ಬೆಂಗಳೂರು, (ಮಾರ್ಚ್ 24): ಮೂರನೇ ಬಾರಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ(HD Kumaraswamy) ಅವರು ಇಂದು (ಮಾರ್ಚ್ 24) ಚೆನ್ನೈನ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ್ದಾರೆ. ಇನ್ನು ಬೆಂಗಳೂರಿನ ಜೆಪಿ ನಗರದಲ್ಲಿರುವ ಕುಮಾರಸ್ವಾಮಿ ನಿವಾಸದ ಮುಂದೆ ಮಂಡ್ಯ(Mandya) ಜಿಲ್ಲೆಯ ಅಭಿಮಾನಿಗಳು ಜಮಾಯಿಸಿದ್ದು, ಮಂಡ್ಯದಿಂದ ಸ್ಪರ್ಧಿಸುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಜೆಡಿಎಸ್ ಕಾರ್ಯಕರ್ತರನ್ನ ಉದ್ದೇಶಿಸಿ ಮಾತಾಡುವಾಗ ಕುಮಾರಸ್ವಾಮಿ ಭಾವುಕರಾದರು.
ಕಾರ್ಯಕರ್ತರು ತಾಳ್ಮೆಯಿಂದ ಇರಬೇಕು. ನಿಮ್ಮ ಅಭಿಮಾನ, ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲು ಆಗಲ್ಲ. ಮಂಡ್ಯದಲ್ಲಿ ವಿಶೇಷವಾಗಿ ಪ್ರೀತಿ ವಿಶ್ವಾಸ ಕೊಟ್ಟಿದ್ದೀರಿ. ಅದನ್ನು ನಾವು ಭೂಮಿಯಲ್ಲಿ ಇರುವವರೆಗೂ ಮರೆಯಲು ಸಾದ್ಯವಿಲ್ಲ.ನನಗೆ 25 ಲಕ್ಷ ರೂ. ಬೆಲೆ ಇರುವ ವಾಲ್ ಹಾಕಿದ್ದಾರೆ. ನನಗೆ ಮೂರು ಬಾರಿ ಹೃದಯ ಶಸ್ತ್ರ ಚಿಕಿತ್ಸೆ ಆಗಿದೆ. ನಮ್ಮ ಪಕ್ಷದಲ್ಲಿ ದೊಡ್ಡ ನಾಯಕರು ಯಾರು ಇಲ್ಲ. ನಮ್ಮ ಪಕ್ಷದಲ್ಲಿ ಬೆಳೆದವರು ನಮ್ಮನ್ನು ಬೀದಿಯಲ್ಲಿ ನಿಲ್ಲಿಸಿ ಹೋಗಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್, ಚೆನ್ನೈನಿಂದ ಬೆಂಗಳೂರಿಗೆ ಬಂದಿಳಿದ ಕುಮಾರಸ್ವಾಮಿ ಹೇಳಿದ್ದೇನು?
ನಿಮ್ಮ ಆಸೆಗೆ ನಿರಾಸೆ ಮಾಡಲ್ಲ ಎಂದು ಈಗಾಗಲೇ ಮಂಡ್ಯದಲ್ಲಿ ಹೇಳಿದ್ದಾನೆ. ನಾನು ಹುಟ್ಟಿದ್ದು ಹಾಸನ ಜಿಲ್ಲೆ, ನನಗೆ ರಾಜಕೀಯವಾಗಿ ಜನ್ಮ ಕೊಟ್ಟಿದ್ದು,ರಾಮನಗರ ಮಂಡ್ಯ. ನಾಳೆ ಚನ್ನಪಟ್ಟಣ ಮುಖಂಡರನ್ನ ಕರೆಸಿ ಮತನಾಡುತ್ತೆನೆ. ನಾಳೆ ಯಾವುದೇ ಕಾರಣಕ್ಕೂ ನಿಮಗೆ ನಿರಾಶೆ ಮಾಡಲ್ಲ ಎಂದು ಭರವಸೆ ನೀಡಿದರು. ಈ ಮೂಲಕ ಮಂಡ್ಯದಿಂದ ಸ್ಪರ್ಧೆ ಮಾಡುವ ಬಗ್ಗೆ ಪರೋಕ್ಷ ಸುಳಿವು ಸಹ ನೀಡಿದರು.
