ಯಾದಗಿರಿ, (ಸೆಪ್ಟೆಂಬರ್ 12): ಕರ್ನಾಟಕ ಬಿಜೆಪಿಗೆ (Karnataka BJP)ಹೊಸ ಅಧ್ಯಕ್ಷರ ಆಯ್ಕೆ ಸಂಬಂಧ ಪಕ್ಷದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈಗಾಗಲೇ ವಿ ಸೋಮಣ್ಣ ರಾಜ್ಯಾಧ್ಯಕ್ಷ ಹುದ್ದೆ ಬೇಡಿಕೆ ಇಟ್ಟ ಬೆನ್ನಲ್ಲೇ ಇದೀಗ ಮಾಜಿ ಶಾಸಕ ರಾಜೂಗೌಡ(Raju gowda) ಸಹ ತಮನ್ನ ಅಧ್ಯಕ್ಷರನ್ನಾಗಿ ಮಾಡುವಂತೆ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಇಂದು (ಸೆಪ್ಟೆಂಬರ್ 12) ಯಾದಗಿರಿಯ ಹುಣಸಗಿ ಪಟ್ಟಣದಲ್ಲಿ ಮಾತನಾಡಿದ ರಾಜೂಗೌಡ, ಬಿಜೆಪಿ ರಾಜ್ಯಾಧ್ಯಕ್ಷನಾಗುವ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ನಾನು ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ. ಯಾವ ಮುಖ ಇಟ್ಟುಕೊಂಡು ನಾನು ಕಾಂಗ್ರೆಸ್ಗೆ ಹೋಗಬೇಕು ಎಂದು ಸ್ಪಷ್ಟಪಡಿಸಿದರು. ಈ ಮೂಲಕ ತಾವು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರಿಂದ ಕಾಂಗ್ರೆಸ್ಗೆ ಹೋಗಲ್ಲ ಎನ್ನುವ ಅರ್ಥದಲ್ಲಿ ಹೇಳಿದರು.
ವಾಜಪೇಯಿ, ಇಂದಿರಾ ಗಾಂಧಿ, ದೇವೇಗೌಡ, ಸಿದ್ದರಾಮಯ್ಯ ಸೋತಿಲ್ವಾ? ಸೋತಾಗ ನಿಷ್ಠೆಯಿಂದ ಕೆಲಸ ಮಾಡಿದರೆ ಉನ್ನತ ಹುದ್ದೆ ಸಿಗುತ್ತದೆ. ನಾನು ಪಾರ್ಟ್ ಟೈಂ ರಾಜಕಾರಣಿ. ಚುನಾವಣೆಯಲ್ಲಿ ಸೋತು ಪಕ್ಷ ಕಷ್ಟದಲ್ಲಿದ್ದಾಗ ಜೊತೆಗೆ ಇರಬೇಕು. ದಿನದ 24 ಗಂಟೆ ನಾನು ರಾಜಕೀಯ ಮಾಡಲ್ಲ. ನಾನಗೆ ಒಕ್ಕಲುತನ ಮಾಡುವುದು ಅಂದ್ರೆ ಇಷ್ಟ. ಆದರೂ ರಾಜಕೀಯದಲ್ಲಿ ಇದ್ದಿದ್ದಕ್ಕೆ ರಾಜಕೀಯ ಮಾಡುತ್ತಿದ್ದೇನೆ. ಚುನಾವಣೆಯಲ್ಲಿ ಸೋತು ಪಕ್ಷ ಕಷ್ಟದಲ್ಲಿದ್ದಾಗ ಜೊತೆಗೆ ಇರಬೇಕು. ಇಂತಹ ಸಂದರ್ಭಗಳಲ್ಲಿ ಪಕ್ಷದ ಜತೆ ಇದ್ದರೆ ಮುಂದೆ ಉಜ್ವಲ ಭವಿಷ್ಯ ಇರುತ್ತದೆ ಎಂದು ಹೇಳಿದರು.
ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ಮಾತನಾಡಿ, ಮೈತ್ರಿ ಆಗುತ್ತಿದೆ ಎಂದು ಮಾಧ್ಯಮದಲ್ಲಿ ನೋಡುತ್ತಿದ್ದೇವೆ. ನಮ್ಮ ರಾಜ್ಯದ ನಾಯಕರು ಈಶ್ವರಪ್ಪ ಸಾಹೇಬ್ರು ಹೇಳಿಕೆ ನೀಡಿದ್ದಾರೆ. ರಾಜ್ಯ ನಾಯಕರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧ. ಮೈತ್ರಿ ಬಗ್ಗೆ ನಾನು ಯಾವುದೇ ವಿರೋಧ ವ್ಯಕ್ತಪಡಿಸಲ್ಲ. ಮೈತ್ರಿ ಬಗ್ಗೆ ಇನ್ನೂ ಸ್ಪಷ್ಟವಾಗಿ ಮಾಹಿತಿ ಇಲ್ಲ. ಏನೇ ಮಾಡಿದರೂ ನಮ್ಮ ಹೈಕಮಾಂಡ್ ನಾಯಕರು ಯೋಚನೆ ಮಾಡಿ ಮಾಡುತ್ತಾರೆ. ನಮ್ಮ ಭಾಗದಲ್ಲಿ ಮೈತ್ರಿಯಿಂದ ನಮಗೆ ಅಷ್ಟೊಂದು ಎಫೆಕ್ಟ್ ಆಗಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಅಸಮಾಧಾನಿತ ನಾಯಕರೊಂದಿಗೆ ಯಡಿಯೂರಪ್ಪ ಚರ್ಚೆ ಬಗ್ಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರು ಇದ್ದರೂ ಅವರಿಗೆ ಅಷ್ಟೇ ಗೌರವ ಕೊಡುತ್ತೇವೆ. ಯಡಿಯೂರಪ್ಪ ಸಾಹೇಬರು ಪ್ರತಿ ವಾರ ಎಲ್ಲರಿಗೂ ಫೋನ್ ಮಾಡಿ ಎನ್ಮಾಡ್ತಿದ್ದೀಯಾ ಬಾರೋ ಟೀ ಕುಡಿ ಬಾ ಅಂತ ಮಾತಾಡ್ತಾರೆ. ಪ್ರಧಾನಿ ಮೋದಿ ಸಾಹೇಬ್ರನ್ನ ಮತ್ತೋಮ್ಮೆ ಪ್ರಧಾನಿ ಮಾಡುವುದು ನಮ್ಮ ಕನಸು. ಹೀಗಾಗಿ ಎಲ್ಲರು ಸಹಕರಿಸಬೇಕು ಎಂದು ಹೇಳುತ್ತಾರೆ. ಇದರಿಂದ ರೇಣುಕಾಚಾರ್ಯ ಅವರನ್ನ ಕರೆಸಿ ಮಾತಾಡಿದ್ದಾರೆ. ನಮ್ಮಲ್ಲಿರುವ ಅಸಮಾಧಾನ ಸರಿಪಡಿಸುವಂತ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