ಆಮ್ಲಜನಕ ಪೂರೈಕೆ, ಉಪಚುನಾವಣೆ ಮತ್ತು ಕೊವಿಡ್​ ನಿರ್ವಹಣೆ; ಬೊಮ್ಮಾಯಿ ಮತ್ತು ವಿಜಯೇಂದ್ರರಿಂದ ವರದಿ ಪಡೆದ ಅಮಿತ್ ಶಾ

| Updated By: guruganesh bhat

Updated on: May 08, 2021 | 8:02 PM

ಆಮ್ಲಜನಕ ಪೂರೈಕೆ ವಿಚಾರ, ಉಪಚುನಾವಣೆ ಮತ್ತು ಕೊವಿಡ್​ ನಿರ್ವಹಣೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಕರ್ನಾಟಕದ ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಮತ್ತು ಬಿ.ವೈ. ವಿಜಯೇಂದ್ರ ಅವರಿಂದ ವರದಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಆಮ್ಲಜನಕ ಪೂರೈಕೆ, ಉಪಚುನಾವಣೆ ಮತ್ತು ಕೊವಿಡ್​ ನಿರ್ವಹಣೆ; ಬೊಮ್ಮಾಯಿ ಮತ್ತು ವಿಜಯೇಂದ್ರರಿಂದ  ವರದಿ ಪಡೆದ ಅಮಿತ್ ಶಾ
ಅಮಿತ್ ಶಾ ಮತ್ತು ಬಿ.ವೈ. ವಿಜಯೇಂದ್ರ
Follow us on

ನಿನ್ನೆ ಮಧ್ಯಾಹ್ನ ಪಕ್ಷದ ರಾಷ್ಟ್ರೀಯ ನಾಯಕರ ಕರೆಯ ಮೇರೆಗೆ ದೆಹಲಿಗೆ ತೆರಳಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಎಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಗ, ಬಿಜೆಪಿ ರಾಜ್ಯ ಉಪಾಧ್ಯಕ್ಷ, ಬಿ.ವೈ. ವಿಜಯೇಂದ್ರ, ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಅಧಿಕೃತವಾಗಿ ಯಾವುದೇ ಹೇಳಿಕೆ ಸರಕಾರದಿಂದ ಬಂದಿಲ್ಲದಿದ್ದರೂ ಪಕ್ಷದ ಮೂಲಗಳ ಪ್ರಕಾರ ಕೇಂದ್ರದ ನಾಯಕರು ಮೂರ್ನಾಲ್ಕು ವಿಚಾರದ ಬಗ್ಗೆ ತಲೆಕೆಡಿಸಿಕೊಂಡಿದ್ದು ಅದನ್ನು ಚರ್ಚಿಸಲು ರಾಜ್ಯ ನಾಯಕರನ್ನು ದೆಹಲಿಗೆ ಕರೆಸಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಚರ್ಚೆಯಾದ ವಿಷಯಗಳೇನು?
ವಿಜಯೇಂದ್ರ ಮತ್ತು ಬೊಮ್ಮಾಯಿ ಜೊತೆ ನಾವಡಗಿ ಕೂಡ ದೆಹಲಿಗೆ ಹೋಗಿರುವುದರಿಂದ ಒಂದಂತೂ ಸ್ಪಷ್ಟ: ಬರೀ ಪಕ್ಷದ ವಿಚಾರ ಮಾತ್ರ ಚರ್ಚೆ ಬಂದಿರಲಿಕ್ಕಿಲ್ಲ. ಮೂಲಗಳ ಪ್ರಕಾರ, ಕರ್ನಾಟಕಕ್ಕೆ ಆಮ್ಲಜನಕ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರಕಾರಕ್ಕೆ ಆದ ಹಿನ್ನೆಡೆಯ ಕಾರಣದಿಂದಾಗಿ ಕೇಂದ್ರ ನಾಯಕರು ಸ್ವಲ್ಪ ಮುಜುಗರಕ್ಕೆ ಒಳಗಾಗಿದ್ದು ಇರಬಹುದು. ಈ ಕಾರಣದಿಂದಾಗಿ ಕೇಂದ್ರದ ನಾಯಕರು ಕರ್ನಾಟಕದ ನಾಯಕರನ್ನು ಕರೆಸಿದ್ದಾರೆ ಎನ್ನಬಹುದು.

