ಮಂಡ್ಯ ಕಾಂಗ್ರೆಸ್​ನಲ್ಲಿ ಭಿನ್ನಮತ ಸ್ಪೋಟ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಹೆಚ್​ಎನ್ ರವೀಂದ್ರ ರಾಜೀನಾಮೆ

| Updated By: ವಿವೇಕ ಬಿರಾದಾರ

Updated on: Mar 06, 2024 | 10:05 AM

ಎಸ್.ಟಿ.ಸೋಮಶೇಖರ್ ಅಡ್ಡ ಮತದಾನ ಮಾಡಿದ್ದಾನೆ, ಇವಾಗ ಕಾಂಗ್ರೆಸ್​ಗೆ ಕರೆದುಕೊಂಡು ಬರುತ್ತಿದ್ದೀರಿ. ಸ್ಥಳೀಯ ಕಾರ್ಯಕರ್ತರಿಗೆ ಚ...ಯಲ್ಲಿ ಹೊಡೆದಾಗೆ ಆಗಲ್ವಾ? ಪಕ್ಷದ ಚೌಕಟ್ಟು ನನ್ನಂತವರಿಗೆ ಹೊಂದಲ್ಲ ಹಾಗಾಗಿ ರಾಜೀನಾಮೆ ಕೊಡುತ್ತಿದ್ದೇನೆ ಎಂದು ಹೆಚ್​​ಎನ್​ ರವೀಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ಕಾಂಗ್ರೆಸ್​ನಲ್ಲಿ ಭಿನ್ನಮತ ಸ್ಪೋಟ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಹೆಚ್​ಎನ್ ರವೀಂದ್ರ ರಾಜೀನಾಮೆ
ಹೆಚ್​ಎನ್​ ರವೀಂದ್ರ
Follow us on

ಮಂಡ್ಯ, ಮಾರ್ಚ್​​ 06: ಲೋಕಸಭೆ ಚುನಾವಣೆಗೆ (Lok Sabha Election) ಕೆಲವೆ ತಿಂಗಳು ಬಾಕಿ ಇರುವಾಗಲೆ ಮಂಡ್ಯ (Mandya) ಕಾಂಗ್ರೆಸ್​ನಲ್ಲಿ (Congress) ಭಿನ್ನಮತ ಸ್ಪೋಟಗೊಂಡಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ (Mandya Lok Sabha Constituency) ಕಾಂಗ್ರೆಸ್ (Congress) ವೆಂಕಟರಮಣ ಗೌಡ ಅಲಿಯಾಸ್​ ಸ್ಟಾರ್​ ಚಂದ್ರು ಅವರಿಗೆ ಮನ್ನಣೆ ನೀಡಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಡಾ.ಹೆಚ್.ಎನ್.ರವೀಂದ್ರ (HN Ravindra) ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ “ಡಿಕೆ ಶಿವಕುಮಾರ್ ನನ್ನ ಮೇಲೆ ನಂಬಿಕೆ ಇಟ್ಟು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿ ಕೊಟ್ಟಿದ್ದರು. ಇದೀಗ ವಾತವರಣ ಕಲುಷಿತವಾಗಿದೆ. ಹೀಗಾಗಿ ಕೆಪಿಸಿಸಿ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದೇನೆ” ಎಂದರು.

ಕೆಪಿಸಿಸಿಯ ಪ್ರತಿಯೊಂದು ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡುತ್ತಾರೆ ಎಂಬ ವಿಶ್ವಾಸ ಇತ್ತು. ಕಡೆ ಗಳಿಗೆಯಲ್ಲಿ ಮೇಲುಕೋಟೆ ಕ್ಷೇತ್ರವನ್ನು ರೈತ ಸಂಘಕ್ಕೆ ನೀಡಿದ್ದಾರೆ. ರೈತ ಸಂಘಕ್ಕೆ ಬಿಟ್ಟುಕೊಡುವ ಬಗ್ಗೆ ಸೌಜನ್ಯಕ್ಕೂ ಚರ್ಚೆ ಮಾಡದೆ ತೀರ್ಮಾನ ತೆಗೆದುಕೊಂಡರು. ಕಾರ್ಯಕರ್ತರು, ಸ್ಥಳೀಯರು ನಿಮಗೆ ಗುಲಾಮರು, ನೀವು ಹೇಳಿದ ಹಾಗೆ ಕುಣಿಯುವ ಗೊಂಬೆಗಳು ನಾವು ಎಂದು ಬೇಸರ ವ್ಯಕ್ತಪಡಿಸಿದರು.

