂತದ ಮತದಾನ, ಡಿಸೆಂಬರ್ 5ರಂದು 2ನೇ ಹಂತದ ಚುನಾವಣೆ ನಡೆಯಲಿದೆ. ಈಗಾಗಲೇ ಆಮ್ ಆದ್ಮಿ ಪಕ್ಷ (AAP) ಮಾಜಿ ಪತ್ರಕರ್ತ ಈಸುಧನ್ ಗಧ್ವಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಗುಜರಾತ್ ವಿಧಾನಸಭೆ ಚುನಾವಣೆಗೆ ಪ್ರತಿಪಕ್ಷ ಕಾಂಗ್ರೆಸ್ ಶುಕ್ರವಾರ ತನ್ನ 43 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಪ್ರಸ್ತುತ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೊಂದಿರುವ ಘಟ್ಲೋಡಿಯಾ ಕ್ಷೇತ್ರದಿಂದ ರಾಜ್ಯಸಭಾ ಸಂಸದರಾದ ಅಮೀ ಯಾಗ್ನಿಕ್ ಅವರನ್ನು ಕಣಕ್ಕಿಳಿಸಲಿದೆ.
2012 ಮತ್ತು 2017ರಲ್ಲಿ ಬಿಜೆಪಿಯ ಬಾಬು ಬೋಖಿರಿಯಾ ವಿರುದ್ಧ ಸೋತಿದ್ದ ಪೋರಬಂದರ್ ಕ್ಷೇತ್ರದಿಂದ ಹಿರಿಯ ನಾಯಕ ಮತ್ತು ಪಕ್ಷದ ಮಾಜಿ ಶಾಸಕ ಅರ್ಜುನ್ ಮೊದ್ವಾಡಿಯಾ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಪ್ರತಿನಿಧಿಸುತ್ತಿರುವ ಅಹಮದಾಬಾದ್‌ನ ಘಟ್ಲೋಡಿಯಾ ಕ್ಷೇತ್ರದಿಂದ ಸ್ಪರ್ಧಿಸಲು ಯಾಗ್ನಿಕ್ ಅವರನ್ನು ಆಯ್ಕೆ ಮಾಡಲಾಗಿದೆ.
ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ 43 ಸ್ಥಾನಗಳಲ್ಲಿ ದಾಹೋದ್ ಜಿಲ್ಲೆಯ ಜಲೋದ್ (ಎಸ್‌ಟಿ) ಎಂಬ ಒಂದು ಸ್ಥಾನವನ್ನು ಮಾತ್ರ ಕಾಂಗ್ರೆಸ್ ಹೊಂದಿದೆ. ಹಾಲಿ ಶಾಸಕ ಭವೇಶ್ ಕತಾರ ಬದಲಿಗೆ ಮಿತೇಶ್ ಗರಾಸಿಯಾ ಅವರನ್ನು ಪಕ್ಷವು ಝಲೋದ್‌ನಿಂದ ಆಯ್ಕೆ ಮಾಡಿದೆ.
ಇದನ್ನೂ ಓದಿ: ಗುಜರಾತ್ ಚುನಾವಣೆ: ಡಿಸೆಂಬರ್ 1ರಂದು ಪ್ರಥಮ, 5ರಂದು 2ನೇ ಹಂತದ ಮತದಾನ; ಡಿಸೆಂಬರ್ 8ರಂದು ಫಲಿತಾಂಶ ಪ್ರಕಟ
ಕಾಂಗ್ರೆಸ್ನ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಅಮೀ ಯಾಗ್ನಿಕ್ ಸೇರಿದಂತೆ 7 ಮಹಿಳೆಯರಿದ್ದಾರೆ. ಕೆಲವು ಮಾಜಿ ಶಾಸಕರೂ ಈ ಬಾರಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಡೋದರಾ ಕಾಂಗ್ರೆಸ್ ನಾಯಕ ನರೇಂದ್ರ ರಾವತ್ ಅವರ ಪತ್ನಿ ಮತ್ತು ಬಿಜೆಪಿ ಆಡಳಿತವಿರುವ ವಡೋದರಾ ಮುನ್ಸಿಪಲ್ ಕಾರ್ಪೊರೇಷನ್‌ನ ವಿರೋಧ ಪಕ್ಷದ ನಾಯಕಿ ಅಮೀ ರಾವತ್ ಅವರನ್ನು ನಗರದ ಸಯಾಜಿಗಂಜ್ ಕ್ಷೇತ್ರಕ್ಕೆ ಆಯ್ಕೆ ಮಾಡಲಾಗಿದೆ.
