ಮೈಸೂರು ಅ.16: ಬೆಂಗಳೂರಿನಲ್ಲಿ ನಡೆದ ಐಟಿ (IT) ದಾಳಿ ವೇಳೆ ಕೋಟ್ಯಾಂತರ ರೂಪಾಯಿ ಪತ್ತೆಯಾಗಿತ್ತು. ಈ ವಿಚಾರವಾಗಿ ವಿಪಕ್ಷಗಳು ಆಡಳಿತಾರೂಢ ಕಾಂಗ್ರೆಸ್ (Congress) ವಿರುದ್ಧ ಚಾಟಿ ಬೀಸುತ್ತಿವೆ. ದಾಳಿಯಲ್ಲಿ ಪತ್ತೆಯಾದ ಹಣದ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯಿಸಿ ರಾಜ್ಯದಲ್ಲಿ ವೈಎಸ್ಟಿ (ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್) ಆಯ್ತು, ಈಗ ಎಸ್ಎಸ್ಟಿ (ಡಿಕೆ ಸುರೇಶ್, ಡಿಕೆ ಶಿವಕುಮಾರ್ ಟ್ಯಾಕ್ಸ್) ಕಲೆಕ್ಷನ್ ಆರಂಭವಾಗಿದೆ. ಐಟಿ ದಾಳಿ ವೇಳೆ ಸಿಕ್ಕಿರುವ ಹಣ ಎಸ್ಎಸ್ಟಿ ಟ್ಯಾಕ್ಸ್ಗೆ ಸೇರಿದ್ದು ಎಂದು ಆರೋಪಿಸಿದರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಅಂಬಿಕಾಪತಿ ನಿವಾಸದಲ್ಲಿ ಸಿಕ್ಕಿರುವ ಹಣ ಎಸ್ಎಸ್ಟಿ ಕಲೆಕ್ಷನ್. ಸಂತೋಷ್ ಮನೆಯಲ್ಲಿ ಸಿಕ್ಕಿದ್ದು ವೈಎಸ್ಟಿ ಕಲೆಕ್ಷನ್. ಮುಖ್ಯಮಂತ್ರಿಗಳು ಈ ಕುರಿತು ತನಿಖೆ ಮಾಡಿಸಿ ಪ್ರಾಮಾಣಿಕತೆ ತೋರಬೇಕು. ಭ್ರಷ್ಟಾಚಾರ ಮಾಡಿ ಪ್ರಾರ್ಥಿಸಿದರೆ ದೇವರ ಕ್ಷಮಿಸಲ್ಲ. ಲೂಟಿ ಮಾಡುವವರು ತಿಹಾರ್ ಜೈಲಿಗೆ ಹೋಗುವುದು ತಪ್ಪುವುದಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ಮಾಡಲು ಇಲಾಖೆಗಳು ಪೈಪೋಟಿಗೆ ಬಿದ್ದಿವೆ. ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವುದಕ್ಕೆ ಹಣ ಪತ್ತೆಗಿಂತ ಬೇರೆ ಸಾಕ್ಷಿಬೇಕೆ ? ಎಂದು ವಾಗ್ದಾಳಿ ಮಾಡಿದರು.