ಪಕ್ಷ ಸೂಚಿಸಿದ ಮೆರೆಗೆ ದರ್ಶನ್ ಪುಟ್ಟಣ್ಣಯ್ಯ ಪರ ಪ್ರಚಾರ ಮಾಡಿ ಕೆಲಸ ಮಾಡಿದ್ದೇನೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಗೆದ್ದರು. ಮತದಾನ ಮುಗಿದ ನಂತರ ನಟ ದರ್ಶನ್ ಕೂಡ ಕರೆ ಮಾಡಿ ನಿಮ್ಮಿಂದ ಅಪ್ಪಾಜಿ ಅವರ ಗೌರವ ಉಳಿಯಿತು ಅಂತ ಹೇಳಿದರು. ಸುಮಲತಾ ಅಂಬರೀಶ್ ಕೂಡ ಮಾತನಾಡಿ ಜನರೆಲ್ಲ ನಮ್ಮ ಸ್ಟಾರ್​ (ಅಂಬರೀಶ್​) ಅವರ ಅಭಿಮಾನಿಗಳು, ಆದರೆ ಸ್ಟಾರ್​ಗಳು ನಿಮಗೆ (ಡಾ.ಹೆಚ್.ಎನ್.ರವೀಂದ್ರ) ಅಭಿಮಾನಿಗಳಾಗಿದ್ದಾರೆ ಅಂದರು. ನಾನು ಲಾಟರಿ ಹೊಡೆಯಿತು ಅಂದುಕೊಂಡೆ. ಆದರೆ ನಿಮ್ಮ ಬೆನ್ನಿಗೆ ಕಟ್ಟಿಕೊಂಡು ಓಡಾಡಲು ನಾನು ರಾಕ್ ಲೈನ್ ಅಲ್ಲ. ಸ್ಮಾರ್ಟ್ ಸಿಟಿ ಪ್ರಾಜೆಕ್ಟ್​​ನಲ್ಲಿ ಯಾವ ಯಾವದೋ ಜಿಲ್ಲೆಯನ್ನು ಸ್ಮಾರ್ಟ್ ಸಿಟಿ ಮಾಡಲು ಹೋಗಿದ್ದಾರೆ. ಮಂಡ್ಯ ಸ್ಮಾರ್ಟ್ ಸಿಟಿ ಮಾಡಬೇಕು ಎಂದು ಕಾಂಗ್ರೆಸ್​ ಮತ್ತು ಸಂಸದೆ ಸುಮಲತಾ ಅಂಬರೀಶ್​ ವಿರುದ್ಧ ವಾಗ್ದಾಳಿ ಮಾಡಿದರು.

ಕಾಂಗ್ರೆಸ್​​​ನಲ್ಲಿ ಟಿಕೆಟ್ ಪಡೆಯಲು ದುಡ್ಡೆ ಮಾನದಂಡ

ಕಾಂಗ್ರೆಸ್​​ನಲ್ಲಿ ಟಿಕೆಟ್ ಪಡೆಯಲು ದುಡ್ಡೆ ಮಾನದಂಡ. ಹಣ ಇದ್ದವರನ್ನು ಪಕ್ಷಕ್ಕೆ ಕೆರದುಕೊಂಡು ಬರುತ್ತಾರೆ. ವಿಧಾನಸಭೆ ಚುನಾವಣೆ ವೇಳೆ ಸಚಿವ ಚಲುವರಾಯಸ್ವಾಮಿ ನನ್ನ ವಿರುದ್ಧ ಒಬ್ಬರನ್ನ ಎತ್ತಿ ಕಟ್ಟಿದ್ದರು. ವಿಧಾನಸಭೆ ಚುನಾವಣೆ ವೇಳೆ ​ಆಕಾಂಕ್ಷಿತರೆಲ್ಲ ಟಿಕೆಟ್​ಗಾಗಿ ಒಂದು ಲಕ್ಷ ದುಡ್ಡು ಕೊಟ್ಟಿದ್ದೇವೆ. ನಾನು ನಿಲ್ಲಲ್ಲ, ನಾನು ಸ್ಪರ್ಧಿಸಿದರೂ ಚಲುವರಾಯಸ್ವಾಮಿ ಗೆಲ್ಲಲು ಬಿಡಲ್ಲ ಅಂತ ಹೇಳಿದ್ದೆ. ನನ್ನ ಮತ್ತೊಬ್ಬ ಆಕಾಂಕ್ಷಿಗೆ ನೀನೆ ನಿಲ್ಲು ಬೆಂಬಲ ನೀಡುತ್ತೇನೆ ಎಂದು ಹೇಳಿದ್ದೆ ಎಂದರು.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಮೈತ್ರಿ ಅಭ್ಯರ್ಥಿಯಾಗಿ ಡಾ ಮಂಜುನಾಥ್ ಸ್ಪರ್ಧೆ ಬಹುತೇಕ ಖಚಿತ

