ಕೆಎಸ್ ಈಶ್ವರಪ್ಪ ಡಮ್ಮಿ ಅಭ್ಯರ್ಥಿ ಎಂದ ಆಯನೂರು ಮಂಜುನಾಥ್, ಮಧು ಬಂಗಾರಪ್ಪ
ಪುತ್ರನಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಮತ್ತು ಬಿಜೆಪಿ ಪಕ್ಷವನ್ನು ಕುಟುಂಬ ರಾಜಕಾರಣದಿಂದ ಹೊರ ತರಬೇಕೆಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಇದರಿಂದ ಆಯನೂರು ಮಂಜುನಾಥ್ ಮತ್ತು ಸಚಿವ ಮಧು ಬಂಗಾರಪ್ಪ ಆಕ್ರೋಶಗೊಂಡಿದ್ದು, ಬಿಜೆಪಿ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಶಿವಮೊಗ್ಗ, ಮಾರ್ಚ್ 24: ಪುತ್ರನಿಗೆ ಹಾವೇರಿ ಟಿಕೆಟ್ ಕೈತಪ್ಪಿದ್ದಕ್ಕೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Ehwarappa) ಅವರು ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಸಿಡಿದೆದ್ದಿದ್ದು, ಪಕ್ಷವನ್ನು ಕುಟುಂಬದಿಂದ ಹೊರ ತರಬೇಕೆಂದು ಈಶ್ವರಪ್ಪ ಖುದ್ದು ಶಿವಮೊಗ್ಗದಲ್ಲಿ ಬಿಎಸ್ ಯಡಿಯೂರಪ್ಪ (BS Yediyurappa) ಪುತ್ರ ಬಿವೈ ರಾಘವೇಂದ್ರ (BY Raghavendra) ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಆದರೆ, ಈಶ್ವರಪ್ಪ ಬಿಜೆಪಿಯ ಡಮ್ಮಿ ಅಭ್ಯರ್ಥಿ. ಇದೆಲ್ಲ ಬಿಜೆಪಿಯ ತಂತ್ರಗಾರಿಕೆಯಾಗಿದೆ ಎಂದು ಆಯನೂರು ಮಂಜುನಾಥ್ (Ayanur Manjunath) ಆರೋಪಿಸಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆಲ್ಲುವ ಎಲ್ಲ ವಾತಾವರಣವಿದೆ ಎಂದರು.
ಬಂಗಾರಪ್ಪ ಪತ್ನಿ ಕಣಕ್ಕೆ ಇಳಿಯುತ್ತಿದ್ದಂತೆ, ಈಶ್ವರಪ್ಪ ಟ್ರಂಪ್ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಈಶ್ವರಪ್ಪ ನಡುವೆ ಇದೊಂದು ಅಂತರಿಕ ಒಪ್ಪಂದವಾಗಿದೆ. ಷಡ್ಯಂತ್ರದ ಒಂದು ಭಾಗವಾಗಿ ಈಶ್ವರಪ್ಪ ಅವರನ್ನು ಬಿಜೆಪಿಯು ಕಣಕ್ಕೆ ಇಳಿಸಿದೆ. ಕೆಎಸ್ ಈಶ್ವರಪ್ಪ ಅವರು ಹಿರಿಯ ನಾಯಕರು, ಈಗ ಇಂತಹ ಕೆಳಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಈಶ್ವರಪ್ಪ ಅವರಿಗೆ ರಾಜ್ಯಪಾಲ ಮತ್ತು ಅವರ ಮಗನಿಗೆ ಎಂಎಲ್ಸಿ ಸ್ಥಾನದ ಆಫರ್ ನೀಡಿದ್ದಾರೆ. ಈಶ್ವರಪ್ಪ ಅವರ ವಿರುದ್ಧ 40 ಪರ್ಸೆಂಟ್ ಅಸ್ತ್ರ ಬಳಕೆ ಮಾಡಲಾಗುತ್ತಿದೆ. ಬಿಜಪಿ ಈಶ್ವರಪ್ಪ ಮೇಲೆ ಒತ್ತಡ ಹಾಕಿ ಚುನಾವಣೆಗೆ ನಿಲ್ಲಿಸಿದೆ ಎಂದರು.
