ಕಾಂಗ್ರೆಸ್ ಶಾಸಕ ಹೆಚ್ಸಿ ಬಾಲಕೃಷ್ಣ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು, ಏನಿದು ಪ್ರಕರಣ?
HC Balakrishna Statement: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿದರೆ ಗ್ಯಾರಂಟಿ ಯೋಜನೆಗಳು ರದ್ದಾಗಬಹುದು ಎನ್ನುವ ಅರ್ಥದಲ್ಲಿ ಹೇಳಿದ್ದ ಕಾಂಗ್ರೆಸ್ ಶಾಸಕ ಹೆಚ್ಸಿ ಬಾಲಕೃಷ್ಣಗೆ ಇದೀಗ ಸಂಕಷ್ಟ ಎದುರಾಗಿದೆ. ಮತದಾರರಿಗೆ ಬ್ಲ್ಯಾಕ್ ಮೇಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಬಾಲಕೃಷ್ಣ ವಿರುದ್ಧ ಜೆಡಿಎಸ್ ದೂರು ನೀಡಿದೆ.
ಬೆಂಗಳೂರು, (ಫೆಬ್ರವರಿ 02): ಲೋಕಸಭಾ ಚುನಾವಣೆಯಲ್ಲಿ (Loksabha Elections 2024) ಕಾಂಗ್ರೆಸ್‌ಗೆ ಮತ ಹಾಕಿದ್ರೆ ಗ್ಯಾರಂಟಿಗಳು ಇರುತ್ತೆ. ಇಲ್ಲದಿದ್ದರೆ ಇಲ್ಲ ಎನ್ನುವ ಅರ್ಥದಲ್ಲಿ ಶಾಸಕ ಹೆಚ್.ಸಿ.ಬಾಲಕೃಷ್ಣ (HC Balakrishna) ನೀಡಿರುವ ಹೇಳಿಕೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಜೆಡಿಎಸ್ ಹಾಗೂ ಬಿಜೆಪಿ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಇದೀಗ ಜೆಡಿಎಸ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಮಾಗಡಿ ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಶೇಷಾದ್ರಿಪುರಂ ರಸ್ತೆಯಲ್ಲಿರುವ ಮುಖ್ಯ ಚುನಾವಣಾ ಆಯೋಗ ಕಚೇರಿ ತೆರಳಿ ದೂರು ನೀಡಿರುವ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್‌ಗೆ ಮತ ಹಾಕಿದ್ರೆ ಗ್ಯಾರಂಟಿಗಳು ಇರುತ್ತೆ. ಒಂದು ವೇಳೆ ಕಾಂಗ್ರೆಸ್‌ಗೆ ಮತ ಹಾಕಿಲ್ಲ ಅಂದರೆ ಗ್ಯಾರಂಟಿ ಇರಲ್ಲ ಎನ್ನುವ ಅರ್ಥದಲ್ಲಿ ಕಾಂಗ್ರೆಸ್ ಶಾಸಕ ಹೆಚ್ಸಿ ಬಾಲಕೃಷ್ಣ ಹೇಳಿದ್ದಾರೆ. ಈ ಮೂಲಕ ರಾಜ್ಯದ ಜನತೆಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?
ದೂರು ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಿಖಿಲ್, ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳನ್ನ ಘೋಷಣೆ ಮಾಡಿತ್ತು. ಹೀಗಾಗಿ ರಾಜ್ಯದ ಜನರು ಕಾಂಗ್ರೆಸ್ ಗೆ ಆಶೀರ್ವಾದ ಮಾಡಿದ್ರು . ಆದ್ರೆ, ಈಗ ಗ್ಯಾರಂಟಿ ಸಂಬಂಧ ಕಾಂಗ್ರೆಸ್ ನವರು ಬಹಿರಂಗ ವೇದಿಕೆಯಲ್ಲಿ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಗ್ಯಾರಂಟಿಗಳನ್ನ ಮುಂದಿಟ್ಟುಕೊಂಡು ಬ್ಲಾಕ್ ಮೈಲ್ ಸಂಸ್ಕೃತಿ ಅನುಸರಿಸುತ್ತಿದ್ದಾರೆ. ಮತ ಹಾಕಲಿಲ್ಲ ಅಂದ್ರೆ ಗ್ಯಾರಂಟಿಗಳನ್ನ ನಿಲ್ಲಿಸೋದಾಗಿ ಹೆದರಿಸುತ್ತಿದ್ದಾರೆ. ಇದು ಖಂಡನೀಯ, ಹೀಗಾಗಿ ಅವರ ವಿರುದ್ಧ ಕ್ರಮಕ್ಕಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ದೂರಿನಲ್ಲೇನಿದೆ?
