ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ: ಸಂಕ್ರಾಂತಿಗೆ ಸಂ’ಕ್ರಾಂತಿ’ಆಗುತ್ತಾ?

|

Updated on: Nov 28, 2024 | 10:23 PM

ರಾಜ್ಯ ಬಿಜೆಪಿ ಅಂತರ್ಯುದ್ಧ ಮತ್ತಷ್ಟು ಉಲ್ಬಣಗೊಂಡಿದೆ. ಪರಿಸ್ಥಿತಿ ಬಿಜೆಪಿ ರಾಜ್ಯ ನಾಯಕರ ಕೈ ಮೀರಿ ಹೋದಂತಾಗಿದ್ದು, ಹಿರಿಯ ನಾಯಕರು ಬಹಿರಂಗ ಅಸಮಾಧಾನ ಹೊರಹಾಕುವ ಹಂತಕ್ಕೆ ಹೋಗಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಹೈಕಮಾಂಡ್​, ಬಣ ಬಡಿದಾಟ ನಿಯಂತ್ರಿಸಲು ಹೈಕಮಾಂಡ್​ ಮುಂದಾಗಿದೆ.

ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ: ಸಂಕ್ರಾಂತಿಗೆ ಸಂಕ್ರಾಂತಿಆಗುತ್ತಾ?
ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ
Follow us on

ಬೆಂಗಳೂರು, (ನವೆಂಬರ್ 28): ವಿಧಾನಮಂಡಲ ಅಧಿವೇಶನದ ವೇಳೆ ಒಟ್ಟಾಗಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ರೂಪಿಸಬೇಕಿದ್ದ ವಿಪಕ್ಷದಲ್ಲಿ ಅಂತರ್ಯುದ್ಧ ಜೋರಾಗಿದೆ. ಕಳೆದ ಬೆಳಗಾವಿ ಅಧಿವೇಶನದಲ್ಲಿ ಹಳ್ಳ ಹಿಡಿದಿದ್ದ ಬಿಜೆಪಿ ಒಗ್ಗಟ್ಟು ಈ ಬಾರಿ ಕೂಡಾ ಡೋಲಾಯಮಾನವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ವಕ್ಫ್ ಆಸ್ತಿ ವಿಚಾರವಾಗಿ ಯತ್ನಾಳ್ ಹಾಗೂ ವಿಜಯೇಂದ್ರ ಬಣ ಬಡಿದಾಟ ಜೋರಾಗಿದ್ದು, ಇದಕ್ಕೆ ಕಡಿವಾಣ ಹಾಕಲೇಬೇಕೆಂದು ಹೈಕಮಾಂಡ್ ತೀರ್ಮಾನಿಸಿದ್ದು, ಬಣ ಯತ್ನಾಳ್, ವಿಜಯೇಂದ್ರ ಬಣ ನಡುವಿನ ಆಂತಕರಿ ಕಚ್ಚಾಟಕ್ಕೆ ಅಂತವಾಡಲು ಹೈಕಮಾಂಡ್ ಮುಂದಾಗಿದೆ.

ರಾಜ್ಯ ಬಿಜೆಪಿ ವಿಶೇಷ ಕೋರ್ ಕಮಿಟಿ ಸಭೆ

ವಕ್ಫ್ ಆಸ್ತಿ ವಿಚಾರವಾಗಿ ಈಗಾಗಲೇ ಒಂದು ಹಂತದ ಪ್ರವಾಸವನ್ನು ಶಾಸಕ ಯತ್ನಾಳ್ ನೇತೃತ್ವದ ಪ್ರತ್ಯೇಕ ಮಿತ್ರಕೂಟ ಮುಗಿಸುವ ಹಂತದಲ್ಲಿದ್ದರೆ, ರಾಜ್ಯ ಬಿಜೆಪಿಯ ಅಧಿಕೃತ ತಂಡ ಇನ್ನಷ್ಟೇ ಪ್ರವಾಸ ಆರಂಭಿಸಬೇಕಿದೆ. ಈ ಮಧ್ಯೆ ರಾಜ್ಯಾಧ್ಯಕ್ಷ ವಿಜಯೇಂದ್ರ ಆಪ್ತ ಬಳಗ ಜನವರಿ-ಫೆಬ್ರವರಿಯಲ್ಲಿ ದಾವಣಗೆರೆಯಲ್ಲಿ ಸಮಾವೇಶ ಹಮ್ಮಿಕೊಳ್ಳುವ ಚಿಂತನೆಯಲ್ಲಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಡಿಸೆಂಬರ್ ಮೊದಲ ವಾರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ವಿಶೇಷ ಕೋರ್ ಕಮಿಟಿ ಸಭೆ ನಡೆಯಲಿದೆ.

ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ವಂಶವಾದ, ಭ್ರಷ್ಟಾಚಾರ ನಡೆಯೋದಿಲ್ಲ, ಅಪ್ಪನ ಸ್ಥಾನಕ್ಕೆ ಮಗ ಬರುವಂತಿಲ್ಲ: ಯತ್ನಾಳ್

ಮಹಾರಾಷ್ಟ್ರ ಚುನಾವಣೆ ಮುಕ್ತಾಯವಾದ ಬಳಿಕ ರಾಜ್ಯದ ಕಡೆ ಬಿಜೆಪಿ ಹೈಕಮಾಂಡ್ ಗಮನ‌ ಹರಿಸಿದಂತಿದ್ದು, ಡಿಸೆಂಬರ್ 2 ಮತ್ತು 3 ರಂದು ಎರಡು ದಿನಗಳ ಕಾಲ ರಾಜ್ಯ ಕೋರ್ ಕಮಿಟಿ ಸಭೆ ನಡೆಯಲಿದೆ. ರಾಜ್ಯಕ್ಕೆ ಬರಲಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ರಾಜ್ಯದ ಬೆಳವಣಿಗೆ ಬಗ್ಗೆ ಹೈಕಮಾಂಡ್ ಗೆ ವರದಿ ಸಲ್ಲಿಸಲಿದ್ದಾರೆ. ಬಳಿಕ ದೆಹಲಿಯಲ್ಲಿ ನಡೆಯಲಿರುವ ಬಿಜೆಪಿ ಉನ್ನತ ಮಟ್ಟದ ಸಭೆಯಲ್ಲಿ ರಾಜ್ಯ ಬಿಜೆಪಿಯ ವರದಿ ಪ್ರಸ್ತಾಪವಾಗಲಿದ್ದು. ಇದರ ಆಧಾರದ ಮೇಲೆ ಹೈಕಮಾಂಡ್ ನಾಯಕರು ಯಾರಿಗೆ? ಹೇಗೆ ಬಿಸಿ ಮುಟ್ಟಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಬಿಜೆಪಿಯ ಉನ್ನತ ಮಟ್ಟದ ಸಭೆ

ಹೌದು…. ಮುಂದಿನ ವಾರ ದೆಹಲಿಯಲ್ಲಿ ಬಿಜೆಪಿಯ ಉನ್ನತ ಮಟ್ಟದ ಸಭೆ ನಡೆಯಲಿದೆ. ಬಿಜೆಪಿ ಭಿ‌ನ್ನ ನಾಯಕರ ವಿಚಾರವಾಗಿ ಹೈಕಮಾಂಡ್ ನಾಯಕರು ಸಭೆ ನಡೆಸಿ ಮಹತ್ವದ ತೀರ್ಮಾನಗೊಳ್ಳಲಿದ್ದಾರೆ ಎಂದು ಸ್ವತಃ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಈ ಸಭೆಯಲ್ಲಿ ರಾಜ್ಯ ಬಿಜೆಪಿಯೊಳಗಿನ ಗುದ್ದಾಟ, ಅಸಮಾಧಾನಗಳ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.

ಸಂಕ್ರಾಂತಿಗೆ ಸಂ ಕ್ರಾಂತಿ’ಯಾಗುತ್ತಾ?

ಇತರೆ ರಾಜ್ಯ ಚುನಾವಣೆಗಳಲ್ಲಿ ಬ್ಯುಸಿಯಾಗಿದ್ದ ಬಿಜೆಪಿ ಹೈಕಮಾಂಡ್ ನಾಯಕರು ಇದೀಗ ಕರ್ನಾಟಕ ಬಿಜೆಪಿಯಲ್ಲಿ ಸಮಸ್ಯೆಗಳನ್ನು ನಿವಾರಿಸಲು ಮುಂದಾದಂತಿದೆ. ರಾಜ್ಯ ಕೋರ್ ಕಮಿಟಿ ಸಭೆ ಹಾಗೂ ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಯತ್ನಾಳ್, ವಿಜಯೇಂದ್ರ ಸೇರಿದಂತೆ ಹಲವು ಬಗ್ಗೆ ಚರ್ಚೆಗಳು ಆಗಲಿದ್ದು, ಕೆಲವೊಂದಿಷ್ಟು ಮಹತ್ವದ ಬದಲಾವಣೆಯಾಗಲಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇತ್ತೀಚೆಗೆ ಯತ್ನಾಳ್ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿದರೆ ಅವರಿಗೆ ಒಂದು ಉನ್ನತ ಹುದ್ದೆ ಲಭಿಸುವ ಸಾಧ್ಯತೆಗಳಿವೆ. ಇನ್ನು ರಾಜ್ಯಾಧ್ಯಕ್ಷ ಬದಲಾವಣೆಗೆ ಪಟ್ಟು ಹಿಡಿರುವ ಯತ್ನಾಳ್ ಆಸೆ ಈಡೇರಲಿದೆ ಎನ್ನುವ ಚರ್ಚೆಗಳು ಶುರುವಾಗಿದೆ. ಸಂಕ್ರಾಂತಿ ವೇಳೆ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಯಾಗಲಿದ್ದು, ಬೇರೆಯವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಹೀಗಾಗಿ ಕರ್ನಾಟಕ ಬಿಜೆಪಿಯಲ್ಲಿ ಬೆಳವಣಿಗೆಗಳು ತೀವ್ರ ಕುತೂಹಲ ಮೂಡಿಸಿದ್ದು, ಯತ್ನಾಳ್ ಕೈ ಮೇಲಾಗುತ್ತಾ ಅಥವಾ ವಿಜಯೇಂದ್ರ ಮಾತು ನಡೆಯುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:22 pm, Thu, 28 November 24