ಇನ್ನು ಇದೇ ವೇಳೆ ಪುತ್ರ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ನಮ್ಮ ತಂದೆಯವರ ಮೇಲೆ ಮಂಡ್ಯ ಜನರಿಗೆ ವಿಶೇಷ ಅಭಿಮಾನ ಇದೆ. ನಾಳೆ ಚನ್ನಪಟ್ಟಣ ಕ್ಷೇತ್ರದ ಕಾರ್ಯಕರ್ತರ ಜೊತೆ ಮಾತನಾಡುತ್ತಾರೆ. ಮುಖಂಡರು, ಕಾರ್ಯಕರ್ತರ ಜೊತೆ ತಂದೆಯವರು ಮಾತನಾಡ್ತಾರೆ. ನಂತರ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ನಿಮಗೆ ಯಾವುದೇ ನಿರಾಸೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಒಂದು ಕಡೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಜಿಲ್ಲೆಯ ಕಾರ್ಯಕರ್ಯರು, ಮುಖಂಡರು ಒತ್ತಾಯಿಸುತ್ತಿದ್ದರೆ, ಮತ್ತೊಂದೆಡೆ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರವನ್ನು ಬಿಟ್ಟುಹೋಗದಂತೆ ಅಲ್ಲಿನ ಮುಖಂಡರುಗಳು ಆಗ್ರಹಿಸಿದ್ದಾರೆ. ಇನ್ನು ಎಚ್ಡಿಕೆ ಮಂಡ್ಯದಿಂದ ಸ್ಪರ್ಧಿಸುವುದು ಖಚಿತ ಎನ್ನುವ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿ ಕಾರಿಗೆ ಮುತ್ತಿಗೆ ಹಾಕಿದ್ದರು. ಈ ವೇಳೆ ಕುಮಾರಸ್ವಾಮಿ ಚನ್ನಪಟ್ಟ ಬಿಟ್ಟುಹೋಗದಂತೆ ಆಗ್ರಹಿಸಿದ್ದರು.
ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಇದೀಗ ಮಂಡ್ಯ ಲೋಕಸಭಾ ಚುನಾವಣೆ ಸ್ಪರ್ಧಿಸಲು ಮುಂದಾಗಿರುವುದರಿಂದ ತಮ್ಮ ಚನ್ನಪಟ್ಟಣ ವಿಧಾಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ಕರೆದಿದ್ದು, ಸಭೆಯಲ್ಲಿ ಪರಿಸ್ಥಿತಿಯನ್ನು ವಿವರಿಸಲಿದ್ದಾರೆ. ಒಂದು ಮಂಡ್ಯದಿಂದ ಗೆದ್ದರೆ ಚನ್ನಪಟ್ಟಣ ಉಪಚುನಾವಣೆಗೆ ಯಾರನ್ನು ಕಣಕ್ಕಿಳಿಸಬೇಕೆಂಬ ಚರ್ಚೆ ನಡೆಸಲಿದ್ದಾರೆ. ಮತ್ತೊಂದೆಡೆ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಅವರು ಸಹ ಹೇಗಾದರೂ ಮಾಡಿ ಕುಮಾರಸ್ವಾಮಿ ಅವರನ್ನು ಮಂಡ್ಯಕ್ಕೆ ಕಳುಹಿಸಿ ಇತ್ತ ಚನ್ನಪಟ್ಟಣದಲ್ಲಿ ನೆಲೆ ಕಂಡುಕೊಳ್ಳಬೇಕೆಂಬ ಪ್ಲ್ಯಾನ್ ಮಾಡಿದ್ದಾರೆ.
ಒಟ್ಟಿನಲ್ಲಿ ಕುಮಾರಸ್ವಾಮಿ ಅವರ ನಡೆಮ ಮಾತುಗಳನ್ನು ಗಮನಿಸಿದರೆ ಅವರು ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಬಹುತೇಕ ಪಕ್ಕಾ ಎನ್ನಿಸಿದೆ. ಆದ್ರೆ, ಕೊನೆ ಕ್ಷಣದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದರೂ ಅಚ್ಚರಿಪಡಬೇಕಿಲ್ಲ. ಇನ್ನು ಸುಮಲತಾ ಅಂಬರೀಶ್ ನಡೆ ಏನು ಎನ್ನುವುದೇ ಇನ್ನೂ ನಿಗೂಢವಾಗಿದ್ದು, ಜೆಡಿಎಸ್ ಅಭ್ಯರ್ಥಿ ಹೆಸರು ಪ್ರಕಟವಾದ ಬಳಿಕ ಸುಮಲತಾ ಅವರು ತಮ್ಮ ಮುಂದಿನ ನಡೆ ನಿರ್ಧರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಸಹ ಮಂಡ್ಯ ಲೋಕಸಭಾ ಚುನಾವಣೆ ರಂಗೇರಿದ್ದು,ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದಂತೂ ಸತ್ಯ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:07 pm, Sun, 24 March 24