ಹಾಸನ: ತಾಯಿ ಭವಾನಿ ರೇವಣ್ಣ ಟಿಕೆಟ್ಗಾಗಿ ಪುತ್ರನೂ ಆಗಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ (Suraj Revanna) ಬಿಗಿಪಟ್ಟು ಹಿಡಿದಿದ್ದು, ಚಿಕ್ಕಪ್ಪ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ವಿರುದ್ಧವೇ ಹೇಳಿಕೆ ನೀಡಿದ್ದರು. ಇದು ಜೆಡಿಎಸ್ ಪಕ್ಷದ ಇಮೇಜ್ ಡ್ಯಾಮೇಜ್ ಮಾಡಿದ್ದು, ಇದನ್ನು ಸರಿ ಪಡಿಸಲು ಹೆಚ್.ಡಿ.ರೇವಣ್ಣ (H.D.Revanna) ಸರ್ಕಸ್ ಮಾಡುತ್ತಿದ್ದಾರೆ. ಇನ್ನು ಸೂರಜ್ ಹೇಳಿಕೆಯಿಂದ ಕುಮಾರಸ್ವಾಮಿ ಅವರು ಮಹಾಭಾರತ, ರಾಮಾಯಣ ವೃತ್ತಾಂತಕ್ಕೆ ಹೋಲಿಸಿ ಭಾವುಕರಾಗಿದ್ದರು. ಇದರ ಬೆನ್ನಲ್ಲೆ ಭವಾನಿ ರೇವಣ್ಣ (Bhavani Revanna) ವಿಚಾರದಲ್ಲಿ ಮೌನ ಮುರಿದ ರೇವಣ್ಣ ಹೊಳೆನರಸೀಪುರದಲ್ಲಿ ಸುದ್ದಿಗೋಷ್ಠಿ ನಡೆಸಿ, ಹಾಸನ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ವರಿಷ್ಠರು ಕೈಗೊಳ್ಳುವ ತೀರ್ಮಾನವೇ ಅಂತಿಮ ಎಂದು ಹೇಳಿದ್ದಾರೆ.
ರಾಯಚೂರಿನಲ್ಲಿ ಭಾವುಕ ಮಾತುಗಳನ್ನಾಡಿದ್ದ ಕುಮಾರಸ್ವಾಮಿ, ನಮ್ಮ ಕುಟುಂಬದ ಮಕ್ಕಳು ಮಾತಾಡಿದ್ದಾರೆ ಏನ್ಮಾಡೋದು? ಶಕುನಿಗಳು ನಮ್ಮ ಕುಟುಂಬದ ಮಕ್ಕಳಿಗೆ ಪ್ರಚೋದಿಸಿದ್ದಾರೆಂದು ಗರಂ ಆಗಿದ್ದರು. ಅಲ್ಲದೆ ಹಾಸನದ ಸಮಸ್ಯೆಯನ್ನು ನಾನೇ ಬಗೆಹರಿಸುತ್ತೇನೆ ಎಂದಿದ್ದರು. ಅಲ್ಲದೆ, ಹಾಸನದಲ್ಲಿ ಏನಿದ್ದರೂ ಬಿಜೆಪಿ ವರ್ಸಸ್ ಕುಮಾರಸ್ವಾಮಿ ಅಂತಾ ಗುಡುಗಿದ್ದರಲ್ಲದೆ, ಇದುವರೆಗೂ ಹಾಸನ ರಾಜಕಾರಣದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಇನ್ಮೇಲೆ ಹಾಸನದ ಬಗ್ಗೆ ಹಾಸನ ರಾಜಕಾರಣದ ಬಗ್ಗೆ ತಿಳಿಯುತ್ತೇನೆ ಎಂದಿದ್ದರು.
ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೆ ಎಚ್ಚೆತ್ತ ರೇವಣ್ಣ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ನಮ್ಮ ನಾಯಕ. ಕುಮಾರಸ್ವಾಮಿ, ರೇವಣ್ಣ ಹೊಡೆದಾಡುತ್ತಾರೆ ಕೆಲವರು ಅಂದುಕೊಂಡಿದ್ದರು. ನನ್ನ ತಲೆ ಇರುವವರೆಗೆ ಯಾವುದೇ ಕಾರಣಕ್ಕೂ ನಾವು ಹೊಡೆದಾಡಲ್ಲ ಎಂದಿದ್ದಾರೆ. ಅಲ್ಲದೆ, ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಟಿಕೆಟ್ ಹಂಚಿಕೆ ವಿಚಾರದಲ್ಲಿ ವರಿಷ್ಠರು ಕೈಗೊಳ್ಳುವ ನಿರ್ಧಾರವೇ ಅಂತಿಮ ಎಂದು ರೇವಣ್ಣ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: Hassan Politics: ಹಾಸನ ಟಿಕೆಟ್ ದೇವೇಗೌಡರು ಡಿಸೈಡ್ ಮಾಡ್ತಾರೆ; ಎಚ್ಡಿಕೆಗೆ ಟಾಂಗ್ ಕೊಟ್ಟ ಸೂರಜ್ ರೇವಣ್ಣ
ಟಿಕೆಟ್ ವಿಚಾರದಲ್ಲಿ ಪಕ್ಷದ ವರಿಷ್ಠರಾದ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ನಿರ್ಧಾರವೇ ಅಂತಿಮ. ನಾನಾಗಲಿ, ನನ್ನ ಮಕ್ಕಳಾಗಲಿ ಟಿಕೆಟ್ ಫೈನಲ್ ಮಾಡಲು ಆಗಲ್ಲ. ಕುಮಾರಸ್ವಾಮಿ ಹಾಗೂ ನನ್ನ ಸಂಬಂಧ ಬೇರ್ಪಡಿಸಲು ಸಾಧ್ಯವಿಲ್ಲ, ನಮ್ಮಿಬ್ಬರನ್ನು ಬೇರ್ಪಡಿಸುತ್ತೇವೆ ಎಂಬುವುದು ಕೆಲವರ ಭ್ರಮೆ ಅಷ್ಟೆ. ನಮ್ಮ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಟಿಕೇಟ್ ವಿಚಾರದ ಬಗ್ಗೆ ಎಲ್ಲರು ಕುಳಿತುಕೊಂಡು ಚರ್ಚೆ ಮಾಡಿ ಜನರ ವಿಶ್ವಾಸ ಹಾಗೂ ಸ್ಥಳೀಯ ಶಾಸಕ ಅಭಿಪ್ರಾಯ ಪಡೆಯುತ್ತಾರೆ. ನಾನೊಬ್ಬನೇ ತೀರ್ಮಾನ ಮಾಡುವ ಪ್ರಶ್ನೆಯೇ ಇಲ್ಲಾ ಎಂದರು.
ಕೆಲವರು ಭವಾನಿ ಅವರಿಗೆ ಟಿಕೆಟ್ ಕೊಡಿ ಅಂತಾರೆ, ಕೆಲವರು ಇನ್ನೊಬ್ಬರಿಗೆ ಕೊಡಿ ಅಂತಾರೆ. ಅದನ್ನೆಲ್ಲಾ ಕೂತು ತೀರ್ಮಾನ ಮಾಡುವುದು ಪಕ್ಷ. ನಾನಾಗಲಿ, ಸೂರಜ್ ಆಗಲಿ, ಪ್ರಜ್ವಲ್ ಆಗಲಿ ಅಥವಾ ಇನ್ಯಾರೇ ಆಗಲಿ ತೀರ್ಮಾನ ಮಾಡುವ ಪ್ರಶ್ನೆ ಇಲ್ಲ. ಪಕ್ಷದ ಹೈಕಮಾಂಡ್ ಏನು ಹೇಳುತ್ತದೆಯೋ ಅದಕ್ಕೆ ಎಲ್ಲರೂ ಬದ್ದರಾಗಿ ಇರಬೇಕಾಗುತ್ತದೆ. ನಮಗೆ ಜಿಲ್ಲೆಯ ಅಭಿವೃದ್ಧಿ ಮುಖ್ಯ. ಕಳೆದ ಹತ್ತು ವರ್ಷದಿಂದ ಹಾಸನ ಜಿಲ್ಲೆ ಅಭಿವೃದ್ಧಿ ಆಗಿಲ್ಲ. ವಿಮಾನ ನಿಲ್ದಾಣ ನಿಲ್ಲಿಸಿದಾರೆ, ಐಐಟಿ ಜಾಗ ಬೇರೆಯದಕ್ಕೆ ಬಳಸಿದ್ದಾರೆ. ಹಾಸನದ ಅಸ್ಪತ್ರೆ ಕುಮಾರಣ್ಣ ಬರದಿದ್ದರೆ ಆಗೋದಾ? ಎಂದು ರೇವಣ್ಣ ಪ್ರಶ್ನಿಸಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