ಕೊಪ್ಪಳ: ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದ್ದು, ರಾಜಕೀಯ ಪಕ್ಷಗಳ ನಡುವೆ ಕುರ್ಚಿಗಾಗಿ ಕುಸ್ತಿ ನಡೆಯುತ್ತಿದೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಜೆ.ಡಿ.ಎಸ್ ರಾಜ್ಯದ್ಯಕ್ಷ ಸಿ.ಎಮ್ ಇಬ್ರಾಹಿಂ (C.M.Ibrahim), ಕಾಂಗ್ರೆಸ್ನವರಿಗೆ ಅವರ ಅವ್ವ ಸೋನಿಯಾ ಗಾಂಧಿ ಚಿಂತೆ, ಬಿಜೆಪಿಯವರಿಗೆ ಅವರಪ್ಪ ಮೋದಿ ಅವರ ಚಿಂತೆಯಾಗಿಬಿಟ್ಟಿದೆ ಎಂದು ವ್ಯಂಗ್ಯವಾಡಿದರು. ಅಲ್ಲದೆ ನಾವು ಈಗಾಗಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದೇವೆ. ನಮ್ಮ ಸಿಎಂ ಅಭ್ಯರ್ಥಿ ಕುಮಾರಸ್ವಾಮಿ (H.D.Kumaraswami), ಈ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಆದರೆ ಉಪಮುಖ್ಯಮಂತ್ರಿ ಯಾರೆಂದು ಚರ್ಚೆ ನಡೆಸುತ್ತೇವೆ ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಿಲ್ಲ, ಅವರನ್ನು ಪಕ್ಷದಿಂದ ದಬ್ಬಲಾಗಿದೆ. ಅಲ್ಲದೆ ಪಕ್ಷದವರು ಘೋಷಣೆ ಮಾಡಿಲ್ಲದಿದ್ದರೂ ಸ್ವತಃ ಯಡಿಯೂರಪ್ಪ ಅವರೇ ಮಗನಿಗಾದರೂ ಟಿಕೆಟ್ ಕೊಡಲಿ ಎಂದು ಸ್ವಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಯಡಿಯೂರಪ್ಪ ಅವರಿಗೆ ಎಂತಹ ಕಾಲ ಬಂತು ನೋಡಿ ಎಂದರು.
ಸಿದ್ದರಾಮಯ್ಯ ತಬ್ಬಲಿ ನೀನಾದೆಯಾ ಮಗನೆ
ಬಿಜೆಪಿ ಅಧಿಕಾರಕ್ಕೆ ಬರಲು ಲಿಂಗಾಯತ ಮತಗಳು ಕಾರಣವಾಗಿದೆ. ವೀರಶೈವ ಸಮಾಜದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದ ಇಬ್ರಾಹಿಂ, ಅಲ್ಪ ಸಂಖ್ಯಾತರು, ದಲಿತರು ಕಾಂಗ್ರೆಸ್ ಪಕ್ಷವನ್ನು ಬಿಟ್ಟಿದ್ದಾರೆ. ಸಿದ್ದರಾಮಯ್ಯ ತಬ್ಬಲಿ ನೀನಾದೆಯಾ ಮಗನೆ ಎಂದರು. ಅಲ್ಲದೆ, ಸಿದ್ದರಾಮಯ್ಯ ಬಗ್ಗೆ ನಾನು ಪಕ್ಷ ಬಿಡುವಾಗಲೇ ಹೇಳಿದ್ದೆ, ಸಿದ್ದರಾಮಯ್ಯ ಅವರಿಗೆ ಚುನಾವಣೆಗೆ ನಿಲ್ಲಲು ಜಾಗ ಇರಲಿಲ್ಲ. ಹೀಗಾಗಿ ನಾನೇ ಬದಾಮಿಗೆ ಕರೆದುಕೊಂಡು ಬಂದೆ. ಒಂದು ಲೆಕ್ಕದಲ್ಲಿ ಸಿದ್ದರಾಮಯ್ಯ ಅವರ ಗೆಲುವಿಗೆ ನಾನೇ ಕಾರಣ ಎಂದರು.
ಸಿದ್ದರಾಮಯ್ಯ ಅವರ ಬಗ್ಗೆ ನನಗೆ ಅನುಕಂಪವಿದೆ. ಸಿದ್ದರಾಮಯ್ಯ ವಿಧಾನಸಭೆಗೆ ಬರಬೇಕು. ಆದರೆ ಅವರು ದಾರಿ ತಪ್ಪಿದ ಹಿನ್ನೆಲೆ ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಎಲ್ಲಿ ನಿಂತರೂ ಗೆಲ್ಲುವುದು ಕಷ್ಟ ಎಂದರು. ಹೊರರಾಜ್ಯದ ಮುಸ್ಲಿಂ ಕ್ಷೌರಿಕರನ್ನು ಹೊರದಬ್ಬಿ ಎಂದು ಹೇಳಿಕೆ ನೀಡಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ಗೆ ತಿರುಗೇಟು ನೀಡಿದ ಇಬ್ರಾಹಿಂ, ಮುತಾಲಿಕ್ ತಲೆಯಲ್ಲಿ ಕೂದಲೇ ಇಲ್ಲ. ಇನ್ನೆಲ್ಲಿ ಚೌರ ಮಾಡೋದು. ಅವರು ಮೊದಲು ತಲೆ ಕೂದಲು ಬೆಳಸಿಕೊಳ್ಳಲಿ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿಯಿಂದ 80 ಜನರ ಜೆಡಿಎಸ್ಗೆ
ನವೆಂಬರ್ನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಬಳ್ಳಾರಿ ಜಿಲ್ಲೆಯ ಚುನಾವಣಾ ಫಲಿತಾಂಶ ಆಶ್ಚರ್ಯಕರವಾಗಿರಲಿದೆ. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸುಮಾರು 70 ರಿಂದ 80 ಜನರು ಜೆಡಿಎಸ್ ಪಕ್ಷ ಸೇರಲಿದ್ದಾರೆ. ಇದರಲ್ಲಿ ಹಾಲಿ ಶಾಸಕರು ಕೂಡ ಇದ್ದಾರೆ ಎಂದರು. ಅತಂತ್ರ ಫಲಿತಾಂಶ ಬಂದರೆ ನಿಮ್ಮ ನಿಲುವು ಯಾರ ಕಡೆ ಇರಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಇಬ್ರಾಹಿಂ, ನಮ್ಮ ಗುರಿ ಈ ಬಾರಿ ಪಕ್ಷ ಅಧಿಕಾರಕ್ಕೆ ತರುವುದಾಗಿದೆ. ನಾವು ಈಗಾಗಲೇ ಮಹಿಮಾ ಪಾಟೀಲ್ ಜೊತೆ ಮಾತುಕತೆ ನಡೆಸಿದ್ದೇವೆ. ವೀರೇಂದ್ರ ಪಾಟೀಲ್ ಅವರ ಮಗನ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದರು.
Published On - 2:20 pm, Sat, 23 July 22