ಮಗನಿಗೆ ಟಿಕೆಟ್ ಕೊಡಿಸುವ ಗಂಡಸ್ತನ ಇದ್ರೆ ಮಾತಾಡಲಿ: ಮಧು ಬಂಗಾರಪ್ಪ
ಬಿಎಸ್ ಯಡಿಯೂರಪ್ಪ ಮತ್ತು ಮಕ್ಕಳು ಕೆ.ಎಸ್.ಈಶ್ವರಪ್ಪ ಅವರನ್ನು ಡಮ್ಮಿ ಮಾಡಿ ಕೂರಿಸಿದ್ದಾರೆ. ಕೆಎಸ್ ಈಶ್ವರಪ್ಪ ಮಗನಿಗೆ ಟಿಕೆಟ್ ಕೊಡಿಸುವ ಗಂಡಸ್ತನ ಇದ್ದರೇ ಮಾತ್ರ ಯಡಿಯೂರಪ್ಪ ಮತ್ತು ಮಕ್ಕಳು ಮಾತಾಡಲಿ. ಕೆ.ಎಸ್.ಈಶ್ವರಪ್ಪಗೆ ರಾಜಕೀಯ ಸುಪಾರಿ ಕೊಟ್ಟಿದ್ದಾರೆ. ಜಾತಿ ರಾಜಕಾರಣ ಮಾಡಿ ಇವರು ಹೊಲಸು ಮಾಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಯಡಿಯೂರಪ್ಪನವರ ಕುಟುಂಬ ರಾಜಕಾರಣದಿಂದ ರೋಸಿ ಹೋರಾಟಕ್ಕಿಳಿದಿದ್ದೇನೆ: ಕೆ ಎಸ್ ಈಶ್ವರಪ್ಪ
ನಮ್ಮ ಅಕ್ಕ (ಗೀತಾ ಶಿವರಾಜಕುಮಾರ್) ಒಳ್ಳೆಯ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ತಂಟೆಗೆ ಬಂದರೆ ಮತದಾರರು ಉತ್ತರ ಕೊಡುತ್ತಾರೆ. ಈಶ್ವರಪ್ಪನವರೇ ಗೌರವದಿಂದ ಇರಿ, ಗೌರವ ಉಳಿಸಿಕೊಳ್ಳಿ ಎಂದು ವಾಗ್ದಾಳಿ ಮಾಡಿದರು.
ಕಾಂಗ್ರೆಸ್ ಬೇರೆಯರ ಮನೆ ಒಡೆದು ಮತ ಕೇಳುತ್ತಿಲ್ಲ. ನಮ್ಮ ಗ್ಯಾರಂಟಿ ಯೋಜನೆ ಮೇಲೆ ಮತ ಕೇಳುತ್ತಿದ್ದೇವೆ. ಗ್ಯಾರೆಂಟಿ ಯೋಜನೆ ಕೈ ಹಿಡಿಯುತ್ತವೆ. ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ. ಬಿವೈ ರಾಘವೇಂದ್ರ ಅವರ ತಲೆ ಹಿಂಬ್ಯಾಲೆನ್ಸ್ ಆಗಿದೆ ಅನಿಸುತ್ತೆ. ಯಾವ ಕುಟುಂಬದಲ್ಲಿ ಮುಖ್ಯಮಂತ್ರಿಯಾಗಿದ್ದರೋ, ಮಂತ್ರಿ ಆಗಿದ್ದರೋ, ಶಾಸಕರಾಗಿದ್ದಾರೆ ಅದಕ್ಕೆ ಕುಟುಂಬ ರಾಜಕಾರಣ ಎಂದು ಕರೆಯುತ್ತಾರೆ. ಇಂತಹ ಕುಟುಂಬ ರಾಜಕಾರಣಕ್ಕೆ ಅರ್ಥ ಪೂರ್ಣ ಉದಾಹರಣೆ ಬಿಎಸ್ ಯಡಿಯೂರಪ್ಪ ಅವರ ಕುಟುಂಬ. ಈ ರಾಜ್ಯದಲ್ಲಿ ಭ್ರಷ್ಟಾಚಾರ ಆರಂಭವಾಗಿದ್ದು ಯಡಿಯೂರಪ್ಪ ಕುಟುಂಬದಿಂದ ಎಂದು ಆರೋಪ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