ತುಮಕೂರು, ಚಿತ್ರದುರ್ಗದಲ್ಲಿ ಬಿಜೆಪಿಗೆ ವರವಾಗಬಹುದು ಜಾತಿ ಸಮೀಕರಣದಲ್ಲಿನ ಬದಲಾವಣೆ, ಸಿಗಲಿದೆ ಹಿಂದುಳಿದ ವರ್ಗಗಳ ಬೆಂಬಲ!
Lok Sabha Elections: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಲಂಬಾಣಿ, ಭೋವಿ, ಎಸ್‌ಸಿ (ಎಡ) ಮತ್ತು ಕಾಡು ಗೊಲ್ಲರಂತಹ ಸಮುದಾಯಗಳು ಬಿಜೆಪಿಯನ್ನು ಬೆಂಬಲಿಸುವ ಸಾಧ್ಯತೆಗಳಿವೆ. ಇದಕ್ಕೆ ಅವರದ್ದೇ ಆದ ಕೆಲವು ಕಾರಣಗಳಿವೆ ಎಂದು ವರದಿಯೊಂದು ತಿಳಿಸಿದೆ. ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಭಾಷಣದ ವಿಡಿಯೋವೊಂದು ಸಹ ವೈರಲ್ ಆಗಿದ್ದು, ಹಿಂದುಳಿದ ವರ್ಗಗಳ ಮತವನ್ನು ಬಿಜೆಪಿಯತ್ತ ಪರಿವರ್ತಿಸುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಹಾಗಿದ್ದರೆ ಏನದು ವಿಚಾರ? ಇಲ್ಲಿದೆ ವಿವರ.
ಬೆಂಗಳೂರು, ಏಪ್ರಿಲ್ 22: ಈ ಬಾರಿಯ ಲೋಕಸಭೆ ಚುನಾವಣೆ (Lok Sabha Elections) ಸಂದರ್ಭದಲ್ಲೇ ಜಾತಿ ಸಮೀಕರಣದಲ್ಲಿ (Caste Equation) ಬದಲಾವಣೆಯ ಸುಳಿವು ಕಂಡುಬಂದಿದ್ದು, ಇದು ತುಮಕೂರು, ಚಿತ್ರದುರ್ಗದಂಥ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ (BJP) ನೆರವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ. ಲಂಬಾಣಿ, ಭೋವಿ, ಎಸ್‌ಸಿ (ಎಡ) ಮತ್ತು ಕಾಡು ಗೊಲ್ಲರಂತಹ ಸಮುದಾಯಗಳು ತಮ್ಮದೇ ಆದ ಕೆಲವು ಕಾರಣಗಳಿಗಾಗಿ ಬಿಜೆಪಿಯನ್ನು ಬೆಂಬಲಿಸಲು ಮುಂದಾಗಿರುವುದು ತಿಳಿದುಬಂದಿದೆ. ಈ ಕಾರಣ ಲೋಕಸಭೆ ಚುನಾವಣೆಯಲ್ಲಿ ಜಾತಿ ಸಮೀಕರಣಗಳು ದೊಡ್ಡ ಬದಲಾವಣೆಗೆ ಒಳಗಾದಂತಿದೆ ಎಂದು ವರದಿಯೊಂದು ಉಲ್ಲೇಖಿಸಿದೆ.
ಕಾಡು ಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಭರವಸೆ ನೀಡಿದ್ದು, ಈ ವಿಚಾರವಾಗಿ ರಾಜ್ಯಸಭೆಯಲ್ಲಿಯೂ ಪ್ರಸ್ತಾಪಿಸಿದ್ದಾರೆ. ಅವರ ಭಾಷಣದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದು ಬಿಜೆಪಿ ಜೆಡಿಎಸ್ ಮೈತ್ರಿಕೂಟದ ಮಾಸ್ಟರ್‌ಸ್ಟ್ರೋಕ್ ಎಂದೇ ಹೇಳಲಾಗುತ್ತಿದೆ.
