ರಾಮನಗರ: ಆರ್‌ಎಸ್ಎಸ್ ಸಂಘಟನೆಯಿಂದ ಉತ್ತರ ಪ್ರದೇಶದಲ್ಲಿ ಸರ್ಕಾರ ರಚನೆ ಆಗಿದೆ. ಉತ್ತರ ಪ್ರದೇಶದಲ್ಲಿರುವುದು ಆರ್‌ಎಸ್ಎಸ್ ಸರ್ಕಾರ. ಉತ್ತರ ಪ್ರದೇಶ ಸರ್ಕಾರ ಆರ್‌ಎಸ್ಎಸ್ ಹಿಡಿತದಲ್ಲಿದೆ. ಮನುಸ್ಮೃತಿ ಯುಗಕ್ಕೆ ಕರೆದೊಯ್ಯುವುದು ನಿಮ್ಮ ಅಜೆಂಡಾ. ನಾವೂ ಹಿಂದೂಗಳೇ, ಆದ್ರೆ ಹಿಂದುತ್ವ ನಮ್ಮ ಅಜೆಂಡಾವಲ್ಲ. ಮೊದಲು ದುಡಿಯುವ ಕೈಗಳಿಗೆ ದುಡಿಮೆ ಕೊಡಿ. ಸರ್ಕಾರಗಳು ಬಡವರ ಬಗ್ಗೆ ಗಮನ ಕೊಡಬೇಕು. ರೈತರ ಮೇಲೆ ಗೌರವ ಇದ್ದರೆ ತಪ್ಪಿತಸ್ಥರನ್ನು ಬಂಧಿಸಿ. ಕಾರು ಹತ್ತಿಸಿದವರನ್ನು ಮೊದಲು ಬಂಧಿಸಬೇಕಾಗಿತ್ತು. ಕಾರು ಹತ್ತಿಸಿದವರಿಗೆ ಏಕೆ ರಕ್ಷಣೆ ಕೊಟ್ಟಿದ್ದೀರಿ? ಎಂದು ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಉತ್ತರ ಪ್ರದೇಶದ ಲಖೀಮ್‌ಪುರ ಖೇರಿಯಲ್ಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆಯ ಬಗ್ಗೆ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ವ್ಯಕ್ತಿ ಈ ಕೆಲಸ ಮಾಡಿದ್ರೆ ಬಂಧಿಸ್ತಿದ್ರಿ. ಇದೇನಾ ನಿಮ್ಮ ಶಾಂತಿಯುತ ಉತ್ತರಪ್ರದೇಶ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಅಧಿಕಾರಕ್ಕಾಗಿ ಅಮಾಯಕರನ್ನು ಬಲಿ ಪಡೆಯುವುದು, ರಕ್ತದೋಕುಳಿ ಮಾಡ್ತಾ ಇದ್ದೀರಾ ಎಂದು ಕೇಳಿದ್ದಾರೆ. ಆರ್ಎಸ್ಎಸ್ನವರು ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್‌ಗೆ ಸಂಬಂಧಪಟ್ಟ ಪುಸ್ತಕ ಓದುತ್ತಿದ್ದೆ. ಅದರಲ್ಲಿ ಇವರ ಹಿಡನ್ ಅಜೆಂಡಾ ಏನೆಂದು ಗೊತ್ತಾಗುತ್ತೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
4 ಸಾವಿರ ಆರ್ಎಸ್ಎಸ್ ಕಾರ್ಯಕರ್ತರು ಐಎಎಸ್ ಐಪಿಎಸ್ ಅಧಿಕಾರಿಗಳಾಗಿದ್ದಾರೆ
ನಾಲ್ಕು ಸಾವಿರ ಸಿವಿಲ್ ಸರ್ವೆಂಟ್‌ಗಳು ಬಿಜೆಪಿಯ ಕಾರ್ಯಕರ್ತರು ಇದ್ದಾರೆ. ಬಿಜೆಪಿ ಕಾರ್ಯಕರ್ತರು ಅಂದರೆ ಆರ್‌ಎಸ್‌ಎಸ್ ಕಾರ್ಯಕರ್ತರು. ದೇಶದಲ್ಲಿ ಬಿಜೆಪಿಯ ಕಾರ್ಯಕರ್ತರು, 4 ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಟ್ರೈನಿಂಗ್ ಕೊಡ್ತಾರೆ. ಈ ಪರೀಕ್ಷೆ ಬರೆಯಲು ಟ್ರೈನಿಂಗ್ ಕೊಟ್ಟಿದ್ದಾರೆ. 2016ರ ಒಂದೇ ವರ್ಷದಲ್ಲಿ 676 ಜನ ಪಾಸ್ ಆಗಿದ್ದಾರೆ ಎಂದು ಆರ್ಎಸ್ಎಸ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರಿಯಾಗಿದ್ದಿದ್ದರೆ ದೇಶ ಹೀಗಿರುತ್ತಿರಲಿಲ್ಲ
