ಆಡಳಿತ ಮತ್ತು ವಿಪಕ್ಷದ ನಡುವೆ ಅನುದಾನ ತಾರತಮ್ಯ ಸಮರ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಅನುದಾನ ಹಂಚಿಕೆಯ ತಾರತಮ್ಯ ಆರೋಪದ ಮೇಲೆ ನೋಟಿಸ್ ಜಾರಿ ಮಾಡಿದೆ. ಬಿಜೆಪಿ ಶಾಸಕ ಜಗದೀಶ್ ಗುಡಗುಂಟಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿ ಕೋರ್ಟ್ ಈ ಕ್ರಮ ಕೈಗೊಂಡಿದೆ. ಆಡಳಿತ ಪಕ್ಷದ ಶಾಸಕರಿಗೆ ಹೆಚ್ಚಿನ ಅನುದಾನ, ವಿರೋಧ ಪಕ್ಷದವರಿಗೆ ಕಡಿಮೆ ಎಂಬ ಆರೋಪವಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಇದನ್ನು ನಿರಾಕರಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 29: ರಾಜ್ಯ ಸರ್ಕಾರದಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಪ್ರಶ್ನಿಸಿ ಜಮಖಂಡಿ ಬಿಜೆಪಿ ಶಾಸಕ ಜಗದೀಶ್ ಗುಡಗುಂಟಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿರುವ ಹೈಕೋರ್ಟ್, ಸರ್ಕಾರ, ಹಣಕಾಸು ಇಲಾಖೆ, ಬಾಗಲಕೋಟೆ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ. ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಕಾಂಗ್ರೆಸ್ ಶಾಸಕರಿಗೆ 50 ಕೋಟಿ, ವಿಪಕ್ಷಗಳಿಗೆ 25 ಕೋಟಿ ನಿಗದಿ ಮಾಡಲಾಗಿದೆ ಎಂದು ಆರೋಪಿಸಿ ಜಗದೀಶ್ ಸಲ್ಲಿಸಿದ್ದ ಅರ್ಜಿಯನ್ನು ಸಿಜೆ ವಿಭು ಬಖ್ರು, ನ್ಯಾ.ಸಿ.ಎಂ.ಪೂಣಚ್ಚ ಅವರಿದ್ದ ಪೀಠ ವಿಚಾರಣೆ ನಡೆಸಿದೆ.
ಜೆಡಿಎಸ್ ಶಾಸಕನಿಂದಲೂ ಸಲ್ಲಿಕೆಯಾಗಿತ್ತು ರಿಟ್ ಅರ್ಜಿ
ಅನುದಾನ ಹಂಚಿಕೆ ವೇಳೆ ಸ್ವಪಕ್ಷ ಶಾಸಕರಿಗೆ ಒಂದು, ವಿಪಕ್ಷ ಶಾಸಕರಿಗೆ ಒಂದು ಎಂಬ ರೀತಿ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಆರೋಪಿಸಿದ್ದವು. 5 ಗ್ಯಾರಂಟಿ ಯೋಜನೆಗಳಿಗಾಗಿ ಈ ವರ್ಷ 56,000 ಕೋಟಿ ರೂ. ಖರ್ಚು ಮಾಡಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ 5,229 ಕೋಟಿ ರೂ. ಮೂಲಸೌಕರ್ಯ ವೆಚ್ಚದಲ್ಲಿ ಕಡಿತವಾಗಿರುವ ಬಗ್ಗೆ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 50 ಕೋಟಿ ರೂ. ಅನುದಾನ ನೀಡಿ, ವಿಪಕ್ಷ ಶಾಸಕರ ಕ್ಷೇತ್ರಗಳಿಗೆ 25 ಕೋಟಿ ರೂ. ನೀಡಲಾಗುತ್ತಿದೆ ಎಂದು ಕಿಡಿ ಕಾರಿದ್ದವು. ಅಲ್ಲದೆ, ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿ ಶ್ರೀನಿವಾಸಪುರ ಜೆಡಿಎಸ್ ಶಾಸಕ ವೆಂಕಟಶಿವರೆಡ್ಡಿ ಕೂಡ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಶಾಸಕರ ಅನುದಾನ ತಾರತಮ್ಯ ಸಮರ: ಕೋರ್ಟ್ನಲ್ಲೇ ತೀರ್ಮಾನವಾಗಲಿ ಎಂದ ಸಿಎಂ ಸಿದ್ದರಾಮಯ್ಯ
ಆದರೆ, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪವನ್ನು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದು, ಈ ಬಗ್ಗೆ ಕೋರ್ಟ್ನಲ್ಲೇ ತೀರ್ಮಾನ ಆಗಲಿ ಎಂದಿದ್ದರು. ಎಷ್ಟು ಅನುದಾನ ಕೊಡಬೇಕೋ ಕೊಟ್ಟಿದ್ದೇವೆ, ಕೊಟ್ಟಿಲ್ಲ ಅಂದ್ರೆ ಹೇಗೆ? ಸುಮ್ಮನೇ ಸುಳ್ಳು ಆರೋಪ ಮಾಡಬಾರದು. ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ಅನುದಾನ ಕೊಟ್ಟಿದ್ದರಾ? ಅಧಿಕಾರದಲ್ಲಿದ್ದಾಗ ಏನೂ ಮಾಡದ ಅವರು ಈಗ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಿಎಂ ಆರೋಪಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