ಮುಖ್ಯಮಂತ್ರಿಗಳ ಪಟಾಲಂಗಳು ಎಸ್ಎಸ್ಟಿ, ವೈಎಸ್ಟಿ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ. ವರ್ಗಾವಣೆ ದಂಧೆ ಮಾಡಿ ಹಣ ಲೂಟಿ ಮಾಡುತ್ತಿದ್ದಾರೆ. ಬಿಜೆಪಿ ವಿರುದ್ಧ 40% ಸರ್ಕಾರ ಅಂತ ಜಾಗಟೆ ಬಾರಿಸುತ್ತಿದ್ದರು. ಈ ಇವರು ಏನ್ ಮಾಡುತ್ತಿದ್ದಾರೆ ? ಕಾಂಗ್ರೆಸ್ ಹೈಕಮಾಂಡ್ ಹಣ ಕೇಳದಿದ್ದರೂ, ಇಷ್ಟೊಂದು ಹಣ ಸಿಕ್ಕಿದೆ. ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಕೇಳಿದ್ದರೇ ಇನ್ನೆಷ್ಟು ಹಣ ಸಿಗುತ್ತಿತ್ತು? ಭ್ರಷ್ಟಾಚಾರ ಮಾಡಲು ಇಲಾಖೆಗಳಲ್ಲಿ ಪೈಪೋಟಿ ಇದೆ. ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ಇದೆ. ಜನರ ಕಣ್ಣಲ್ಲಿ ರಕ್ತ ಬರಿಸಿ ದೇವರ ಬಳಿಗೆ ಬಂದರೆ ತಾಯಿ ಕ್ಷಮಿಸುವುದಿಲ್ಲ. ಈಗ ಸಿಕ್ಕಿರುವುದು ಯಕಶ್ಚಿತ್ ಹಣ ಅಷ್ಟೇ. ಇನ್ನೂ ಸಾಕಷ್ಟು ಲೂಟಿ ಆಗಿದೆ. ಸಿಎಂ ಸಭೆಯಲ್ಲಿ ಕೆಂಪಣ್ಣ ಅವರೇ ಭ್ರಷ್ಟಾಚಾರದ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಸ್ಪೋಟಕ ಅಂಶ ಬಹಿರಂಗಪಡಿಸಿದರು.
ಐಟಿ ರೇಡ್ ವಿಚಾರದಲ್ಲಿ ಕಾಂತರಾಜು ನೆಪಮಾತ್ರ ಅಷ್ಟೇ. ಐಟಿ ದಾಳಿಯಲ್ಲಿ ಸಿಕ್ಕಿರುವುದು ಜನರ ತೆರಿಗೆ ಹಣ, ಯಾವುದೇ ಗುತ್ತಿಗೆದಾರನ ಹಣವಲ್ಲ. ವರ್ಗಾವಣೆಯಲ್ಲಿ ದಂದೆ ಮಾಡಿ, ಹಣ ಲೂಟಿ ಮಾಡಿದ್ದಾರೆ. ಹಿಂದೆ ನೀವು ಪಾಪದ ಕೆಲಸ ಏನೇ ಮಾಡಿದ್ದರು, ಈಗಾಲಾದರೂ ಒಳ್ಳೆ ಕೆಲಸ ಮಾಡಿ. ಜನ ಅಧಿಕಾರ ಕೊಟ್ಟಿರೋದು ಅಭಿವೃದ್ಧಿ ಮಾಡಿ ಎಂದೇ ಹೊರತು ಲೂಟಿ ಮಾಡುವುದಕ್ಕೆ ಅಲ್ಲ. ನನ್ನ ಕಾಲದ ವರ್ಗಾವಣೆಗೂ ಇಂದಿನ ವರ್ಗಾವಣೆಗೂ ವ್ಯತ್ಯಾಸ ಇದೆ ಎಂದರು.
ಇದನ್ನೂ ಓದಿ: ಪಂಚರಾಜ್ಯ ಚುನಾವಣೆಗಾಗಿ ಕರ್ನಾಟಕ ಕಾಂಗ್ರೆಸ್ಗೆ 1000 ಕೋಟಿ ರೂ. ಟಾರ್ಗೆಟ್: ಯಾವ ರಾಜ್ಯಕ್ಕೆ ಎಷ್ಟು? ಬಿಜೆಪಿ ಟ್ವೀಟ್
