ಪ್ರಾದೇಶಿಕ ಪಕ್ಷಗಳಿಗೆ ಸೈದ್ಧಾಂತಿಕ ಬದ್ಧತೆ ಪ್ರಶ್ನಿಸಿದ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದ ಎಚ್​ಡಿ ಕುಮಾರಸ್ವಾಮಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 16, 2022 | 1:49 PM

‘ಕಾಂಗ್ರೆಸ್ ಚಿಂತನ ಶಿಬಿರದ ಸಮಾರೋಪ ಸಮಾರಂಭದಲ್ಲಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಅರ್ಥವೇನು ಎಂದು ಅವರು ಪ್ರಾದೇಶಿಕ ಪಕ್ಷಗಳಿಗೆ ಸ್ವಲ್ಪ ಬಿಡಿಸಿ ಹೇಳಬೇಕು’ ಎಂದು ಸವಾಲು ಹಾಕಿದ್ದಾರೆ.

ಪ್ರಾದೇಶಿಕ ಪಕ್ಷಗಳಿಗೆ ಸೈದ್ಧಾಂತಿಕ ಬದ್ಧತೆ ಪ್ರಶ್ನಿಸಿದ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದ ಎಚ್​ಡಿ ಕುಮಾರಸ್ವಾಮಿ
ರಾಹುಲ್ ಗಾಂಧಿ ಮತ್ತು ಎಚ್​.ಡಿ.ಕುಮಾರಸ್ವಾಮಿ
Follow us on

ಬೆಂಗಳೂರು: ‘ಪ್ರಾದೇಶಿಕ ಪಕ್ಷಗಳಿಗೆ ಸೈದ್ಧಾಂತಿಕ ಬದ್ಧತೆ ಇಲ್ಲ’ ಎನ್ನುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಹೇಳಿಕೆಗೆ ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿರುವ ಅವರು, ‘ಕಾಂಗ್ರೆಸ್ ಚಿಂತನ ಶಿಬಿರದ ಸಮಾರೋಪ ಸಮಾರಂಭದಲ್ಲಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಅರ್ಥವೇನು ಎಂದು ಅವರು ಪ್ರಾದೇಶಿಕ ಪಕ್ಷಗಳಿಗೆ ಸ್ವಲ್ಪ ಬಿಡಿಸಿ ಹೇಳಬೇಕು’ ಎಂದು ಸವಾಲು ಹಾಕಿದ್ದಾರೆ.

ಸೈದ್ಧಾಂತಿಕ ಬದ್ಧತೆ ಎಂದರೆ ‘ರಾಜೀವ್‌ ಗಾಂಧಿ ಹತ್ಯೆ ಪ್ರಕರಣದ ಹಿನ್ನೆಲೆಯ ನೆಪ ನೀಡಿ, ಡಿಎಂಕೆ-ಎಲ್‌ಟಿಟಿಇ ಸಂಬಂಧವನ್ನು ಮುನ್ನೆಲೆಗೆ ತಂದು ಆ ಪಕ್ಷವನ್ನು ಸಂಪುಟದಿಂದ ಹೊರಗಿಡಬೇಕು ಎಂದು ಹೇಳಿ ಐ.ಕೆ.ಗುಜ್ರಾಲ್‌ ನೇತೃತ್ವದ ಸಂಯುಕ್ತ ರಂಗ ಸರಕಾರವನ್ನು ಉರುಳಿಸಿದ ಕಾಂಗ್ರೆಸ್‌ ಪಕ್ಷವು ಆಮೇಲೆ ಅದೇ ಪಕ್ಷದ ಹೆಗಲ ಮೇಲೆ ಕೈ ಹಾಕಿದ್ದಾ?’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

‘ಯುಪಿಎ ಸರ್ಕಾರದ ಮೊದಲ ಮತ್ತು ಎರಡನೇ ಅವಧಿಯಲ್ಲಿ ಡಾ.ಮನಮೋಹನ್‌ ಸಿಂಗ್‌ ನೇತೃತ್ವದ ಸಂಪುಟದಲ್ಲಿ ಅದೇ ಡಿಎಂಕೆಯ ಜತೆ 10 ವರ್ಷ ಅಧಿಕಾರದ ಸೋಪಾನ ಹಂಚಿಕೊಂಡಿದ್ದು ಸೈದ್ಧಾಂತಿಕ ಬದ್ಧತೆಯಾ? ಬಿಜೆಪಿ ಸೋಲಿಸುವ ಶಕ್ತಿ ಕಾಂಗ್ರೆಸ್‌ಗೆ ಮಾತ್ರ ಇದೆ ಎನ್ನುವ ರಾಹುಲ್‌ ಗಾಂಧಿ ಅವರು, ತಮ್ಮ ಪಕ್ಷ 10 ವರ್ಷ ಅಧಿಕಾರದ ಸುಖ ಅನುಭವಿಸಿದ್ದು ಪ್ರಾದೇಶಿಕ ಪಕ್ಷಗಳ ಶಕ್ತಿ ಮತ್ತು ದಾಕ್ಷಿಣ್ಯದಿಂದ ಎನ್ನುವುದನ್ನು ಮರೆಯಬಾರದು’ ಎಂದು ಹೇಳಿದ್ದಾರೆ.

‘ಮೈತ್ರಿ ಸರಕಾರ ಮಾಡೋಣ ಎಂದು ಮನೆ ಬಾಗಿಲಿಗೆ ಬಂದು, ಸರಕಾರವನ್ನೂ ಮಾಡಿ ಹಿಂಬಾಗಿಲಿನಿಂದ ಆಪರೇಷನ್‌ ಕಮಲವೆಂಬ ಅನೈತಿಕ ರಾಜಕಾರಣಕ್ಕೆ ‘ಕೈ’ ಜೋಡಿಸಿದ್ದು ಸೈದ್ಧಾಂತಿಕ ಬದ್ಧತೆಯಾ? ಮಿತ್ರಪಕ್ಷಗಳನ್ನೇ ನುಂಗಿಹಾಕುವುದೂ ಸೈದ್ಧಾಂತಿಕ ರಾಜಕಾರಣವಾ? ಪ್ರಾದೇಶಿಕ ಪಕ್ಷಗಳ ಭೀತಿ ಎದುರಿಸುತ್ತಿರುವ ಫೋಬಿಯಾದಲ್ಲಿರುವ ಕಾಂಗ್ರೆಸ್ ಪಕ್ಷವು ಆಂಧ್ರ, ತೆಲಂಗಾಣ‌, ಒಡಿಶಾ ಸೇರಿದಂತೆ ಯಾವ ರಾಜ್ಯಗಳಲ್ಲಿ ಹೇಳಹೆಸರಿಲ್ಲದಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಕೊನೆಗಾಲದಲ್ಲಿದೆ. ಇದನ್ನು ರಾಹುಲ್‌ಗಾಂಧಿ ಅರ್ಥ ಮಾಡಿಕೊಂಡರೆ ಒಳ್ಳೆಯದು’ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗೆ ಲಿಂಕ್ ಕ್ಲಿಕ್ ಮಾಡಿ