ಜಮೀರ್ vs ಡಿಕೆಶಿ: ಒಕ್ಕಲಿಗ ಸಮುದಾಯದ ಬಗ್ಗೆ ಜಮೀರ್ ಅಹಮದ್ ಹೇಳಿಕೆಗೆ ಆದಿಚುಂಚನಗಿರಿ ಶ್ರೀಗಳಿಂದ ತೀವ್ರ ಆಕ್ಷೇಪ
ಒಕ್ಕಲಿಗ ಸಮುದಾಯದ ಬಗ್ಗೆ ಮಾತನಾಡಿದರೂ ನಾಯಕರು ಸುಮ್ಮನಿರುವ ಬಗ್ಗೆ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಅವರ ಬಗ್ಗೆ ಚಾಮರಾಜಪೇಟೆ ಶಾಸಕ ಬಿ.ಝೆಡ್ ಜಮೀರ್ ಅಹಮದ್ ಖಾನ್ (Zameer Ahmed Khan) ಲಘುವಾಗಿ ಮಾತನಾಡಿರುವುದು ಮತ್ತು ಈ ವೇಳೆ ಒಕ್ಕಲಿಗ ಸಮುದಾಯದ ಬಗ್ಗೆ ಅವರು ನೀಡಿರುವ ಹೇಳಿಕೆಯ ಬಗ್ಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ (Nirmalananda Natha Swamiji) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಸಮುದಾಯದ ಬಗ್ಗೆ ಜಮೀರ್ ನೀಡಿರುವ ಹೇಳಿಕೆ ಸರಿ ಅಲ್ಲ’ ಎಂದು ಹೇಳಿರುವ ಅವರು, ಒಕ್ಕಲಿಗ ಸಮುದಾಯದ ಬಗ್ಗೆ ಮಾತನಾಡಿದರೂ ನಾಯಕರು ಸುಮ್ಮನಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಕಾಂಗ್ರೆಸ್ನ ಚೆಲುವರಾಯಸ್ವಾಮಿ, ಜೆಡಿಎಸ್ನ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿಯ ಆರ್.ಅಶೋಕ್ ಅವರೊಂದಿಗೆ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಮೂಲಗಳು ಹೇಳಿವೆ. ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ ನಂತರ ಬಹಿರಂಗ ಹೇಳಿಕೆ ನೀಡಿದ್ದ ಚೆಲುವರಾಯಸ್ವಾಮಿ, ‘ಜಮೀರ್ ಹೀಗೆ ಮಾತನಾಡಬಾರದಿತ್ತು. ಅವರ ಹೇಳಿಕೆ ತಪ್ಪು’ ಎಂದು ಟೀಕಿಸಿದ್ದರು. ಇತರ ಮುಂಚೂಣಿ ಒಕ್ಕಲಿಗ ನಾಯಕರೂ ಇಂದು ಅಥವಾ ನಾಳೆ ಜಮೀರ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸುವ ಸಾಧ್ಯತೆಯಿದೆ.
ಚೆಲುವರಾಯಸ್ವಾಮಿ ಅವರು ಶನಿವಾರ (ಜುಲೈ 24) ತಡರಾತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಜಮೀರ್ ಅಹಮದ್ ಖಾನ್ ಹೇಳಿಕೆಯ ಬಗ್ಗೆ ಡಿಕೆಶಿ ತೀವ್ರ ಅಸಮಾಧಾನ ಹೊರಹಾಕಿದರು. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಬಗ್ಗೆ ನನಗೆ ಗೌರವವಿದೆ. ಹೀಗಾಗಿ ನಾನು ಏನೂ ಮಾತನಾಡುತ್ತಿಲ್ಲ, ಏನೂ ಮಾಡುತ್ತಿಲ್ಲ. ಬೇರೆ ಯಾರಾದರೂ ಹೀಗೆ ಮಾತನಾಡಿದ್ದರೆ ಪಕ್ಷದಿಂದಲೇ ಹೊರಗೆ ಹಾಕುತ್ತಿದ್ದೆ. ಮುಸ್ಲಿಂ ಸಮಾಜಕ್ಕೆ ಬೆಲೆಕೊಟ್ಟು ಎಲ್ಲವನ್ನೂ ಸಹಿಸಿಕೊಂಡಿದ್ದೇನೆ ಎಂದು ಡಿಕೆಶಿ ನೊಂದು ನುಡಿದರು.