ಗಣಿಗ ರವಿಕುಮಾರ್​ ಟಿಕೆಟ್ ವಿಚಾರವಾಗಿ ಚಲುವರಾಯಸ್ವಾಮಿಗೆ ಬೈದಿದ್ದೆ. ಇದರಿಂದ ನನ್ನ ಹಾಗೂ ಚಲುವರಾಯಸ್ವಾಮಿ ನಡುವೆ ಮನಸ್ತಾಪ ಕೂಡ ಆಗಿತ್ತು, ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷ ಗೆಲ್ಲಿಸಿದರು. ಸರ್ಕಾರ ರಚನೆಯಾಗಿ ಚಲುವರಾಯಸ್ವಾಮಿ ಮಂತ್ರಿಯಾದರು. ಅವರು ನನಗೆ ಕರೆ ಮಾಡಿ ಎಲ್ಲಾ ಬಿಟ್ಟು ಕೆಲಸ ಮಾಡೋಣ ಅಂತ ಹೇಳಿದರು. ಲೋಕಸಭೆ ಚುನಾವಣೆ ವಿಚಾರದಲ್ಲಿ ಚಲುವರಾಯಸ್ವಾಮಿ ನನ್ನ ಹೆಸರು ಸೂಚಿಸಿದ್ದರು. ಆದರೆ ಕಾಂಗ್ರೆಸ್​ನಲ್ಲಿ ಟಿಕೆಟ್ ಪಡೆಯಲು ಮಾನದಂಡ ಅಂದರೆ ಅದು ಹಣ. ಏಳು ಜನ ಶಾಸಕರು ಇದ್ದಾರೆ, ದುಡ್ಡು ಇರುವವರು ಗೆದ್ದೇ ಗೆಲ್ಲುತ್ತೇವೆ ಅಂದುಕೊಂಡಿದ್ದಾರೆ. ಇದೆ ವಿಚಾರದಲ್ಲಿ ಕುಮಾರಸ್ವಾಮಿ ದುಡಿಕಿ ಯಡವಟ್ಟು ಮಾಡಿಕೊಂಡರು. ಅವರ ತರಹ ಈಗ ಯೋಚನೆ ಮಾಡಿದರೆ ಕಷ್ಟ. ಅದೇ ಜಿದ್ದಿಗೆ ಬಿದ್ದು ಚುನಾವಣೆ ಮಾಡುತ್ತೇನೆ ಅಂದರೆ ಅಷ್ಟು ಸುಲಭವಾಗಿ ಜಿಲ್ಲೆಯ ಜನ ಬಗ್ಗುವ ಮಕ್ಕಳಲ್ಲ. ಇವರಿಗೆ ದುಡ್ಡು ತಂದು ಕೊಡಲು ನಾವು ಅಷ್ಟು ಲಂಚ ತೆಗೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಎಸ್.ಟಿ.ಸೋಮಶೇಖರ್ ಅಡ್ಡ ಮತದಾನ ಮಾಡಿದ್ದಾನೆ, ಇವಾಗ ಕಾಂಗ್ರೆಸ್​ಗೆ ಕರೆದುಕೊಂಡು ಬರುತ್ತಿದ್ದೀರಿ. ಸ್ಥಳೀಯ ಕಾರ್ಯಕರ್ತರಿಗೆ ಚ…ಯಲ್ಲಿ ಹೊಡೆದ ಹಾಗೆ ಆಗಲ್ವಾ? ಪಕ್ಷದ ಚೌಕಟ್ಟು ನನ್ನಂತವರಿಗೆ ಹೊಂದಲ್ಲ ಹಾಗಾಗಿ ರಾಜೀನಾಮೆ ಕೊಡುತ್ತಿದ್ದೇನೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:46 am, Wed, 6 March 24