ಕಾಂಗ್ರೆಸ್ ಸರಿಯಾಗಿದ್ದಿದ್ದರೆ ಈ ದೇಶ ಹೀಗಿರುತ್ತಿರಲಿಲ್ಲ. ಕಾಂಗ್ರೆಸ್ ಸ್ವೇಚ್ಛಾವರ್ತನೆಯಿಂದ ಈ ಪರಿಸ್ಥಿತಿ ನಿರ್ಮಾಣ ಆಗಿದೆ. ಕಾಂಗ್ರೆಸ್ ಹೇಗೆ ಆಡಳಿತ ನಡೆಸಿದೆ ಎಂಬುದು ಗೊತ್ತಿದೆ. 3 ಸಾವಿರ ರೈತರು ಸಾಯೋವರೆಗೆ ಗೊತ್ತಿಲ್ಲದಂತೆ ಇದ್ದರು. ಅಂದಿನ ಸಿಎಂ ಏನೂ ಗೊತ್ತಿಲ್ಲದಂತೆ ಸುಮ್ಮನೆ ಇದ್ದರು. ಈಗ ಅಧಿಕಾರಕ್ಕಾಗಿ ಪಂಜಿನ ಮೆರವಣಿಗೆ ಮಾಡ್ತಿದ್ದಾರೆ. ಇವರ ಡೆಡ್‌ಲೈನ್‌ಗಳಿಂದ ಏನೂ ಪ್ರಯೋಜನವಾಗಲ್ಲ. ಎರಡು ರಾಷ್ಟ್ರೀಯ ಪಕ್ಷಗಳಿಂದ ಏನೂ ನಡೆಯಲ್ಲ. ಇದಕ್ಕೆ ಉತ್ತರ ಸಿಗುವುದು ಜೆಡಿಎಸ್ ಪಕ್ಷದಿಂದ ಎಂದು ಕೇತಗಾನಹಳ್ಳಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಜೆಡಿಎಸ್ ಪಕ್ಷದ ಕ್ರೈಸ್ತ ಸಮುದಾಯದ ಕಾರ್ಯಾಗಾರ ಹೆಚ್.ಡಿ. ಕುಮಾರಸ್ವಾಮಿ ತೋಟದ ಮನೆಯಲ್ಲಿ ನಡೆಸಲಾಗಿದೆ. ವಿಧಾನಸಭೆಯಲ್ಲಿ ಮತಾಂತರ ವಿಚಾರದ ಚರ್ಚೆ ಗಮನಿಸಿದ್ದೆ. ಶಾಸಕರೊಬ್ಬರು ತಮ್ಮ ತಾಯಿ ಮತಾಂತರದ ಬಗ್ಗೆ ಹೇಳಿದ್ರು. ಈ ವಿಚಾರವಾಗಿ ಕ್ರೈಸ್ತ ಸಮುದಾಯದವರು ಚರ್ಚಿಸಿದರು. ಒತ್ತಾಯ ಮಾಡಿ ಮತಾಂತರ ಮಾಡಲು ಬೈಬಲ್ ಹೇಳಲ್ಲ. ನಾವು ಇಲ್ಲೇ ಹುಟ್ಟಿದವರು, ಭಾರತೀಯರೆಂದು ಹೇಳಿದ್ರು ಎಂದು ಕಾರ್ಯಾಗಾರದ ಬಳಿಕ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿಗೆ ಜೆಡಿಎಸ್ ಕಾರ್ಯಾಗಾರದಲ್ಲಿ ಹೆಚ್.ಡಿ. ಕೋಟೆ ಜೆಡಿಎಸ್ ಕಾರ್ಯಕರ್ತರು 11 ಕುರಿಗಳ ಉಡುಗೊರೆ ನೀಡಿದ್ದಾರೆ. ಜೆಡಿಎಸ್ ಕಾರ್ಯಾಗಾರದಲ್ಲಿ ಕುರಿಗಳ ಉಡುಗೊರೆ ನೀಡಲಾಗಿದೆ. ರಾಮನಗರ ತಾಲೂಕಿನ ಬಿಡದಿ ಬಳಿಯ ಕುಮಾರಸ್ವಾಮಿ ತೋಟದ ಮನೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಉಡುಗೊರೆ ಕೊಡಲಾಗಿದೆ.
ಇದನ್ನೂ ಓದಿ: ದೇಶ ಉಳಿಸಲು ಜೆಡಿಎಸ್ ಬೆಂಬಲಿಸಿ: ಮುಸ್ಲಿಂ ಮುಖಂಡರಿಗೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಕರೆ
ಇದನ್ನೂ ಓದಿ: ಎತ್ತಿನಹೊಳೆ ಹೆಸರಲ್ಲಿ ಯಾರ್ಯಾರ ಜೇಬು ತುಂಬಿಸಿದ್ದೀರಿ ಸಿದ್ದರಾಮಯ್ಯನವರೇ? ಕುಮಾರಸ್ವಾಮಿ ಪ್ರಶ್ನೆ
Published On - 2:50 pm, Tue, 5 October 21