ಡಿಕೆ ಶಿವಕುಮಾರ್ನನ್ನು ತಿಹಾರ್ ಜೈಲಿಗೆ ಕಳಿಸಿ ಎಂದು ಅಮಿತ್ ಶಾಗೆ ಇವರೇ ಮನವಿ ಮಾಡಿದ್ದಾರೆ: ಹೆಚ್ಡಿಕೆಗೆ ಡಿಕೆ ಸುರೇಶ್ ತಿರುಗೇಟು
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK SHivakumar) ಮತ್ತೆ ತಿಹಾರ್ ಜೈಲಿಗೆ ಹೋಗಲಿದ್ದಾರೆ ಎನ್ನುವ ಹೆಚ್ಡಿ ಕುಮಾರಸ್ವಾಮಿ ಹೇಳಿಕೆಗೆ ಸಂಸದ ಡಿಕೆ ಸುರೇಶ್ ತಿರುಗೇಟು ನೀಡಿದ್ದಾರೆ.
ಬೆಂಗಳೂರು, (ಅಕ್ಟೋಬರ್ 09): ಈ ಕಾಂಗ್ರೆಸ್ ಸರ್ಕಾರ ಪತನವಾಗಲಿದ್ದು, 2024ರಲ್ಲಿ ಮತ್ತೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಹೆಚ್ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮತ್ತೆ ತಿಹಾರ್ ಜೈಲಿಗೆ ಹೋಗಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಇದೀಗ ಇದಕ್ಕೆ ಡಿಕೆ ಶಿವಕುಮಾರ್ ಅವರ ಸಹೋದರ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದು, ಡಿಕೆ ಶಿವಕುಮಾರ್ ಅವರನ್ನು ತಿಹಾರ್ ಜೈಲಿಗೆ ಕಳಿಸಿ ಎಂದು ಅಮಿತ್ ಶಾಗೆ ಇವರೇ ಮನವಿ ಮಾಡಿ ಬಂದಿರಬೇಕು ಎಂದು ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಅಕ್ಟೋಬರ್ 09) ಸುದ್ದಿಗಾರೊಂದಿಗೆ ಮಾತನಾಡಿದ ಡಿಕೆ ಸುರೇಶ್, ಡಿಕೆ ಶಿವಕುಮಾರ್ ಅವರನ್ನ ತಿಹಾರ್ ಜೈಲಿಗೆ ಕಳಿಸಿ ಎಂದು ಬಹುಶಃ ಅಮಿತ್ ಶಾಗೆ ಇವರೇ (ಕುಮಾರಸ್ವಾಮಿ) ರಿಕ್ವೆಸ್ಟ್ ಮಾಡಿಕೊಂಡು ಬಂದಿರಬೇಕು. ದೆಹಲಿಗೆ ಹೋಗಿದ್ದರಲ್ಲ ಆಗ ಅಮಿತ್ ಶಾಗೆ ಮನವಿ ಮಾಡಿದ್ದರು ಅನ್ಸುತ್ತೆ. ಇವರ ಗೊಡ್ಡು ಬೆದರಿಕೆಗಳಿಗೆ ಹೆದರುವ ಜಾಯಮಾನ ನಮ್ಮದಲ್ಲ ಎಂದು ತಿರುಗೇಟು ನೀಡಿದರು.
ಇವರ ದಾಖಲೆ ಗಳನ್ನು ಬಿಚ್ಚಿಡುವ ಸಮಯ ಬಂದರೆ ನಾವೂ ಸಿದ್ದ. ಇವರ ಕನಸು ನನಸಾಗುವುದಿಲ್ಲ, ಕನಸು ಕನಸಾಗಿಯೇ ಉಳಿಯುತ್ತದೆ. ಜೆಡಿಎಸ್ ನಾಯಕರು ಎಲ್ಲೋ ಒಂದು ಕಡೆ ಮಾನಸಿಕವಾಗಿ ಕುಗ್ಗಿದ್ದಾರೆ. ಅವರ ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕಿದೆ. ಅವರ ಆಲೋಚನೆಗಳೆಲ್ಲ ಒಂದು ಕಡೆ ಕೇಂದ್ರಿಕೃತ ಆದಂತೆ ಕಾಣುತ್ತಿದೆ. ಕಾರ್ಯಕರ್ತರು ಇವರ ನಡೆ ನುಡಿ ನೋಡಿ ಅವರ ದಾರಿ ಅವರೇ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಕುಮಾರಸ್ವಾಮಿ ಹೇಳುವುದು ಸುಳ್ಳಿನ ಮಹಾ ಭಾಗ, ಸುಳ್ಳಿನಲ್ಲಿ ಕುಮಾರಸ್ವಾಮಿ ಎಕ್ಸಪರ್ಟ್. ಇವರು ಯಾವ ಯಾವ ಸಂದರ್ಭದಲ್ಲಿ ಯಾರ ಜೊತೆಗೆ ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದು ಗೊತ್ತಿದೆ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವವರು ಅವರು ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಇದೇ ವೇಳೆ ಮೈತ್ರಿ ಧರ್ಮ ಪಾಲನೆ ಮಾಡಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯದ ಜನರೇ ಅವರನ್ನು ತಿರಸ್ಕಾರ ಮಾಡಿದ್ರು, ನಾವಲ್ಲ ತಿರಸ್ಕಾರ ಮಾಡಿದ್ದು.ಮಂಡ್ಯದಲ್ಲಿ ನಮ್ಮ ಕಾರ್ಯಕರ್ತರು ಏನು ಸಹಕಾರ ಕೊಡಬೇಕೋ ಕೊಟ್ಟಿದ್ದರು. ಮಂಡ್ಯದ ಜನರನ್ನೇ ಯಾಕೆ ಸೋಲಿಸಿದರು ಎಂದು ಕೇಳಬೇಕು. ಈಗ ಬಂದು ನಮ್ಮನ್ನು ಕೇಳಿದರೆ ಹೇಗೆ? ಎಂದು ತಿವಿದರು.
ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