ಅದೇ ವಿಷಯದ ಲಾಭ ಪಡೆದುಕೊಳ್ಳುತ್ತಿರುವ ದೇವೇಗೌಡರು ಈಗ ಪ್ರಚಾರ ಭಾಷಣಗಳಲ್ಲಿ ಅದನ್ನು ಪುನರುಚ್ಚರಿಸುತ್ತಿದ್ದಾರೆ. ಪರಿಣಾಮವಾಗಿ ಆ ಸಮುದಾಯಗಳನ್ನು ಪ್ರತಿನಿಧಿಸುವ ಸಂಘಗಳು ಸಹ ಎನ್ಡಿಎ ಅಭ್ಯರ್ಥಿಗಳ ಪರ ಬಹಿರಂಗವಾಗಿ ಪ್ರತಿಕ್ರಿಯಿಸಿವೆ. ಈ ಬದಲಾವಣೆಯು ತುಮಕೂರು ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳಲ್ಲಿ ವಿಶೇಷವಾಗಿ ಪರಿಣಾಮ ಬೀರಬಹುದು ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವಿಶ್ಲೇಷಣೆ ಉಲ್ಲೇಖಿಸಿದೆ. ಈ ಮಧ್ಯೆ, ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಸಮುದಾಯಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದಿರುವ ಹಿನ್ನೆಲೆಯಲ್ಲಿ ಲಂಬಾಣಿಗಳು ಅಸಮಾಧಾನಗೊಂಡಿದ್ದಾರೆ. ‘ನಾವು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿರಬಹುದು, ಆದರೆ ಲೋಕಸಭೆ ಚುನಾವಣೆಯಲ್ಲಿ ನಾವು ಬಿಜೆಪಿಯನ್ನು ಆಯ್ಕೆ ಮಾಡುತ್ತೇವೆ’ ಎಂದು ಸಮುದಾಯದ ಮುಖಂಡರೊಬ್ಬರು ಹೇಳಿರುವುದನ್ನೂ ವರದಿ ಉಲ್ಲೇಖಿಸಿದೆ. ಎಸ್‌ಸಿ ಕೋಟಾ ವಿಭಜನೆಗೆ ಒಲವು ತೋರಿದ್ದರಿಂದ ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರದಿಂದ ಅವರು ವಿಮುಖರಾಗಿದ್ದರು.
ಮುನಿಯಪ್ಪ ಮುನಿಸು, ಅಸಮಾಧಾನದ ಕಿಚ್ಚು
ಚಿತ್ರದುರ್ಗದಿಂದ ಬಿಎನ್ ಚಂದ್ರಪ್ಪ ಮತ್ತು ಕೋಲಾರದಿಂದ ಕೆವಿ ಗೌತಮ್ ಅವರಿಗೆ (ಇವರಿಬ್ಬರೂಬ ಎಸ್‌ಸಿ ಎಡ ಸಮುದಾಯಕ್ಕೆ ಸೇರಿದವರು) ಕಾಂಗ್ರೆಸ್ ಟಿಕೆಟ್ ನೀಡಿದ್ದರೂ, ಏಳು ಬಾರಿ ಕೋಲಾರವನ್ನು ಪ್ರತಿನಿಧಿಸಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ಸೂಚಿಸಿದ ಅಭ್ಯರ್ಥಿಗೆ ಟಿಕೆಟ್ ನೀಡದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಇನ್ನು ಒಕ್ಕಲಿಗ ಮತಗಳ ವಿಚಾರದಲ್ಲಿ ಹೇಳುವುದಾದರೆ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತಹಂಚಿಕೆ ಶೇಕಡಾ 4-5 ರಷ್ಟು ಹೆಚ್ಚಳ ಸಾಧಿಸಿದೆ. ಲೋಕಸಭೆ ಚುನಾವಣೆಯಲ್ಲಿಯೂ ಅದೇ ಪ್ರವೃತ್ತಿ ಮುಂದುವರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಆದರೆ, ‘ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಡಿಕೆ ಶಿವಕುಮಾರ್ರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗಿದ್ದರಿಂದ ಒಕ್ಕಲಿಗರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರಷ್ಟೇ’ ಎಂದು ಸಮುದಾಯದ ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ. ಹಾಗಾಗಿ ಚುನಾವಣೆಯಲ್ಲಿ ಅವರ ನಿಲುವು ಏನಿರಬಹುದು ಎಂಬುದು ಕುತೂಹಲದ ವಿಚಾರ.
ಇದನ್ನೂ ಓದಿ: ‘ಕೈ’ಕೊಟ್ಟ ಚೆಂಬನ್ನು ಅಕ್ಷಯ ಪಾತ್ರೆಯಾಗಿಸಿ ಬಡವರಿಗೆ ಕೊಟ್ಟ ಮೋದಿ: ಹೆಚ್‌ಡಿ ದೇವೇಗೌಡ
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿವೈ ವಿಜಯೇಂದ್ರ ಅವರಿಂದಾಗಿ ವೀರಶೈವ ಲಿಂಗಾಯತರು ಬಿಜೆಪಿಯ ಪರ ನಿಲ್ಲುತ್ತಾರೆಯೇ ಎಂಬುದನ್ನೂ ಕಾದು ನೋಡಬೇಕಿದೆ. ಕುರುಬರು ಸಿದ್ದರಾಮಯ್ಯ ಅವರ ಪರವಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಮುಸ್ಲಿಮರಿಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸದೆ ಬೇರೆ ದಾರಿಯಿಲ್ಲ. ಏಕೆಂದರೆ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಅವರಿಗೆ ಯಾವುದೇ ಆಯ್ಕೆಗಳಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