ಜಮೀರ್ಗೆ ಶೋಕಾಸ್ ನೊಟೀಸ್ ಸಾಧ್ಯತೆ
ಕರ್ನಾಟಕದ ಮುಂದಿನ ಮುಖ್ಯಮಂತ್ರಿಯ ಬಗ್ಗೆ ಮಾತನಾಡಬಾರದು ಎಂದು ನಿರ್ಬಂಧ ವಿಧಿಸಿದ್ದರೂ ಹೇಳಿಕೆ ನೀಡಿರುವ ಕುರಿತು ಜಮೀರ್ ಅಹಮದ್ ಖಾನ್ಗೆ ಇಂದು (ಜುಲೈ 24) ಕೆಪಿಸಿಸಿ ಶೋಕಾಸ್ ನೊಟೀಸ್ ಜಾರಿ ಮಾಡುವ ಸಾಧ್ಯತೆಯಿದೆ. ಹೈಕಮಾಂಡ್ ಸೂಚನೆ ಉಲ್ಲಂಘಿಸಿ ಜಮೀರ್ ಹೇಳಿಕೆ ನೀಡಿದ್ದಾರೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಪಕ್ಷದ ಇಮೇಜ್ಗೆ ಧಕ್ಕೆಯಾಗಿದೆ ಎಂದು ಕಾಂಗ್ರೆಸ್ನ ಹಿರಿಯ ನಾಯಕರು ಆಕ್ಷೇಪಿಸಿದ್ದಾರೆ. ನೊಟೀಸ್ಗೆ ಜಮೀರ್ ನೀಡುವ ಉತ್ತರ ಆಧರಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲು ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ (ಎಐಸಿಸಿ) ಶಿಫಾರಸು ಮಾಡುವ ಸಾಧ್ಯತೆಯಿದೆ.
ಕಾಂಗ್ರೆಸ್ನಲ್ಲಿ ಬಿರುಕು: ಡಿಕೆಶಿ ಆತಂಕ
ಸಿದ್ದರಾಮಯ್ಯ ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ಬಗ್ಗೆ ಪದೇಪದೇ ನೀಡುತ್ತಿರುವ ಹೇಳಿಕೆಗಳ ಬಗ್ಗೆ ಡಿ.ಕೆ.ಶಿವಕುಮಾರ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಮೈಸೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ನೀಡಿದ್ದ ಹೇಳಿಕೆಯ ಬಗ್ಗೆಯೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇಂಥ ಹೇಳಿಕೆಗಳಿಂದಾಗಿ ಮತ್ತೆ ಮತ್ತೆ ಪಕ್ಷದಲ್ಲಿ ಬಿರುಕು ಕಾಣಿಸಿಕೊಳ್ಳಲಿದೆ ಅಷ್ಟೇ. ನಾನೊಬ್ಬನೇ ಎಷ್ಟು ಎಂದು ಹೊಡೆದಾಡಲಿ. ಎಲ್ಲರೂ ಇದೇ ರೀತಿ ಮಾಡುತ್ತಾ ಸಾಗಿದರೆ ಹೇಗೆ? ಬಿಜೆಪಿಗಿಂತ ಕಾಂಗ್ರೆಸ್ಗೆ ಅಲ್ಪ ಮುನ್ನಡೆ ಇರುವುದನ್ನು ನಮ್ಮ ಸರ್ವೆ ಹೇಳಿದೆ. ಕಾಂಗ್ರೆಸ್ ಶಾಸಕರ ಸಂಖ್ಯೆ ಮತ್ತಷ್ಟು ಹೆಚ್ಚಿಸಲು ನಾವು ಒಗ್ಗೂಡಿ ಪ್ರಯತ್ನಿಸಬೇಕು. ಈ ರೀತಿ ಅನಗತ್ಯ ಹೇಳಿಕೆಗಳನ್ನು ನೀಡುತ್ತಾ ಹೋದರೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಎಂದು ಚೆಲುವರಾಯಸ್ವಾಮಿ ಬಳಿ ಡಿಕೆಶಿ ಅಸಮಾಧಾನ ಹೊರಹಾಕಿದ್ದಾರೆ.
ಜಮೀರ್ ಆಕ್ಷೇಪ
ಮುಂದಿನ ಮುಖ್ಯಮಂತ್ರಿ ಚರ್ಚೆಗೆ ಚಾಲನೆ ಕೊಟ್ಟವರೇ ಡಿ.ಕೆ.ಶಿವಕುಮಾರ್ ಎಂದು ಜಮೀರ್ ಅಹಮದ್ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ. ‘ಸಮುದಾಯದ ಕಾರ್ಯಕ್ರಮದಲ್ಲಿ ಬೆಂಬಲ ಕೋರಿದ್ದು ಯಾರು’ ಎಂದು ಜಮೀರ್ ಪ್ರಶ್ನಿಸಿದ್ದರು. ‘ರಾಜ್ಯದೆಲ್ಲೆಡೆ ನಾನು ಪ್ರವಾಸ ಮಾಡಿದ್ದೇನೆ. ಎಲ್ಲ ಜನರೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಬೇಕು ಎನ್ನುತ್ತಿದ್ದಾರೆ. ಅದನ್ನೇ ನಾನು ಹೇಳಿದ್ದೇನೆ. ಮುಂದಿನ ಸಿಎಂ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ಹೇಳುವ ಮೂಲಕ ಡಿಕೆಶಿ ಅವರ ಮಾತಿಗೆ ಎದಿರೇಟು ಕೊಟ್ಟಿದ್ದರು.
Published On - 9:27 am, Sun, 24 July 22