ಕರ್ನಾಟಕ ಜೆಡಿಎಸ್ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತರೆ ಈಗಾಗಲೇ ಜಾರಿ ಮಾಡಿರುವ 5 ಗ್ಯಾರಂಟಿಗಳು ರದ್ದಾಗುತ್ತವೆ ಎಂದು ಚುನಾವಣೆಗೆ ಮೊದಲೇ ಜನತೆಗೆ ಶಾಸಕರು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಕೃಷ್ಣ ಅವರ ಶಾಸಕತ್ವವನ್ನು ರದ್ದು ಮಾಡಬೇಕು ಹಾಗೂ ಕಾಂಗ್ರೆಸ್ ಪಕ್ಷದ ಮಾನ್ಯತೆಯನ್ನೂ ರದ್ದುಪಡಿಸಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾಗೆ ಮನವಿ ಸಲ್ಲಿಸಲಾಗಿದೆ.
ಬಾಲಕೃಷ್ಣ ಏನು ಹೇಳಿದ್ದರು ?
ಕಳೆದ ಜನವರಿ 30ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕು ಕುದೂರು ಹೋಬಳಿಯ ಶ್ರೀಗಿರಿಪುರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ್ದ ಬಾಲಕೃಷ್ಣ, ಬಿಜೆಪಿಯವರು ಮಂದಿರದ ಹೆಸರಿನಲ್ಲಿ ಅಕ್ಷತೆ ನೀಡಿ ಮತ ಕೇಳುತ್ತಿದ್ದಾರೆ. ನಾವು ಐದು ಉಚಿತ ಗ್ಯಾರಂಟಿಗಳನ್ನು ನೀಡಿ ಮತ ಕೇಳುತ್ತಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ದೊರೆಯುವಂತೆ ಮಾಡದಿದ್ದರೆ ಗ್ಯಾರಂಟಿಗಳ ಬಗ್ಗೆ ಜನರಿಗೆ ಒಲವಿಲ್ಲ ಎಂಬ ಸಂದೇಶ ರವಾನೆಯಾಗುತ್ತದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರ ಜತೆಗೂ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದ್ದರು.
ಸರ್ಮರ್ಥಿಸಿಕೊಂಡಿದ್ದ ಬಾಲಕೃಷ್ಣ
ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳಿಗೆ ಮತ ನೀಡಬೇಕೇ ಹೊರತು ಬಿಜೆಪಿಯವರ ಅಕ್ಷತೆಗಲ್ಲ ಎಂಬುದಷ್ಟೇ ನಮ್ಮ ಉದ್ದೇಶ. ಮತ ಹಾಕಲೇಬೇಕು, ಗ್ಯಾರಂಟಿ ಯೋಜನೆ ರದ್ದುಮಾಡಿಯೇ ಬಿಡುತ್ತೇವೆ ಎಂದು ಹೇಳಿಲ್ಲ. ನಮ್ಮದು ಬ್ಲ್ಯಾಕ್ಮೇಲ್ ಸಂಸ್ಕೃತಿ ಅಲ್ಲ. ನಾವು ಕೆಲಸ ಮಾಡಿದ್ದೇವೆ, ನಮಗೆ ಮತ ನೀಡಿ ಎಂದು ಕೇಳುತ್ತಿದ್ದೇವಷ್ಟೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.
ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Fri, 2 February 24