ಬೆಂಗಳೂರು, ಅಕ್ಟೋಬರ್ 09: ಡಿಸಿಎಂ ಡಿ.ಕೆ.ಶಿವಕುಮಾರ್ (HD Kumaraswamy) ಮತ್ತೆ ಜೈಲಿಗೆ ಹೋಗುತ್ತಾರೆ ಎಂಬ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಇದೀಗ ಈ ಕುರಿತಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಡಿಕೆ ಶಿವಕುಮಾರ್ರನ್ನು ಜೈಲಿಗೆ ಹಾಕಿಸುವುದಕ್ಕೆ ಕುಮಾರಸ್ವಾಮಿ ನ್ಯಾಯಾಧೀಶರಲ್ಲ. ಒಂದು ವೇಳೆ ಅವರು ನ್ಯಾಯಾಧೀಶರಾಗಿದ್ದರೆ ಒಪ್ಪಿಕೊಳ್ಳೋಣ ಎಂದು ವಾಗ್ದಾಳಿ ಮಾಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಹೈಕಮಾಂಡ್ ಹೇಳಿದರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವೆ. ನಾನೇನು ಸಚಿವ ಸ್ಥಾನಕ್ಕೆ ಅಂಟಿಕೊಂಡು ನಿಂತಿಲ್ಲ. ಯಾರು ಏನೇ ಹೇಳಿದರೂ ತೀರ್ಮಾನ ಮಾಡುವುದು ಹೈಕಮಾಂಡ್. ಕ್ಯಾಬಿನೆಟ್ ಪುನರ್ ರಚನೆ ಬಗ್ಗೆ ತೀರ್ಮಾನ ಮಾಡುವವರು ಅವರೇ. ನಾನು ಕೂಡ ಹೈಕಮಾಂಡ್ ಹೇಳಿದಂತೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೈತ್ರಿ ಸರ್ಕಾರ ಪತನವಾಗಲು ಡಿಕೆ ಶಿವಕುಮಾರ್ ಕಾರಣ ಎಂಬ ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ತಿರುಗೇಟು
ಮೈತ್ರಿ ಆದರೂ ನಮ್ಮದು ನಾವು ನೋಡಿಕೊಳ್ಳುತ್ತೇವೆ. ಹಾಸನದಲ್ಲಿ ಯಾವ ಪಾರ್ಟಿ ನಿಂತರೂ ಒಕ್ಕಲಿಗರೇ ನಿಲ್ಲುವುದು. ಅದರಲ್ಲಿ ಯಾವ ಕಾರ್ಯತಂತ್ರವೂ ಇಲ್ಲ ಎಂದಿದ್ದಾರೆ.
ಸಹಕಾರಿ ಸಂಘಗಳಲ್ಲಿ ಮಿಸ್ ಯೂಸ್ ವಿಚಾರವಾಗಿ ಮಾತನಾಡಿದ ಅವರು, ಸಹಕಾರಿ ಸಂಸ್ಥೆಗಳಲ್ಲಿ ಒಳ್ಳೆಯವೂ ಇವೆ. ಕೆಲವು ಕೆಟ್ಟವೂ ಇವೆ ಇಲ್ಲ ಅನ್ನಲ್ಲ. ಆದರೆ ಸಂಸ್ಥೆಗಳನ್ನ ಉತ್ತಮ ಪಡಿಸುವ ಕೆಲಸ ಮಾಡುತ್ತೇವೆ. ಮಿಸ್ ಯೂಸ್ಗೆ ಸಂಬಂಧಿಸಿದಂತೆ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ.
ಸಮಿತಿಗಳು ವರದಿಯನ್ನ ಕೊಡಲಿವೆ. ರಿಪೋರ್ಟ್ ಬಂದ ನಂತರ ಕ್ರಮ ಜರುಗಿಸುತ್ತೇವೆ. ಡಿಜಿಟಲ್ ಮಾಡುವುದರಿಂದ ಪಾರದರ್ಶಕತೆ ತರಬಹದು. ಮಿಸ್ ಯೂಸ್ ತಪ್ಪಿಸಬಹುದು. ಹಾಗಾಗಿ ಕೇಂದ್ರ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದೆ. ಡಿಜಿಟಲ್ ವ್ಯವಸ್ಥೆಯನ್ನ ತರುತ್ತಿದೆ ಎಂದು ತಿಳಿಸಿದ್ದಾರೆ.
ಈ ಕುರಿತಾಗಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದು, ಹೆಚ್ಡಿ ಕುಮಾರಸ್ವಾಮಿ ಏನು ಹೇಳಿದ್ದಾರೋ ಗೊತ್ತಿಲ್ಲ, ಅವರು ದೊಡ್ಡವರು. ಅವರ ನುಡಿಮುತ್ತುಗಳನ್ನು ನೋಡಿ ಉತ್ತರ ಕೊಡುತ್ತೇನೆ. ಮತ್ತೆ ಜೈಲಿಗೆ ಹೋಗುತ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಪ್ಲ್ಯಾನ್ ಏನಿದೆ ಎಂದು ಹೇಳುತ್ತಿದ್ದಾರೆ. ಏನೆಲ್ಲ ಮಾಡಲು ಸಾಧ್ಯ ಎಲ್ಲವನ್ನೂ ಅವರು ಹೇಳುತ್ತಿದ್ದಾರೆ. ನನ್ನ ತಂಗಿ, ನನ್ನ ತಮ್ಮ, ಹೆಂಡತಿ ಮೇಲೆ ಕೇಸ್ ಹಾಕಿದ್ದರು ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:44 pm, Mon, 9 October 23