ಐಟಿ ದಾಳಿ ಬಗ್ಗೆ ಮಾತನಾಡಲು ಕುಮಾರಸ್ವಾಮಿ ಏನು ಐಟಿ ಪ್ರತಿನಿಧಿಯೇ? ಎಂಬ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಈ ಬಗ್ಗೆ ಮಾತನಾಡಿದರೆ ಅವರೇನು ಇಡಿ, ಐಟಿ ಅಧಿಕಾರಿಗಳೇ ಎನ್ನುತ್ತಾರೆ. ತನಿಖೆ ಮಾಡಿ ಎಂದು ನನ್ನ ಹಳೆ ಸ್ನೇಹಿತರೊಬ್ಬರು ಹೇಳಿದ್ದಾರೆ. ಈ ದುರಹಂಕಾರದ ಮಾತುಗಳನ್ನು ಬಿಡಿ. ನಾವು ಏನೇ ತಪ್ಪು ಮಾಡಿದ್ದರು ದೇವರಿಗೆ ಉತ್ತರ ಕೊಡಬೇಕು. ತಿಹಾರ್ ಜೈಲಿಗೆ ಹೋಗುವ ವಿಚಾರದ ಬಗ್ಗೆ ನಾನು ಅಸೂಯಿಂದ ಹೇಳಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕೃಷಿ ವಲಯ ಸೇರಿದಂತೆ ಜನರು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಬರಗಾಲದ ಬಗ್ಗೆ ಕೃಷಿ ಸಚಿವರು, ಕಂದಾಯ ಸಚಿವರ ಹೇಳೀಕೆ ಗಮನಿಸಿದ್ದೇನೆ. ಬರದ ಜೊತೆಗೆ ವಿದ್ಯುತ್ ಅಭಾವ ಕೂಡ ಎದುರಾಗಿದೆ. ವಿದ್ಯುತ್ ಸಮಸ್ಯೆ ಬಗ್ಗೆ ಈಗಾಗಲೇ ನಾನು ಹೇಳಿದ್ದೆ, ಮುಂದಿನ ಎರಡು ತಿಂಗಳ ಬಳಿಕ ರಾಜ್ಯದಲ್ಲಿ ಇನ್ನು ದುಸ್ತರ ಪರಿಸ್ಥಿತಿ ಬರಲಿದೆ. ರೈತರ, ಜನರ ಬದುಕಿನ ಬಗ್ಗೆ ಸರ್ಕಾರಕ್ಕೆ ಚಿಂತೆ ಇಲ್ಲ. ಬರೀ ಗ್ಯಾರೆಂಟಿಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಬಂದು ಹಲವು ವರ್ಷಗಳಾದರೂ ಜನರ ಬದುಕಿಗೆ ಅನುಕೂಲ ಆಗುವ ಯೋಜನೆ ಇಲ್ಲ. ಕಾಂಗ್ರೆಸ್ ಶಾಸಕರು ನಿತ್ಯ ಅವರ ಕ್ಷೇತ್ರಗಳಿಗೆ ಹೋಗಲು ಆಗದ ಸ್ಥಿತಿ ಇದೆ ಎನ್ನುತ್ತಾರೆ. ನೀವು ನಿಮ್ಮ ಬೆನ್ನು ತಟ್ಟಿಕೊಂಡು ಓಡಾಡುತ್ತಿದ್ದೀರಿ. ಜನರೇ ತಿರುಗಿ ಬೀಳುವ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂದು ಭವಿಷ್ಯ ನುಡಿದರು.
ಒಂದೆಡೆ ಕಾವೇರಿ ಹರಿಯುತ್ತಿದೆ, ಮತ್ತೊಂದೆಡೆ ಜನರ ತೆರಿಗೆ ಹಣ ಪೋಲಾಗುತ್ತಿದೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕಿಂತ ಹಿಂದೆ ಇದ್ದ ಸರ್ಕಾರವೇ ಉತ್ತಮವಾಗಿತ್ತು ಎಂದು ಜನರು ಹೇಳುತ್ತಿದ್ದಾರೆ. ನಮಗೆ ಅಧಿಕಾರ ಸಿಕ್ಕಿಲ್ಲ ಎಂಬ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುತ್ತಿಲ್ಲ ಅದರ ಅಗತ್ಯವೂ ನಮಗಿಲ್ಲ. ಪ್ರಧಾನಿ ಹುದ್ದೆಯನ್ನೇ ಸುಲಭವಾಗಿ ಬಿಟ್ಟು ಬಂದಿದ್ದೇವೆ, ಈಗ ಈ ಅಧಿಕಾರ ಸಿಗದ ಬಗ್ಗೆ ಬೇಸರ ಮಾಡಿಕೊಳ್ಳುತ್ತೇವಾ? ನಮಗೆ ಅಧಿಕಾರ ಸಿಕ್ಕಿದಾಗ ಒಂದಿಷ್ಟು ಒಳ್ಳೆಯ ಕೆಲಸ ಮಾಡಿದ್ದೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