ಮೊನ್ನೆ ಕರ್ನಾಟಕ ಉಚ್ಛ ನ್ಯಾಯಾಲಯ ಒಂದು ಆದೇಶ ಹೊರಡಿಸಿ ಕರ್ನಾಟಕಕ್ಕೆ ಕನಿಷ್ಠ 1200 ಮೆಟ್ರಿಕ್ ಟನ್ ಆಮ್ಲಜನಕ ನೀಡಲು ಆದೇಶಿಸಿದ್ದರು. ಆದರೆ, ಕೇಂದ್ರ ಈ ತೀರ್ಮಾನವನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿ ಕರ್ನಾಟಕಕ್ಕೆ ಮುಜು ಮಾಡಿತ್ತು. ಆದರೆ, ಸರ್ವೋಚ್ಛ ನ್ಯಾಯಾಲಯ ಕರ್ನಾಟಕ ಉಚ್ಛ ನ್ಯಾಯಾಲಯದ ತೀರ್ಮಾನವನ್ನು ಎತ್ತಿ ಹಿಡಿದಿತ್ತು ಮತ್ತು ತಾನು ಈ ತೀರ್ಮಾನದ ಕುರಿತಾಗಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿತ್ತು. ಇದರಿಂದ ಕೇಂದ್ರ ಸರಕಾರಕ್ಕೆ ಮುಖಭಂಗ ಆಗಿತ್ತು. ಇದು ಯಾಕೆ ಹೀಗಾಯ್ತು? ಎಂಬ ವಿಚಾರವನ್ನು ಚರ್ಚಿಸಲು ಪ್ರಾಯಶಃ ಅಡ್ವೋಕೇಟ್ ಜನರಲ್ ಅವರನ್ನು ಕರೆಸಿ ಚರ್ಚೆ ನಡೆಸಿದ್ದಾರೆ.