ಜಸ್ದಾನ್ ಕ್ಷೇತ್ರದ ಮಾಜಿ ಶಾಸಕ ಭೋಲಾಭಾಯಿ ಗೊಹೆಲ್ ಅವರಿಗೆ ಮತ್ತೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಭಾವನಗರದ ಮಹುವಾ ಕ್ಷೇತ್ರದಿಂದ ಪಕ್ಷದ ಹಿರಿಯ ನಾಯಕ ಮತ್ತು ಬಿಜೆಪಿಯ ಮಾಜಿ ಶಾಸಕ ಕನುಭಾಯಿ ಕಲ್ಸರಿಯಾ ಅವರನ್ನು ಅದೇ ಸ್ಥಾನಕ್ಕೆ ಕಾಂಗ್ರೆಸ್ ಆಯ್ಕೆ ಮಾಡಿದೆ. 2017ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಸಂಖೇಡಾ (ಎಸ್‌ಟಿ) ಕ್ಷೇತ್ರಕ್ಕೆ ಮಾಜಿ ಶಾಸಕ ಧೀರೂಭಾಯಿ ಭಿಲ್‌ಗೆ ಟಿಕೆಟ್ ನೀಡಲಾಗಿದೆ.
ಇದನ್ನೂ ಓದಿ: ನಾವು ಶೇ100 ನಿಷ್ಪಕ್ಷವಾಗಿದ್ದೇವೆ: ಗುಜರಾತ್ ಚುನಾವಣಾ ದಿನಾಂಕ ಬಗ್ಗೆ ಚುನಾವಣಾ ಆಯೋಗ
ಕಾಂಗ್ರೆಸ್ನ ಮೊದಲ ಪಟ್ಟಿಯಲ್ಲಿ 10 ಪಟೇಲ್ ಅಥವಾ ಪಾಟಿದಾರ್ ಅಭ್ಯರ್ಥಿಗಳು, 11 ಆದಿವಾಸಿಗಳು, 10 ಓಬಿಸಿಗಳು ಮತ್ತು 5 ಎಸ್‌ಟಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಆಡಳಿತಾರೂಢ ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಗಳನ್ನು ಘೋಷಿಸದಿದ್ದರೂ, ಹೊಸದಾಗಿ ಗುಜರಾತ್ ಚುನಾವಣಾ ಅಖಾಡಕ್ಕೆ ಪ್ರವೇಶಿಸಿರುವ ಆಮ್ ಆದ್ಮಿ ಪಕ್ಷ 118 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ ನಂತರ ಪಟ್ಟಿಯನ್ನು ಘೋಷಿಸಲಾಯಿತು. 2 ದಶಕಗಳಿಗೂ ಹೆಚ್ಚು ಕಾಲ ಬಿಜೆಪಿ ಪಕ್ಷ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.
ಗುಜರಾತ್‌ನಲ್ಲಿ ಮೊದಲ ಹಂತದ ಅಸೆಂಬ್ಲಿ ಚುನಾವಣೆ ಡಿಸೆಂಬರ್ 1ರಂದು ಮತ್ತು 2ನೇ ಹಂತದ ಚುನಾವಣೆ ಡಿಸೆಂಬರ್ 5ರಂದು ನಡೆಯಲಿದೆ. ಡಿಸೆಂಬರ್ 8ರಂದು ಮತ ಎಣಿಕೆ ನಡೆಯಲಿದೆ. 2017ರಲ್ಲಿ ಗುಜರಾತ್‌ನಲ್ಲಿ ಅಸೆಂಬ್ಲಿ ಚುನಾವಣೆಗಳು ನಡೆದಿದ್ದು, ಬಿಜೆಪಿ ಸತತ 5ನೇ ಅವಧಿಯ ಅಧಿಕಾರವನ್ನು ಪಡೆಯಲು ಯಶಸ್ವಿಯಾಯಿತು. ಕಳೆದ ಬಾರಿ ರಾಜ್ಯ ವಿಧಾನಸಭೆಯ 182 ಸ್ಥಾನಗಳಲ್ಲಿ ಬಿಜೆಪಿ ಪಕ್ಷ 99 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 77 ಸ್ಥಾನಗಳನ್ನು ಪಡೆದುಕೊಂಡಿತ್ತು. ಈ ಬಾರಿಯ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.