ಅಮಿತ್ ಶಾ, ಜೆಪಿ ನಡ್ಡಾ ಭೇಟಿಯಾದ ಕುಮಾರಸ್ವಾಮಿ: ಲೋಕಸಭೆ ಸೀಟು ಹಂಚಿಕೆ ಯಾವಾಗ ಫೈನಲ್?

| Updated By: ಗಣಪತಿ ಶರ್ಮ

Updated on: Jan 18, 2024 | 9:55 AM

ಜೆಡಿಎಸ್ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ನಂತರವೇ ಸೀಟು ಹಂಚಿಕೆ ಮತ್ತು ಎನ್​ಡಿಎ ಮೈತ್ರಿಕೂಟದೊಂದಿಗೆ ಜೆಡಿಎಸ್ ಔಪಚಾರಿಕವಾಗಿ ಸೇರ್ಪಡೆಗೊಳ್ಳುವ ಮಾತುಕತೆ ನಡೆಯಲಿದೆ ಎಂದು ಅಮಿತ್ ಶಾ ಅವರು ಕುಮಾರಸ್ವಾಮಿಗೆ ತಿಳಿಸಿದ್ದಾರೆ.

ಅಮಿತ್ ಶಾ, ಜೆಪಿ ನಡ್ಡಾ ಭೇಟಿಯಾದ ಕುಮಾರಸ್ವಾಮಿ: ಲೋಕಸಭೆ ಸೀಟು ಹಂಚಿಕೆ ಯಾವಾಗ ಫೈನಲ್?
ಅಮಿತ್ ಶಾ, ಜೆಪಿ ನಡ್ಡಾ ಭೇಟಿಯಾದ ಕುಮಾರಸ್ವಾಮಿ
Follow us on

ಬೆಂಗಳೂರು, ಜನವರಿ 18: ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಬುಧವಾರ ರಾತ್ರಿ ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ (Amit Shah) ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ನಂತರ ಸೀಟು ಹಂಚಿಕೆ ಚರ್ಚೆ ನಡೆಯಲಿದೆ ಎಂದು ಸಭೆಯ ನಂತರ ಕುಮಾರಸ್ವಾಮಿ ಹೇಳಿದರು.

ಕುಮಾರಸ್ವಾಮಿ ಅವರು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಮತ್ತು ರಾಜ್ಯಸಭಾ ಮಾಜಿ ಸಂಸದ ಕುಪೇಂದ್ರ ರೆಡ್ಡಿ ಅವರೊಂದಿಗೆ ಅಮಿತ್ ಶಾ ಮನೆಯಲ್ಲಿ ಬಿಜೆಪಿ ಕೇಂದ್ರ ನಾಯಕರನ್ನು ಭೇಟಿ ಮಾಡಿದರು.

ಬಿಜೆಪಿ-ಜೆಡಿಎಸ್ ನಾಯಕರು ಸುಮಾರು 45 ನಿಮಿಷಗಳ ಕಾಲ ಪ್ರಸ್ತುತ ರಾಜಕೀಯ ಪರಿಸ್ಥಿತಿ ಸೇರಿದಂತೆ ರಾಜ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು.

ಜನವರಿ 22ರ ನಂತರ ಸೀಟು ಹಂಚಿಕೆ ಚರ್ಚೆ

ಜೆಡಿಎಸ್ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ನಂತರವೇ ಸೀಟು ಹಂಚಿಕೆ ಮತ್ತು ಎನ್​ಡಿಎ ಮೈತ್ರಿಕೂಟದೊಂದಿಗೆ ಜೆಡಿಎಸ್ ಔಪಚಾರಿಕವಾಗಿ ಸೇರ್ಪಡೆಗೊಳ್ಳುವ ಮಾತುಕತೆ ನಡೆಯಲಿದೆ ಎಂದು ಅಮಿತ್ ಶಾ ಅವರು ಕುಮಾರಸ್ವಾಮಿಗೆ ತಿಳಿಸಿದ್ದಾರೆ.

ರಾಜ್ಯಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ನಾವು ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಿದ್ದೇವೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ತರಲು ಬಿಜೆಪಿ ಮತ್ತು ಜೆಡಿಎಸ್ ಶ್ರಮಿಸಲಿವೆ ಎಂದು ಕುಮಾರಸ್ವಾಮಿ ಹೇಳಿದರು.

6 ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಜೆಡಿಎಸ್

ಬಿಜೆಪಿ ನಾಯಕರ ಜತೆಗಿನ ಚರ್ಚೆ ವೇಳೆ ಜೆಡಿಎಸ್​ಗೆ ಕನಿಷ್ಠ ನಾಲ್ಕು ಸ್ಥಾನಗಳ ಖಾತರಿ ದೊರೆತಿದೆ ಎನ್ನಲಾಗಿದೆ. ಆದರೆ, ಇನ್ನೆರಡು ಸ್ಥಾನಗಳಿಗೆ ಚೌಕಾಸಿ ಮಾಡುವತ್ತ ಜೆಡಿಎಸ್ ಕಣ್ಣಿಟ್ಟಿದೆ. ಮಂಡ್ಯ, ಹಾಸನ, ತುಮಕೂರು, ಕೋಲಾರದಲ್ಲಿ ಜೆಡಿಎಸ್ ಗೆಲ್ಲುವ ನಿರೀಕ್ಷೆ ಇದೆ. ಪ್ರಾದೇಶಿಕ ಪಕ್ಷವು ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಕೂಡ ಪಕ್ಷದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲು ಜೆಡಿಎಸ್ ಚಿಂತನೆ ನಡೆಸಿದೆ. ಆದರೆ, ಇದಕ್ಕೆ ಎನ್​ಡಿಎ ಮೈತ್ರಿಕೂಟದ ಸಮ್ಮತಿಯೂ ಬೇಕಾಗಿದೆ.

ಇದನ್ನೂ ಓದಿ: ಸರ್ಕಾರಿ ನಿವಾಸಕ್ಕೆ ಆರ್ ಅಶೋಕ ಮನವಿ: ಡಿಕೆ ಶಿವಕುಮಾರ್​​ಗೆ ಹಂಚಿಕೆಯಾಗಿರುವ ನಿವಾಸಕ್ಕೇ ಬೇಡಿಕೆ

ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ಅಧ್ಯಕ್ಷ ಹೆಚ್​ಡಿ ದೇವೇಗೌಡ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಮಂಡ್ಯದಿಂದ ಕಣಕ್ಕಿಳಿಯುವಂತೆ ಜೆಡಿಎಸ್‌ನ ಹಲವು ಮುಖಂಡರು ಕುಮಾರಸ್ವಾಮಿ ಅವರನ್ನು ಒತ್ತಾಯಿಸುತ್ತಿದ್ದರೂ ಅವರ ಉಮೇದುವಾರಿಕೆ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ವರದಿಗಳ ಪ್ರಕಾರ, ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ತಮ್ಮ ಸಂಪುಟಕ್ಕೆ ಸೇರ್ಪಡೆಗೊಳ್ಳುವಂತೆ ಕುಮಾರಸ್ವಾಮಿ ಅವರನ್ನು ಪ್ರಧಾನಿ ಮೋದಿ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