ಲೋಕಸಭೆ ಮತ್ತು ವಿಧಾನಸಭಾ ಉಪಚುನಾವಣೆಯಲ್ಲಿ ನೈತಿಕ ಜಯ ಪಡೆದ ಕಾಂಗ್ರೆಸ್​ನ ಚುನಾವಣಾ ನಿರ್ವಹಣೆ ಮತ್ತು ಉತ್ತರ ಕರ್ನಾಟಕದ ಲಿಂಗಾಯತ ಕೋಟೆಯಲ್ಲಿ ಬಿಜೆಪಿಗೆ ಕಹಿ ಸಂದೇಶ ಬಂದ ಹಿನ್ನೆಲೆಯಲ್ಲಿ ಕೇಂದ್ರ ನಾಯಕರು ಚಿಂತಿತರಾಗಿದ್ದಾರೆ ಎನ್ನಲಾಗಿದೆ. ಈ ಚುನಾವಣೆ ನಿರ್ವಹಣೆಯಲ್ಲಿ ಎಡವಿದ್ದೆಲ್ಲಿ ಎಂಬ ವಿಚಾರದ ಬಗ್ಗೆ ಕೇಂದ್ರದ ನಾಯಕರು ತಿಳಿದುಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇಷ್ಟಕ್ಕೂ ಕೇಂದ್ರದ ನಾಯಕರ ಮನಸ್ಸಲ್ಲಿ ಒಂದು ಪ್ರಶ್ನೆ ಎದ್ದಿರಬಹುದು: ಲಿಂಗಾಯತ ಪ್ರದೇಶದಲ್ಲಿ ಯಡಿಯೂರಪ್ಪ ಅವರಿಗೆ ಯಾವ ಬಲ ಅಥವಾ ಬೆಂಬಲ ಸಿಗುತ್ತಿಲ್ಲ ಎಂದಾದರೆ, ಇನ್ನು ಯಡಿಯೂರಪ್ಪ ಅವರ ಬಳಿ ಪಕ್ಷ ಬಲಗೊಳಿಸುವ ಅಸ್ತ್ರ ಇರಲು ಸಾಧ್ಯ? ಈ ಕುರಿತು ನೇರವಾಗಿ ಅಲ್ಲದಿದ್ದರೂ, ಸೂಕ್ಷ್ಮವಾಗಿ ತಿಳಿದುಕೊಂಡಿರಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದೆಲ್ಲಕ್ಕಿಂತ ಹೆಚ್ಚಾಗಿ, ಕರ್ನಾಟಕ ಕೊವಿಡ್​ ನಿರ್ವಹಣೆಯಲ್ಲಿ ವಿಫಲವಾಗಿದ್ದು ಅದನ್ನು ವಿಶದವಾಗಿ ಚರ್ಚಿಸಿದ್ದಾರೆ. ಮತ್ತು ಇನ್ನು ಏನೇನು ಕ್ರಮ ತೆಗೆದುಕೊಳ್ಳಬೇಕೆಂದು ಕೇಂದ್ರದ ನಾಯಕರು ಕಿವಿಮಾತು ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಆರ್​ಎಸ್​ಎಸ್​ ಸಭೆ ಮೂಲವೇ?
ಈ ನಡುವೆ ಇನ್ನೊಂದು ಬೆಳವಣಿಗೆ ಆಗಿದ್ದು ಮಾಧ್ಯಮದ ಗಮನಕ್ಕೆ ಬಂದಿರಲಿಲ್ಲ. ಇದಕ್ಕೂ ಮೊದಲು ಎರಡು ಅಥವಾ ಮೂರನೇ ತಾರೀಖಿನಂದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಳೀಯ ನಾಯಕರು ವಿಜಯೇಂದ್ರ ಅವರನ್ನು ಕರೆಸಿಕೊಂಡು ಕೊವಿಡ್ ನಿರ್ವಹಣೆ ವಿಚಾರದಲ್ಲಿ ಸರಕಾರ ಮುಗ್ಗರಿಸಿದ ಬಗ್ಗೆ ತಮ್ಮ ಅಭಿಪ್ರಾಯ ನೀಡಿದ್ದಾರೆ ಎಂದು ಹೇಳಲಾಗಿದೆ. ಇದಾದ ಮರುದಿನವೇ ಯಡಿಯೂರಪ್ಪ ಆರೋಗ್ಯ ಸಚಿವ ಡಾ ಕೆ. ಸುಧಾಕರ ಅವರ ಕೈ ಕಟ್ಟಲು ನಿರ್ಧರಿಸಿದರು. ಮೊದಲು ಕಾರ್ಯಪಡೆಯನ್ನು ಪುನರ್​​ರಚಿಸಿದರು ಮತ್ತು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರಿಗೆ ಅದರ ನೇತೃತ್ವ ನೀಡಿದರು. ಹಾಸಿಗೆ ನಿರ್ವಹಣೆ ಆರ್. ಅಶೋಕ್ ಅವರಿಗೆ, ಕೊವಿಡ್ ವಾರ್ ರೂಮ್ ನಿರ್ವಹಣೆಯನ್ನು ಅರವಿಂದ ಲಿಂಬಾವಳಿ ಅವರಿಗೆ, ಔಷಧಿ ನಿರ್ವಹಣೆಯನ್ನು ಡಾ. ಅಶ್ವತ್ಥ ನಾರಾಯಣ ಅವರಿಗೆ ಮತ್ತು ಆಮ್ಲಜನಕದ ನಿರ್ವಹಣೆಯನ್ನು ಜಗದೀಶ್ ಶೆಟ್ಟರ ಅವರಿಗೆ ನೀಡಿ ಆರ್​ಎಸ್​ಎಸ್​ ನಾಯಕರ ಸಿಟ್ಟು ತಣಿಸಲು ಪ್ರಯತ್ನಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ:

SAARC Workshop on COVID-19 Management ಕೊರೊನಾ ನಿರ್ವಹಣೆ ಕಾರ್ಯಾಗಾರ: ನೆರೆಯ 10 ದೇಶಗಳ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

Covid 19 Vaccine: ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ತಾತ್ಕಾಲಿಕ ಸ್ಥಗಿತ.. ಕೊವಿನ್​ ಆ್ಯಪ್​ ದೋಷವೇ ಕಾರಣವಾಯ್ತಾ?

(Home minister Amit Shah got report from Basavaraj Bommai and BY Vijayendra on Karnataka bypoll Covid management and Oxygen supply issues)

Published On - 7:03 pm, Sat, 8 May 21